ದಿವ್ಯಾಂಗರಿಗೆ ವಿಶ್ವಾಸ ತುಂಬುವ ಕಾರ್ಯವಾಗಲಿ: ವಿಶ್ವೇಶ್ವರ ಹೆಗಡೆ ಕಾಗೇರಿ

KannadaprabhaNewsNetwork |  
Published : Jul 06, 2025, 01:52 AM IST
೫ಎಸ್.ಆರ್.ಎಸ್೩ಪೊಟೋ೧ (ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಸಾಧನಾ ಸಲಕರಣೆ ಹಾಗೂ ವಿಶೇಷಚೇತನರಿಗೆ ಉಚಿತ ಸಾಧನಾ ಸಲಕರಣೆಗಳ ಸಮರ್ಪಣಾ ಕಾರ್ಯಕ್ರಮವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.)೫ಎಸ್.ಆರ್.ಎಸ್೩ಪೊಟೋ೨ (ಹಿರಿಯ ನಾಗರಿಕರಿಗೆ ಉಚಿತ ಸಾಧನಾ ಸಲಕರಣೆ ಹಾಗೂ ವಿಶೇಷಚೇತನರಿಗೆ ಉಚಿತ ಸಾಧನಾ ಸಲಕರಣೆಗಳನ್ನು ಫಲಾನುಭವಿಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಸ್ತಾಂತರಿಸಿದರು.) | Kannada Prabha

ಸಾರಾಂಶ

ಶಿರಸಿ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಸಾಧನಾ ಸಲಕರಣೆ ಹಾಗೂ ವಿಶೇಷಚೇತನರಿಗೆ ಉಚಿತ ಸಾಧನಾ ಸಲಕರಣೆಗಳನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿತರಿಸಿದರು.

ಶಿರಸಿ: ದಿವ್ಯಾಂಗರಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಅವರಿಗೆ ವಿಶ್ವಾಸ ತುಂಬುವ ಮಹತ್ವದ ಕಾರ್ಯವನ್ನು ನಾವೆಲ್ಲರೂ ಸೇರಿ ಮಾಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಆಶ್ರಯದಲ್ಲಿ ಸಾಮಾಜಿಕ ಅಧಿಕಾರಿತ ಶಿಬಿರ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಉಚಿತ ಸಾಧನಾ ಸಲಕರಣೆ ಹಾಗೂ ವಿಶೇಷಚೇತನರಿಗೆ ಉಚಿತ ಸಾಧನಾ ಸಲಕರಣೆಗಳ ಸಮರ್ಪಣಾ ಕಾರ್ಯಕ್ರಮ ಉದ್ಘಾಟಿಸಿ, ಫಲಾನುಭವಿಗಳಿಗೆ ಸಲಕರಣೆಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ದಿವ್ಯಾಂಗರಿಗೆ ಸಾಧನಾ ಸಲಕರಣೆಗಳನ್ನು ವಿತರಿಸಿ, ಅವರ ಜೀವನಕ್ಕೆ ಆತ್ಮವಿಶ್ವಾಸ ನೀಡಿ ಅವರ ಕಷ್ಟಕ್ಕೆ ನಾವಿದ್ದೇವೆ ಎಂಬ ಸಂದೇಶ ನೀಡಿದೆ. ಅನಿರೀಕ್ಷಿತವಾಗಿ ವಿಶೇಷಚೇತನರಾಗಿ ಹುಟ್ಟಿದ್ದಾರೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕಿದೆ ಎಂದರು.

ಕೇಂದ್ರ ಸರ್ಕಾರದ ನೂರಷ್ಟು ನೂರು ಅನುದಾನದ ಯೋಜನೆಯಾಗಿದ್ದು, ಘಟ್ಟದ ಮೇಲಿನ ತಾಲೂಕುಗಳ ೧,೧೪೨ ಫಲಾನುಭವಿಗಳಿಗೆ ₹೧.೨೦ ಕೋಟಿ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಜು. ೧೨ರಂದು ಹೊನ್ನಾವರದಲ್ಲಿ ಘಟ್ಟದ ಕೆಳಗಿನ ತಾಲೂಕುಗಳ ಫಲಾನುಭವಿಗಳಿಗೆ ಸಾಧನಾ ಸಲಕರಣೆಗಳನ್ನು ಹಸ್ತಾಂತರಿಸಲಾಗುತ್ತದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು, ನಮ್ಮ ಜಿಲ್ಲೆಗೆ ನೀಡಿರುವುದಕ್ಕೆ ಕೇಂದ್ರ ಸರ್ಕಾರದ ಸಚಿವ ಡಾ. ವೀರೇಂದ್ರಕುಮಾರ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಸಮಾಜದ ಎಲ್ಲ ಸ್ತರದ, ಅದರಲ್ಲಿ ಬಡವರು, ದಿವ್ಯಾಂಗರ ಕಷ್ಟಕ್ಕೆ ಸ್ಪಂದಿಸುವ ದೊಡ್ಡ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಮೂಲಕ ರೂಪಿಸಿದ್ದಾರೆ. ಸಮಾಜದಲ್ಲಿ ಎಲ್ಲರೂ ಗೌರವದಿಂದ ಜೀವನ ಸಾಗಿಸಬೇಕು ಎಂದು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಚನ್ನಬಸಪ್ಪ ಹಾವಣಗಿ, ಶಿಶು ಅಭಿವೃದ್ಧಿ ಇಲಾಖೆಯ ಪ್ರಭಾರಿ ಯೋಜನಾಧಿಕಾರಿ ಸುಶೀಲಾ ಮೊಗೇರ, ಅಂಕಿತ ರಾಯ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ವಿಕಲಚೇತನ ಅಧಿಕಾರಿ ರಾಘವೇಂದ್ರ ಭಟ್ಟ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ಶೀಲಾ ಸಂಗಡಿಗರು ಪ್ರಾರ್ಥಿಸಿದರು. ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ