ಬೃಹತ್ ಆರೋಗ್ಯ ಮೇಳ: 12 ಸಾವಿರಕ್ಕೂ ಅಧಿಕ ಮಂದಿ ತಪಾಸಣೆ

KannadaprabhaNewsNetwork |  
Published : Jan 30, 2024, 02:03 AM IST
ಆರೋಗ್ಯ ಮೇಳದ ಚಿತ್ರಗಳ | Kannada Prabha

ಸಾರಾಂಶ

ರಾಜ್ಯ ಸರ್ಕಾರದಿಂದಲೇ ಇದೇ ಮೊದಲ ಬಾರಿಗೆ ಬೃಹತ್ ಆರೋಗ್ಯ ಶಿಬಿರವನ್ನು ಕೊಳ್ಳೇಗಾಲದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿತ್ತು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ಬೃಹತ್ ಆರೋಗ್ಯ ಮೇಳದಲ್ಲಿ 12047 ಮಂದಿ ರೋಗಿಗಳು ವಿವಿಧ ಖಾಯಿಲೆಗಳ ತಪಾಸಣೆಗೆ ಒಳಪಟ್ಟರು.

ರಕ್ತದಾನ ಶಿಬಿರ, ಮಧುಮೇಹ, ರಕ್ತದೊತ್ತಡ ಪರೀಕ್ಷೆ ಆಯೋಜನೆ । ಏಕಬಳಕೆ ಡಯಾಲಿಸಿಸ್‌ ಕೇಂದ್ರ ತೆರೆಯಲು ಭರವಸೆ ನೀಡಿದ ಸಚಿವಕನ್ನಡಪ್ರಭ ವಾರ್ತೆ ಚಾಮರಾಜನಗರ ರಾಜ್ಯ ಸರ್ಕಾರದಿಂದಲೇ ಇದೇ ಮೊದಲ ಬಾರಿಗೆ ಬೃಹತ್ ಆರೋಗ್ಯ ಶಿಬಿರವನ್ನು ಕೊಳ್ಳೇಗಾಲದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ಬೃಹತ್ ಆರೋಗ್ಯ ಮೇಳದಲ್ಲಿ 12047 ಮಂದಿ ರೋಗಿಗಳು ವಿವಿಧ ಖಾಯಿಲೆಗಳ ತಪಾಸಣೆಗೆ ಒಳಪಟ್ಟರು.

ಬೃಹತ್ ಆರೋಗ್ಯ ಶಿಬಿರದಲ್ಲಿ ವೈದ್ಯಕೀಯ ವಿಭಾಗ, ಶಸ್ತ್ರ ಚಿಕಿತ್ಸೆ, ಮಕ್ಕಳ ವಿಭಾಗ, ಎಲುಬು ಮತ್ತು ಕೀಲು, ಮಾನಸಿಕ ರೋಗ, ಮೂತ್ರಪಿಂಡ, ಕಿವಿ, ಮೂಗು, ಗಂಟಲು, ಕಣ್ಣಿನ ವಿಭಾಗ, ಚರ್ಮರೋಗ, ದಂತ ವಿಭಾಗ, ಶ್ವಾಸಕೋಶ ವಿಭಾಗ, ಕ್ಯಾನ್ಸರ್, ಹೃದಯ, ಸ್ಕ್ಯಾನಿಂಗ್, ಸ್ತ್ರೀ ರೋಗ, ಎಂಡೋಕ್ರೀನೊಲಜಿ ಮತ್ತು ಆಯುರ್ವೇದ ವಿಭಾಗಗಳಲ್ಲಿ 7 ಸಾವಿರಕ್ಕೂ ಅಧಿಕ ಮಂದಿ ಜನರು ತಪಾಸಣೆಗೆ ಒಳಪಟ್ಟರು.

ಮೇಳದಲ್ಲಿ ರಕ್ತದಾನ ಶಿಬಿರ, ಉಚಿತ ಪ್ರಯೋಗಾಲಯ ಪರೀಕ್ಷೆ, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ಪರೀಕ್ಷೆ, ಆಯುಷ್ಮಾನ್ ಭಾರತ್ ಪಿಎಂಜೆಎವೈ, ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಕಾರ್ಡ್ ನೋಂದಣಿ, ನೇತ್ರದಾನ ನೋಂದಣಿ, ಅಂಗಾಂಗ ದಾನ ನೋಂದಣಿ, ಕ್ಷಯ ರೋಗ ಪರೀಕ್ಷೆ, ಕೋವಿಡ್ ಪರೀಕ್ಷೆ, ಯೋಗ ಮತ್ತು ಧ್ಯಾನವನ್ನು ಆಯೋಜಿಸಲಾಗಿತ್ತು.

ಜಿಲ್ಲೆಯ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ನೋಂದಾಯಿಸಿದ್ದ ರೋಗಿಗಳನ್ನು ವಾಹನ ವ್ಯವಸ್ಥೆ ಮಾಡಿ ಕರೆತರಲಾಗಿತ್ತು. ಅಲ್ಲದೇ ಸಾವಿರಾರು ಅಧಿಕ ರೋಗಿಗಳು ನೇರವಾಗಿ ಆರೋಗ್ಯ ಮೇಳಕ್ಕೆ ಆಗಮಿಸಿ ಪರೀಕ್ಷೆಗೆ ಒಳಪಟ್ಟರು. ಆರೋಗ್ಯ ಮೇಳದಲ್ಲಿ 100ಕ್ಕೂ ಹೆಚ್ಚು ತಜ್ಞ ವೈದ್ಯರು, ಒಂದು ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು ಕುಡಿಯುವ ನೀರು, ಮಧ್ಯಾಹ್ನದ ಊಟ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಚಾಲನೆ: ಬೃಹತ್ ಆರೋಗ್ಯ ಶಿಬಿರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿ ಮಾತನಾಡಿದ ಸಚಿವರು ಹನೂರು, ರಾಮಾಪುರದಲ್ಲಿ ಏಕಬಳಕೆ ಡಯಾಲಿಸಿಸ್ ಕೇಂದ್ರ ತೆರಯಲಾಗುತ್ತದೆ. ಆರೋಗ್ಯ ಸೇವೆ ಜನರ ಬಳಿಗೇ ತೆಗೆದುಕೊಂಡು ಹೋಗಲು ಈ ಬೃಹತ್ ಆರೋಗ್ಯ ಶಿಬಿರ ಆಯೋಜನೆ ಮಾಡಿದೆ, ಸಮಗ್ರ ರೋಗ ತಪಾಸಣೆ , ಔಷಧಿ ವಿತರಣೆ ನೀಡಲಾಗುತ್ತದೆ, ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್ ತೆರೆಯಲು ಕ್ರಮ ವಹಿಸುತ್ತೇನೆ ಎಂದು ಭರವಸೆ ಕೊಟ್ಟರು.

ಆರೋಗ್ಯ ಸೇವೆ ಜನರ ಬಳಿ ತಲುಪಬೇಕು. ತಜ್ಞ ವೈದ್ಯರ ಸೇವೆ, ವೈದ್ಯಕೀಯ ಅತ್ಯಾಧುನಿಕ ಸಲಕರಣೆಗಳ ಸೌಲಭ್ಯವನ್ನು ಆಯಾ ಭಾಗದಲ್ಲಿಯೇ ದೊರಕಿಸಿ ಸಮಗ್ರ ಆರೋಗ್ಯ ತಪಾಸಣೆ ಮಾಡಬೇಕು ಎನ್ನುವ ಉದ್ದೇಶದಿಂದ ಆರೋಗ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ವಿಶೇಷವಾಗಿ ಕಾಡಂಚಿನ, ದೂರದ ಪ್ರದೇಶಗಳ ಜನತೆಗೆ ಆರೋಗ್ಯ ಸೇವೆ ಸಿಗಬೇಕು ಎನ್ನುವ ಕಾರಣದಿಂದ ಕೊಳ್ಳೇಗಾಲದಂತಹ ಪಟ್ಟಣದಲ್ಲಿ ಆರೋಗ್ಯ ಮೇಳ ಏರ್ಪಡಿಸಲಾಗಿದೆ. ಹನೂರು, ಕೊಳ್ಳೇಗಾಲ ಭೇಟಿಯ ವೇಳೆಯೇ ಇಲ್ಲಿಯೇ ಆರೋಗ್ಯ ಮೇಳ ಆಯೋಜನೆಗೆ ನಿರ್ಧರಿಸಿ ಸಚಿವರು, ಶಾಸಕರು, ಅಧಿಕಾರಿಗಳೊಂದಿಗೆ ಚರ್ಚಿಸಿದ್ದೆ. ಅದರಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ಉತ್ಸಾಹದಿಂದ ಅತ್ಯಂತ ವ್ಯವಸ್ಥಿತವಾಗಿ ಆರೋಗ್ಯ ಮೇಳ ಏರ್ಪಡಿಸಿದ್ದಾರೆ ಎಂದರು.

ಕೊಳ್ಳೇಗಾಲದಲ್ಲಿ ಆಯೋಜನೆಯಾಗಿರುವ ಬೃಹತ್ ಆರೋಗ್ಯ ಮೇಳಕ್ಕೆ ನಿರೀಕ್ಷೆಗೂ ಮೀರಿ ಹೆಚ್ಚಿನ ಸ್ಪಂದನೆ ದೊರೆತಿದ್ದು ರಾಜ್ಯದ ಇತರೆ ಕಡೆಗಳಲ್ಲಿಯೂ ಆರೋಗ್ಯ ಮೇಳ ಆಯೋಜನೆಗೆ ನಾಂದಿಯಾಗಿದೆ. ತಪಾಸಣೆಗೆ ಒಳಗಾದವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಮೈಸೂರು, ಬೆಂಗಳೂರಿನ ಆಸ್ಪತ್ರೆಗಳಿಗೂ ಕಳುಹಿಸಲಾಗುವುದು. ತಪಾಸಣೆ ಮಾಡಿಸಿಕೊಂಡವರ ಆರೋಗ್ಯ ಸ್ಥಿತಿಗತಿ ತಿಳಿಯುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಆಶಾಕಿರಣ ಯೋಜನೆಯಡಿ ಜಿಲ್ಲೆಯಲ್ಲಿ ಸಮಗ್ರ ನೇತ್ರ ತಪಾಸಣೆ ನಡೆದಿದೆ. ೬೦ ಸಾವಿರ ಜನರಿಗೆ ಹಾಗೂ ೧೭ ಸಾವಿರ ಮಕ್ಕಳ ಕನ್ನಡಕ ವಿತರಣೆ ಮಾಡಲಾಗುತ್ತದೆ. ಸದ್ಯದಲ್ಲೇ ಈ ಕನ್ನಡಕ ವಿತರಣೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಆರೋಗ್ಯ ಸಚಿವರು ತಿಳಿಸಿದರು.

ಗುತ್ತಿಗೆ ಪದ್ಧತಿ ಆಧಾರದಲ್ಲಿ ತಜ್ಞ ವೈದ್ಯರನ್ನು ನೇಮಿಸಲು ಈಗಾಗಲೇ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕ್ರಮವಹಿಸಬೇಕು. ಆಸ್ಪತ್ರೆಗಳಲ್ಲಿ ಹೊರಗೆ ಔಷಧಿ ತರಲು ಚೀಟಿ ಬರೆಯಬಾರದು. ಆಸ್ಪತ್ರೆಗಳಲ್ಲಿಯೇ ಎಲ್ಲಾ ಔಷಧಗಳು ನೀಡಬೇಕು. ಈ ನಿಟ್ಟಿನಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳಿಗೆ ಇಲಾಖೆ ಮುಂದಾಗಿದೆ ಎಂದರು.

ಹೊಸ ೪೨ ತಾಲೂಕುಗಳಲ್ಲಿ ಡಯಾಲಿಸಿಸ್ ಘಟಕ ತೆರೆಯಲು ಆದೇಶಿಸಲಾಗಿದೆ. ಅದರಲ್ಲಿ ಹನೂರು ತಾಲೂಕಿನ ರಾಮಾಪುರವು ಸೇರಿದೆ. ತಾಲೂಕು ಆಸ್ಪತ್ರೆಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿ ಮಾತನಾಡಿದ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಪಟ್ಟಣದಲ್ಲಿ ಆಯೋಜಿಸಿರುವ ಬೃಹತ್ ಆರೋಗ್ಯ ಮೇಳವು ಮಹತ್ವದ ಕಾರ್ಯಕ್ರಮವಾಗಿದ್ದು ಅವಶ್ಯಕವಿರುವ ಕಡೆಗಳಲ್ಲಿ ಇಂತಹ ಮೇಳಗಳನ್ನು ಹಮ್ಮಿಕೊಳ್ಳುವುದು ಒಳ್ಳೆಯದು ಎಂದರು.

ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಯಳಂದೂರು ಪಟ್ಟಣದಲ್ಲಿ ೧೦೦ ಹಾಸಿಗೆಗಳ ಆಸ್ಪತ್ರೆ ಮಂಜೂರಾಗಿದೆ. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ. ಹನೂರು ಪಟ್ಟಣದಲ್ಲೂ ತಾಲೂಕು ಆಸ್ಪತ್ರೆಯಾಗಬೇಕು. ರಾಮಾಪುರದಲ್ಲಿ ಡಯಾಲಿಸಿಸ್ ಘಟಕ ತೆರೆಯಬೇಕು. ತಾಂತ್ರಿಕ ದೋಷದಿಂದ ಹನೂರಿನಲ್ಲಿ ಡಯಾಲಿಸಿಸ್ ಘಟಕಗಳು ಕೆಲಸ ಮಾಡುತ್ತಿಲ್ಲ. ಕೊಳ್ಳೇಗಾಲದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೆಡಿಯಾಲಾಜಿಸ್ಟ್ ಇಲ್ಲದೆ ತೊಂದರೆಯಾಗಿದೆ. ಕೊಳ್ಳೇಗಾಲದಲ್ಲಿ ಒಂದು ರಕ್ತ ನಿಧಿ ಕೇಂದ್ರ ತೆರೆಯಬೇಕು ಎಂದು ಅವರು ಸಚಿವರಲ್ಲಿ ಮನವಿ ಮಾಡಿದರು. ಶಾಸಕರ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್, ರೆಡಿಯಾಲಾಜಿಸ್ಟ್ ನೇಮಿಸಲು ಮತ್ತು ರಕ್ತ ನಿಧಿ ಕೇಂದ್ರ ತೆರೆಯಲು ಕ್ರಮ ವಹಿಸಲಾಗುವುದು. ರಾಜ್ಯದ ಹಳೆಯ ತಾಲೂಕು ಮಟ್ಟದ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಆರೋಗ್ಯ ಕಾರ್ಡ್, ದಂತ ಪಂಕ್ತಿ ವಿತರಣೆ ಮಾಡಲಾಯಿತು. ಶಾಸಕ ಎಂ.ಆರ್. ಮಂಜುನಾಥ್, ಎಚ್.ಎಂ. ಗಣೇಶಪ್ರಸಾದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಡಿ. ರಣದೀಪ್, ಎನ್‌ಆರ್‌ಎಚ್‌ಎಂ ನಿರ್ದೇಶಕರಾದ ಡಾ. ನವೀನ್ ಭಟ್, ಆರೋಗ್ಯ ಇಲಾಖೆಯ ನಿರ್ದೇಶಕರಾದ ಡಾ. ಬಿ.ಎಸ್. ಪುಷ್ಪಲತಾ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಪಂ ಸಿಇಒ ಆನಂದ್‌ಪ್ರಕಾಶ್ ಮೀನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತಿ ಕೌಂಟರ್ ಗೆ ಸಚಿವರು ಭೇಟಿ :

ಆರೋಗ್ಯ ಶಿಬಿರದಲ್ಲಿ ತೆರೆಯಲಾಗಿದ್ದ ಪ್ರತಿ ಕೌಂಟರ್ ಗೆ ಸಚಿವ ದಿನೇಶ್ ಗುಂಡೂರಾವ್, ಕೆ.ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಪಾಸಣೆಗೆ ಬಂದಿದ್ದ ಜನರನ್ನು ಮಾತನಾಡಿಸಿ ಆರೋಗ್ಯ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಮನವಿ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಶಾಸಕರಾದ ಎ.ಆರ್‌.ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್, ಗಣೇಶ್ ಪ್ರಸಾದ್ ಇದ್ದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ