ನಾಳೆ ಕಂಚಿನಡ್ಕ ಟೋಲ್ ವಿರುದ್ಧ ಬೃಹತ್ ಪ್ರತಿಭಟನೆ

KannadaprabhaNewsNetwork | Updated : Aug 23 2024, 01:20 AM IST

ಸಾರಾಂಶ

ಕಾರ್ಕಳ - ಪಡುಬಿದ್ರಿ ನಡುವಿನ 40ಕ್ಕೂ ಹೆಚ್ಚು ಹಳ್ಳಿಗಳಿಗೆ ಈ ಹೆದ್ದಾರಿ ಸಂಪರ್ಕವಾಗಿದೆ. ಕೇವಲ 4 ಕಿ.ಮೀ. ಅಂತರದಲ್ಲಿ ಇಲ್ಲಿ ದಿನನಿತ್ಯ ಉದ್ಯೋಗ, ಕಾರ್ಯನಿಮಿತ್ತ ಸಾವಿರಾರು ಜನರು 2 ಬಾರಿ ದುಬಾರಿ ಟೋಲ್ ಶುಲ್ಕ ತೆತ್ತು ಸಂಚರಿಸುವುದು ಸಾಧ್ಯವಿಲ್ಲ ಮತ್ತು ಅದು ಕಾನೂನುಬಾಹಿರ ಎಂದು ಸುಹಾಸ್ ಹೆಗ್ಡೆ ನಂದಳಿಕೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಕಾಪು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಹೆಜಮಾಡಿಯ ಟೋಲ್ ಗೇಟ್‌ನಿಂದ ಕೇವಲ 4 ಕಿ.ಮೀ. ಅಂತರದಲ್ಲಿ, ಪಡುಬಿದ್ರಿ- ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ಸ್ಥಾಪಿಸಲುದ್ದೇಶಿಸಿರುವ ಇನ್ನೊಂದು ಟೋಲ್ ಗೇಟ್ ವಿರುದ್ಧ ಆ.24 ರಂದು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಪಡುಬಿದ್ರಿ, ಬೆಳ್ಮಣ್ಣು, ಕಾರ್ಕಳ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳ - ಪಡುಬಿದ್ರಿ 28 ಕಿ.ಮೀ. ರಾಜ್ಯ ಹೆದ್ದಾರಿಯನ್ನು 2013ರಲ್ಲಿ 61 ಕೋಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈಗ 11 ವರ್ಷಗಳ ನಂತರ ಟೋಲ್ ಗೇಟ್ ಸ್ಥಾಪಿಸಲು ಸರ್ಕಾರ ಹೊರಟಿದೆ. 4 ವರ್ಷಗಳ ಹಿಂದೆ ಇಲ್ಲಿನ ಬೆಳ್ಮಣ್‌ನಲ್ಲಿ ಟೋಲ್ ಗೇಟ್ ಸ್ಥಾಪಿಸಲು ಉದ್ದೇಶಿಸಿದಾಗ ಸಾರ್ವಜನಿಕರು ಅದನ್ನು ಒದ್ದೊಡಿಸಿದ್ದರು. ಈಗ ಕಂಚಿನಡ್ಕದಲ್ಲಿ ಟೋಲ್ ಸ್ಥಾಪಿಸಲು ಗುದ್ದಲಿ ಪೂಜೆ ನಡೆಸಲಾಗಿದೆ. ಈ ಟೋಲ್‌ಗೂ ಅವಕಾಶ ನೀಡುವುದಿಲ್ಲ, ಮಾತ್ರವಲ್ಲ ಕಾರ್ಕಳ - ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಎಲ್ಲಿಯೂ ಟೋಲ್ ಸ್ಥಾಪನೆಗೆ ಬಿಡುವುದಿಲ್ಲ ಎಂದವರು ಹೇಳಿದರು.

ಕಾರ್ಕಳ - ಪಡುಬಿದ್ರಿ ನಡುವಿನ 40ಕ್ಕೂ ಹೆಚ್ಚು ಹಳ್ಳಿಗಳಿಗೆ ಈ ಹೆದ್ದಾರಿ ಸಂಪರ್ಕವಾಗಿದೆ. ಕೇವಲ 4 ಕಿ.ಮೀ. ಅಂತರದಲ್ಲಿ ಇಲ್ಲಿ ದಿನನಿತ್ಯ ಉದ್ಯೋಗ, ಕಾರ್ಯನಿಮಿತ್ತ ಸಾವಿರಾರು ಜನರು 2 ಬಾರಿ ದುಬಾರಿ ಟೋಲ್ ಶುಲ್ಕ ತೆತ್ತು ಸಂಚರಿಸುವುದು ಸಾಧ್ಯವಿಲ್ಲ ಮತ್ತು ಅದು ಕಾನೂನುಬಾಹಿರ. ಆದ್ದರಿಂದ ಜನರಿಗೆ ಈಗ ಸಿಡಿದೆಳದೇ ಬೇರೆ ದಾರಿ ಇಲ್ಲ. 24ರ ಪ್ರತಿಭಟನೆಯಲ್ಲಿ ಸುತ್ತಲಿನ ಹಳ್ಳಿಗಳ 10-12 ಸಾವಿರ ಜನರು ಸೇರಿ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಲಿದ್ದಾರೆ ಎಂದರು.

ಈ ಪ್ರತಿಭಟನೆ ಪಕ್ಷಾತೀತ, ಧರ್ಮಾತೀತವಾಗಿ ನಡೆಸಲಾಗುತ್ತದೆ. ಆದ್ದರಿಂದ ಎಲ್ಲ ಪಕ್ಷಗಳ ಮತ್ತು ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ. ವಿವಿಧ ಜಾತಿಯ, ಸಾಮಾಜಿಕ, ಸೇವಾ ಸಂಘಟನೆಗಳು, ವಾಹನ ಚಾಲಕರ ಸಂಘಟನೆಗಳು, ವರ್ತಕರು, ರೈತ ಸಂಘಟನೆಗಳು ಪ್ರತಿಭಟನೆಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿವೆ ಎಂದವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಲಕ್ಷ್ಮಣ ಎಲ್. ಶೆಟ್ಟಿ, ಕಾರ್ಯದರ್ಶಿ ಸರ್ವಜ್ಞ ತಂತ್ರಿ ಬೆಳ್ಮಣ್, ಕೋಶಾಧಿಕಾರಿ ಶಶಿಧರ ಶೆಟ್ಟಿ, ಪ್ರಮುಖರಾದ ದಿನೇಶ್ ಕೋಟ್ಯಾನ್, ಜಯ ಶೆಟ್ಟಿ ಉಪಸ್ಥಿತರಿದ್ದರು.

Share this article