ಶಿರಹಟ್ಟಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್,ಅಂಬೇಡ್ಕರ್ ಎಂದು ಹೇಳುವುದು ಈಗ ಪ್ಯಾಷನ್ ಆಗಿಬಿಟ್ಟಿದೆ. ಇಷ್ಟು ಬಾರಿ ದೇವರ ಹೆಸರನ್ನಾದರೂ ಹೇಳಿದ್ದರೆ ಏಳು ಜನ್ಮದವರೆಗೆ ಸ್ವರ್ಗದಲ್ಲಿ ಸ್ಥಾನವಾದರೂ ಸಿಗುತ್ತಿತ್ತು ಎಂಬ ಕೇಂದ್ರ ಗೃಹ ಸಚಿವರ ಹೇಳಿಕೆ ಖಂಡಿಸಿ ಗುರುವಾರ ಶಿರಹಟ್ಟಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ ಕಾರ್ಯಾಲಯದ ಪಕ್ಕದಲ್ಲಿ ಅಮಿತ್ ಶಾ ಭಾವಚಿತ್ರಕ್ಕೆ ಉದ್ರಿಕ್ತರು ಚಪ್ಪಲಿ ಸೇವೆ ಮಾಡಿ ಪ್ರತಿಕೃತಿ ದಹಿಸಿದರು.
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಮಾತನಾಡಿ, ಕೇಂದ್ರ ಗೃಹ ಮಂತ್ರಿಗಳು ತಮ್ಮ ಈ ಅಸಂವಿಧಾನಿಕ ಹೇಳಿಕೆ ಹಿಂಪಡೆದು ದೇಶದ ಜನರ ಮುಂದೆ ಬೇಷರತ್ತಾಗಿ ಬಹಿರಂಗ ಕ್ಷಮೆಯಾಚಿಸಬೇಕು. ಅಂಬೇಡ್ಕರ್ ಅವರನ್ನು ದೇಶ ಮಾತ್ರವಲ್ಲದೇ ಇಡೀ ವಿಶ್ವವೇ ಮೆಚ್ಚಿಕೊಂಡು ಅವರ ಆದರ್ಶ ಪಾಲಿಸುತ್ತಿರುವಾಗ ಮನುವಾದ ಚಿಂತನೆಯ ಅಮಿತ್ ಶಾ ಈ ರೀತಿಯ ಸಂಸ್ಕಾರ ರಹಿತವಾಗಿ ಮಾತನಾಡಿರುವುದು ನಾಗರಿಕ ಸಮುದಾಯ ತಲೆ ತಗ್ಗಿಸುವಂತಾಗಿದೆ.ಶಾ ಸದನದಲ್ಲಿ ಆಡಿರುವ ಮಾತು ಇಡೀ ದೇಶದ ಜನರೇ ಕೇಳಿದ್ದಾರೆ.ಸಂವಿಧಾನದಿಂದ ಸಮಾನತೆ ಭಾತೃತ್ವ ಮತ್ತಿತರ ಹಕ್ಕು ನೀಡಿರುವ ಅಂಬೇಡ್ಕರ್ ಅವರನ್ನು ಬಿಜೆಪಿಗರು, ಸಂಘ ಪರಿವಾರಗಳು ದ್ವೇಷಿಸುತ್ತಿವೆ. ದೇಶದ ಮಹಿಳೆಯರಿಗೆ, ದೀನ, ದಲಿತರಿಗೆ, ಹಿಂದುಳಿದ ಸಮುದಾಯಗಳಿಗೆ ನ್ಯಾಯ ಸಿಕ್ಕಿರುವುದು ಸಂವಿಧಾನ ಶಿಲ್ಪ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ. ಅಂತಹ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನಾರ್ಹ ಎಂದರು.
ಮುಖಂಡ ಡಿ.ಕೆ. ಹೊನ್ನಪ್ಪನವರ, ಎಚ್.ಡಿ. ಮಾಗಡಿ, ಮುತ್ತುರಾಜ ಭಾವಿಮನಿ, ಭಾಗ್ಯಶ್ರೀ ಬಾಬಣ್ಣ, ಮಂಜುನಾಥ ಘಂಟಿ, ಬುಡನಶ್ಯಾ ಮಕಾನದಾರ, ಹನಮಂತ ಗೊಜನೂರ ಮಾತನಾಡಿದರು. ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಹೊನ್ನಪ್ಪ ಶಿರಹಟ್ಟಿ, ಸುರೇಶ ಬೀರಣ್ಣವರ, ಗೀತಾ ಬೀರಣ್ಣವರ, ಹಮಿದ ಸನದಿ, ನಜೀರ ಡಂಬಳ, ಮಹಾಂತೇಶ ದಶಮನಿ, ಈರಣ್ಣ ಚವ್ಹಾಣ, ಮಹೇಂದ್ರ ಉಡಚಣ್ಣವರ, ದೇವಪ್ಪ ಲಮಾಣಿ ಸೇರಿದಂತೆ ಅನೇಕರು ಇದ್ದರು.