ಸಂವಿಧಾನ ಆಶಯ ಎಲ್ಲರಿಗೂ ತಲುಪಲಿ: ನಾಗಭೂಷಣ್‌

KannadaprabhaNewsNetwork | Published : Jan 30, 2024 2:05 AM

ಸಾರಾಂಶ

ಗಣರಾಜ್ಯೋತ್ಸವ ಭಾರತಕ್ಕೆ 75 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಸಂವಿಧಾನದ ಆಶಯವನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.

ಸಿರಿಗೆರೆ: ಗಣರಾಜ್ಯೋತ್ಸವ ಭಾರತಕ್ಕೆ 75 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಸಂವಿಧಾನದ ಆಶಯವನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್‌ ಹೇಳಿದರು.

ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಿರಿಗೆರೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಸಿರಿಗೆರೆ ಮತ್ತು ಸುತ್ತಲಿನ ಗ್ರಾಮಗಳಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರಗಳು, ಭಾರತದ ಸಂವಿಧಾನ ಪೀಠಿಕೆ, ವಾಚನ, ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಕಲ್ಪನೆ, ಬಸವಣ್ಣ ಅವರ ವಚನಗಳು ಮತ್ತು ಭಾರತ ಸಂವಿಧಾನದಲ್ಲಿ ವಚನಗಳ ಪ್ರಸ್ತುತತೆ, ಜಿಲ್ಲೆಯ ಐತಿಹಾಸಿಕ ಸ್ಥಳ, ಕಲೆ, ಸಂಸ್ಕೃತಿ ಬಿಂಬಿಸುವುದರ ಜೊತೆಗೆ ಸಾಹಿತ್ಯ ದಿಗ್ಗಜರ ಪರಿಚಯ ಮಾಡಿಕೊಡಲಾಗಿದೆ ಎಂದರು.

ಸಿರಿಗೆರೆ ಪಿಡಿಓ ಹನ್ಸಿರಾ ಬಾನು ಮಾತನಾಡಿ, ಸಂವಿಧಾನದ ಮಹತ್ವ ಹಾಗೂ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವುದು ಮತ್ತು ರಾಷ್ಟ್ರೀಯ ಏಕತೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಜಾಗೃತಿ ಜಾಥ ನಡೆಯಲಿದೆ ಎಂದರು.

ಸಂವಿಧಾನ ಜಾಗೃತಿ ಜಾಥ ರಥಯಾತ್ರೆ ಜ.28ರ ಭಾನುವಾರ ಬೊಮ್ಮೇನಹಳ್ಳಿ, ಆಲಘಟ್ಟ, ಸಿರಿಗೆರೆ, ಅಳಗವಾಡಿ ಕೊಳಹಾಳ್, ಭರಮ ಸಾಗರ ಹಾಗೂ ಕೋಗುಂಡೆ ಗ್ರಾಪಂಗಳಲ್ಲಿ ಸಂಚಾರ ನಡೆಸಿತು. ವಕೀಲ ರಮೇಶ್ ಉಪನ್ಯಾಸ ನೀಡಿ ಸಂವಿಧಾನ ಪ್ರತಿಜ್ಞಾವಿಧಿ ಬೋಧಿಸಿದರು.

ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಮಾಜ ಕಲ್ಯಾಣ ಇಲಾಖೆಯ ನಾಗೇಂದ್ರಪ್ಪ, ವಾರ್ಡನ್‌ ಹನುಮಂತಪ್ಪ ಪೂಜಾರ್, ನವೀನ್‌ ಕುಮಾರ್, ನಾಗರಾಜ್, ಗೋವಿಂದರಾಜ್, ಚಿತ್ರದುರ್ಗ ಭೀಮ್ ಶಿಕ್ಷಣ ತರಬೇತಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಎಸ್.ಬೈಲಮ್ಮ, ತಮಟಕಲ್ಲು ಹನುಮಂತಪ್ಪ, ಸಿರಿಗೆರೆ ಗ್ರಾ.ಪಂ. ಅಧ್ಯಕ್ಷೆ ಹಾಲಮ್ಮ ಭೈರಪ್ಪ, ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಅಂಗನವಾಡಿ ಮುಖ್ಯಸ್ಥರು, ಸಿರಿಗೆರೆಯ ಶಾಲಾ ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

Share this article