ಕನ್ನಡಪ್ರಭ ವಾರ್ತೆ ಮಾಲೂರು
ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಒ.ಎಸ್.ಎ.ಎ.ಟಿ ಸಂಸ್ಥೆಯು 8 ಕೋಟಿ ರು. ವೆಚ್ಚದಲ್ಲಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪುನರ್ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು, ಇದೇ ತಿಂಗಳ 26 ರಂದು ಲೋಕಾರ್ಪಣೆಗೊಳ್ಳಲಿದೆ.ಇದು ಅಮೇರಿಕಾದಲ್ಲಿನ ಭಾರತೀಯರು ಪ್ರಾರಂಭಿಸಿರುವ ಒಎಸ್ಎಎಟಿ ಸಂಸ್ಥೆಯ 100ನೇ ಸರ್ಕಾರಿ ಶಾಲೆ ಪುನರ್ ನಿರ್ಮಾಣ ಕಾಮಗಾರಿಯಾಗಿದೆ. ದೇಶದ ವಿವಿಧೆಡೆ ಇನ್ನೂ 23 ಶಾಲೆಗಳು ಪುನರ್ ನಿರ್ಮಾಣಗೊಳ್ಳುತ್ತಿದ್ದು, ಈ ವರ್ಷದಲ್ಲೇ ಪೂರ್ಣಗೊಳಿಸುವ ಇರಾದೆಯನ್ನು ಒಸಾಟದ ಸಹ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ವಾದಿರಾಜ್ ಭಟ್ ತಿಳಿಸಿದ್ದಾರೆ.
ಒಸಾಟ ಎಂಬ ಸಂಸ್ಥೆಯ ಹುಟ್ಟು:ಅಮೇರಿಕದ ಸಿಲಿಕಾನ್ ವ್ಯಾಲಿಯಲ್ಲಿ ನೆಲೆಸಿರುವ ಭಾರತೀಯರಲ್ಲಿ ಒಬ್ಬರಾದ ವಾದಿರಾಜ್ ಭಟ್ ಅವರು ಮೊದಲಿಗೆ ‘ರಾಗ ಬ್ಯಾಂಡ್’ ಮೂಲಕ ಸಂಗೀತ ಮತ್ತು ರಂಗಭೂಮಿ ಪ್ರದರ್ಶನ ಏರ್ಪಡಿಸಿ ಅದರಲ್ಲಿ ಸಂಗ್ರಹವಾದ ಹಣವನ್ನು ಸಮಾಜ ಕಲ್ಯಾಣ ಕಾರ್ಯಗಳಿಗೆ ಉಪಯೋಗಿಸಲಾಗುತ್ತಿತ್ತು. ಒಮ್ಮೆ ಭಟ್ ರು ಕಾರ್ಕಳ ಬಳಿಯ ತಮ್ಮ ಗ್ರಾಮಕ್ಕೆ ಹೋದಾಗ ಅಲ್ಲಿನ ಸರ್ಕಾರಿ ಶಾಲೆ ಶಿಥಿಲಗೊಂಡಿರುವುದು ಕಂಡು ಅ ಶಾಲೆಯ ಮುಖ್ಯೋಪಾಧ್ಯಾಯರ ಮನವಿ ಮೇರೆಗೆ ಆ ಶಾಲೆಯನ್ನು ನವೀಕರಣಗೊಳಿಸಿದರಲ್ಲದೇ ಕರಾವಳಿ ಭಾಗದ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳನ್ನು ಪುನರ್ ನಿರ್ಮಾಣಗೊಳಿಸಿಕೊಟ್ಟರು.
ಒನ್ ಸ್ಕೂಲ್ ಆ್ಯಟ್ ಎ ಟೈಮ್:ಆದರೆ ಇದರಿಂದ ತೃಪ್ತರಾಗದ ವಾದಿರಾಜ ಭಟ್ ರು ಗೋಡೆಗೆ ಸುಣ್ಣ ಬಣ್ಣ ಬಳಿಯುವುದರಿಂದ ಶೈಕ್ಷಣಿಕ ವಾತಾವರಣ ಸೃಷ್ಟಿಸಲು ಸಾಧ್ಯ ಇಲ್ಲ ಎಂದು ಅರಿತು, ಅಮೇರಿಕಾದಲ್ಲಿರುವ ಸಮಾನ ಮನಸ್ಕರ ಜತೆಗೊಡಿ 2003ರಲ್ಲಿ ‘ಒನ್ ಸ್ಕೂಲ್ ಆ್ಯಟ್ ಎ ಟೈಮ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು, 2011ರಲ್ಲಿ ಅದು ಎನ್ ಜಿಒ ಸಂಸ್ಥೆಯಾಗಿ ಶೈಕ್ಷಣಿಕ ಚಾರಿಟಬಲ್ ಟ್ರಸ್ಟ್ ಆಗಿ ಬದಲಾಯಿತು. ಸರ್ಕಾರದ ಅನುದಾನ ಇಲ್ಲದೇ ಶಾಲೆಗಳನ್ನು ಪುನರ್ ನಿರ್ಮಿಸಿಕೊಡಲು ಪ್ರಾರಂಭಿಸಿದ ಒಸಾಟ ಸಂಸ್ಥೆಯು ತನ್ನ 20 ವರ್ಷದ ಸೇವೆಯಲ್ಲಿ 99 ಸರ್ಕಾರಿ ಶಾಲೆಗಳ ಪುನರ್ ನಿರ್ಮಾಣ ಮಾಡಿದ್ದು, ಈಗ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು 8 ಕೋಟಿ ರು. ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಿ ಕೊಟ್ಟಿದೆ.
ಶಾಲೆಗಳಲ್ಲಿ ಮೂಲ ಸೌಕರ್ಯದ ಕಡೆ ಗಮನ:ಈ ಬಗ್ಗೆ ಮಾಹಿತಿ ನೀಡಿರುವ ವಾದಿರಾಜ್ ಭಟ್ ರು, ಒಸಾಟ ನಿರ್ಮಿಸುವ ಪ್ರತಿಯೊಂದು ಶಾಲೆಯಲ್ಲಿ ತರಗತಿ ಕೊಠಡಿಗಳು, ಶೌಚಾಲಯಗಳು ಮತ್ತು ಅಡುಗೆ ಮನೆಗಳ ಪ್ರಮುಖ ಮೂರು ಮೂಲಭೂತ ಸೌಕರ್ಯ ಕಡೆ ಗಮನ ಕೇಂದ್ರೀಕರಿಸಲಾಗುತ್ತಿದೆ. ಶಾಲೆಗಳನ್ನು ಆಯ್ಕೆ ಮಾಡುವ ಮೊದಲು ವಿದ್ಯಾರ್ಥಿಗಳ ಸಂಖ್ಯೆಯನ್ನು ಮತ್ತು ಅದನ್ನು ಉಳಿಸಿಕೊಳ್ಳಲು ಸಾಕಷ್ಟು ಉತ್ಸಾಹ ಭರಿತ ಶಿಕ್ಷಕರಿದ್ದಾರೆಯೇ ಎಂಬುದನ್ನು ಗಮನಿಸಲಾಗುತ್ತದೆ. ಶಿಕ್ಷಣಕ್ಕಾಗಿ ಸುರಕ್ಷಿತ, ಆರೋಗ್ಯಕರ ವಾತಾವರಣವನ್ನು ಒದಗಿಸಲು ನಾವು ಶಾಲಾ ಮೂಲಭೂತ ಸೌಕರ್ಯವನ್ನು ಪುನರ್ ನಿರ್ಮಿಸುತ್ತೇವೆ. ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು ಸಂಯೋಜಿತ ಡಿಜಿಟಲ್ ಕಲಿಕಾ ವೇದಿಕೆಯನ್ನು ನೀಡುತ್ತೇವೆ ಎಂದರು.
ಮಾಸ್ತಿ ಗ್ರಾಮದಲ್ಲಿ 8 ಕೋಟಿ ರು. ವೆಚ್ಚದ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಏಕೈಕ ದಾನಿ ಅನಿವಾಸಿ ಭಾರತೀಯ ಜನಾರ್ದನ್ ಠಕ್ಕರ್ ಅವರ ಕೊಡುಗೆಯಿಂದ ಕಟ್ಟಲಾಗಿದ್ದು, ಅವರು ಮೈಸೂರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದು, ಹಾಲಿ ತಮ್ಮ ಪತ್ನಿ ಲಿಂಡಾ ಜತೆಯಲ್ಲಿ ಬೃಹತ್ ಕೈಗಾರಿಕಾ ಉದ್ಯಮಿಯಾಗಿ ಬೆಳೆದಿದ್ದಾರೆ ಎಂದರು.ನೂತನ ಶಾಲೆಯಲ್ಲಿ ಏನೇನಿದೆ:
ಸಾಂಸ್ಕೃತಿಕ ಹೆಗ್ಗುರುತು ಆಗಿರುವ ಮಾಸ್ತಿಯಲ್ಲಿ ಒಸಾಟ ಸಂಸ್ಥೆಯ 100ನೇ ಶಾಲಾ ಕಟ್ಟಡ ಆಗಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ, ಸಾರ್ಥಕತೆ ಭಾವನೆ ಸಹ ಮೂಡಿದೆ ಎಂದು ವಾದಿರಾಜ್ ಭಟ್ ತಿಳಿಸಿದರು.ಪುನರ್ ನಿರ್ಮಾಣಗೊಂಡಿರುವ ಈ ಶಾಲೆಯು 18 ತರಗತಿ ಕೊಠಡಿ, ಕಂಪ್ಯೂಟರ್ ಪ್ರಯೋಗಾಲಯ, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕಲಿಕಾ ಚಟುವಟಿಕೆ ಕೊಠಡಿಗಳು, 3 ಶೌಚಾಲಯ ಬ್ಲಾಕ್ ಗಳು, ಅಡುಗೆ ಮನೆ ಬ್ಲಾಕ್ ಹೊಂದಿದೆ. ಎಲ್.ಕೆ.ಜಿ ಯಿಂದ 8ನೇ ತರಗತಿವರೆಗಿನ ಈ ಶಾಲೆಯಲ್ಲಿ 800 ವಿದ್ಯಾರ್ಥಿಗಳಿದ್ದು, ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳೆರಡರಲ್ಲೂ ಭೋದನಾ ಸೌಲಭ್ಯವಿದೆ ಎಂದು ಹೇಳಿದರು.
ಹೂಸ ಕಟ್ಟಡದಲ್ಲಿ ಸೂಕ್ತವಾದ ಪೀಠೋಪಕರಣಗಳು, ಎಲ್ಲಾ ತರಗತಿ ಕೋಣೆಗಳಲ್ಲಿ ಶೈಕ್ಷಣಿಕ ಕಲಿಕೆ ಸಂಬಂಧಿಸಿದ ವರ್ಣ ಚಿತ್ರಗಳು, ಸುಸಜ್ಜಿತ ಅಂಗಳ ಮತ್ತು ವಿದ್ಯಾರ್ಥಿಗಳ ಸಭೆ ಸ್ಥಳದೊಂದಿಗೆ ಧೂಳು ಮುಕ್ತ ವಾತಾವರಣ , ಆಟದ ಪ್ರದೇಶ, ಕುಡಿಯುವ ನೀರಿನ ಸೌಲಭ್ಯ, ಸೌರ ಆಧಾರಿತ ವಿದ್ಯುತ್ ವ್ಯವಸ್ಥೆ, ವೀಡಿಯೋ ಕಣ್ಗಾವಲು ವ್ಯವಸ್ಥೆ, ಪ್ರತಿ ತರಗತಿಯಲ್ಲಿ ಸ್ಮಾರ್ಟ್ ಟಿ.ವಿಗಳು ಹಾಗೂ ಅಡುಗೆ ಮನೆಗೆ ಅಡುಗೆ ಸಲಕರಣೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.ಒಂದು ಉತ್ತಮ ಶಿಕ್ಷಣದ ವಾತಾವರಣ ನಿರ್ಮಿಸಿ ಕೊಟ್ಟಿರುವ ಸಂತೋಷ, ಸಾರ್ಥಕತೆ ಒಸಾಟ ಸಂಸ್ಥೆಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಇಲ್ಲಿನ ಸಾರ್ವಜನಿಕರು, ಜನಪ್ರತಿನಿಧಿಗಳ ಮೇಲಿದೆ ಎಂದು ಭಟ್ ರು ಹೇಳಿದರು.