ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಾಜ್ಯದ ಬಹುತೇಕ ಮಠ, ಮಂದಿರಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆ ನೀಡುತ್ತಿವೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಶ್ಲಾಘಿಸಿದರು.ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದಲ್ಲಿ ಶ್ರೀಮರಿದೇವರು ಶಿವಯೋಗಿ ಮಹಾಸ್ವಾಮಿಗಳ 130ನೇ ಜಯಂತಿ ಹಾಗೂ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳ 25ನೇ ಪಟ್ಟಾಧಿಕಾರ ರಜತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶ್ರಮದ ವಿಶೇಷ ಲಕೋಟೆ ಮತ್ತು ಅಂಚೆ ಚೀಟಿ ಬಿಡುಗಡೆಗೊಳಿಸಿ ಮಾತನಾಡಿದರು.
ಶ್ರೀಕ್ಷೇತ್ರವು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬಂದಿರುವುದು ಒಳ್ಳೆಯ ಬೆಳವಣಿಗೆ. ಮಠ-ಮಾನ್ಯಗಳಲ್ಲಿ ವಿದ್ಯಾಭ್ಯಾಸ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಅತ್ಯುನ್ನತ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಕೀರ್ತಿ ಸಂಪಾದಿಸಿದ್ದಾರೆ. ಚಂದ್ರವನ ಆಶ್ರಮದ ತ್ರಿನೇತ್ರ ಶ್ರೀಗಳು ಸಹ ಆ ನಿಟ್ಟಿನಲ್ಲಿ ಸಾಗಲಿ. ಹಲವು ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.ಶಿವಯೋಗಿ ದರ್ಶನ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ರಾಜ್ಯದ 230 ತಾಲೂಕುಗಳ ಪೈಕಿ 203 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಗುರು ಹಿರಿಯರ ಪೂಜಾಫಲದ ಫಲವಾಗಿ ಅವುಗಳನ್ನು ಎದುರಿಸುವ ಶಕ್ತಿ ದೊರೆಯಲಿ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ಬರವನ್ನು ಎದುರಿಸುವುದು ಬರದಿಂದ ಪಾರಾಗುವುದು ಹೇಗೆ ಎಂಬುದನ್ನು ನೆನೆದರೆ ಭಯವಾಗುತ್ತದೆ. ಮಠ ಮಂದಿರಗಳಲ್ಲಿ ಶ್ರೀಗಳು, ಸಾಧು-ಸಂತರು ನಡೆಸುವ ಧಾರ್ಮಿಕ ಕಾರ್ಯಗಳಿಂದಾಗಿ ಇಂತಹ ಪರಿಸ್ಥಿತಿಗಳನ್ನು ಎದುರಿಸುವ ಜೊತೆಗೆ ನಿವಾರಣೆ ಮಾಡುವ ಶಕ್ತಿ ದೊರೆಯುವಂತಾಗಲಿ ಎಂದರು.ಚಂದ್ರವನ ಆಶ್ರಮದಲ್ಲಿ ಶ್ರೀಗಳು ಭಕ್ತರಿಗೆ ಉತ್ತಮ ರೀತಿಯ ಸೌಲಭ್ಯ ಕಲ್ಪಿಸಿದ್ದಾರೆ. ಇಲ್ಲಿ ದಾಸೋಹ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯ ನಡೆಸಿಕೊಂಡು ಬರುತ್ತಿದ್ದು, ಮತ್ತಷ್ಟು ಸಾಮಾಜಿಕ ಕಾರ್ಯಕ್ರಮಗಳು ಜರುಗಲಿ ಎಂದರು.
ಸಮಾರಂಭದಲ್ಲಿ ಶಿವಗಂಗಾ ಕ್ಷೇತ್ರದ ಮೇಲಣಗವಿ ವೀರಸಿಂಹಾಸನ ಸಂಸ್ಥಾನ ಮಠದ ಶ್ರೀಮಲಯಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಸವದತ್ತಿ ಮುರಗೋಡ ಮಹಾಂತ ದುರದುಂಡೀಶ್ವರ ಮಠದ ಮ.ನಿ.ಪ್ರ.ಸ್ವ.ನೀಲಕಂಠ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನದ ಶ್ರಿಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಡುಪಿಯ ಶ್ರೀವಿದ್ಯಾವಾಚತಿ ವಿಶ್ವಸಂತೋಷ ಭಾರತಿ ಶ್ರೀಪಾದರು, ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಉಪವಿಭಾಗಾಧಿಕಾರಿ ನಂದೀಶ್, ತಹಸೀಲ್ದಾರ್ ಪರಶುರಾಮ್ ಸತ್ತಿಗೆರೆ, ಮುಖಂಡರಾದ ಎಂ.ಪುಟ್ಟೇಗೌಡ, ಪೈ.ಮುಕುಂದ್, ಪುರಸಭೆ ಸದಸ್ಯ ಎಂ.ಎಲ್.ದಿನೇಶ್ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಗಣ್ಯರು, ಸಾಧು-ಸಂತರು ಹಾಗೂ ಭಕ್ತರು ಉಪಸ್ಥಿತರಿದ್ದು ಶ್ರೀಗಳಿಗೆ ಶುಭ ಕೋರಿದರು.