ಕನ್ನಡ ಪ್ರಭ ವಾರ್ತೆ ಮುದ್ದೇಬಿಹಾಳ
ಕಲಿತ ವಿದ್ಯೆ ನಮ್ಮ ಸ್ವಹಿತದ ಜೊತೆಗೆ ದೇಶದ, ನಾಡಿನ ಏಳ್ಗೆಗೆ ಸಲ್ಲುವಂತಾಗಬೇಕು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ಟಾಪ್ ಇನ್ ಟೌನ್ ಹಾಲ್‌ನಲ್ಲಿ ಭಾನುವಾರ ಮುದ್ದೇಬಿಹಾಳ ವ್ಯಾಪಾರಸ್ಥರ ಸಂಘದವರು ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪಟ್ಟಣದ ಇಂದ್ರಾಣಿ ಫ್ಯಾಷನ್ ಮಾಲೀಕ ಗಜೇಂದ್ರ ಜೈನ್ ಅವರ ಪುತ್ರ ತರುಣ ಜೈನ್ ರನ್ನು ಸನ್ಮಾನಿಸಿ ಮಾತನಾಡಿದರು.ಉನ್ನತ ಪರೀಕ್ಷೆಯಲ್ಲಿ ಪಾಸಾಗಲು ಶ್ರಮಿಸಿ, ಮಾರ್ಗದರ್ಶನ ನೀಡಿದ ತಂದೆ, ತಾಯಿ, ಸಮಾಜದ, ದೇಶದ ಋಣ ತೀರಿಸುವ ಕೆಲಸವನ್ನು ಮಾಡಬೇಕು. ಮಾಜಿ ರಾಷ್ಟ್ರಪತಿ ದಿ.ಎ.ಪಿ.ಜೆ ಅಬ್ದುಲ್ ಕಲಾಂ ಅವರಂತೆ ದೇಶ ಸೇವೆಗೆ ನಮ್ಮ ಜ್ಞಾನ ಮೀಸಲಿಡಬೇಕು ಎಂದರು.
ವರ್ತಮಾನದಲ್ಲಿ ನಾವು ಹಣವನ್ನು ಭೌತಿಕವಾಗಿ ನೋಡದೇ ಡಿಜಿಟಲ್ ರೂಪದಲ್ಲಿ ಎಣಿಸುತ್ತಿದ್ದೇವೆ. ತಂತ್ರಜ್ಞಾನ ಆಧಾರಿತ ಹಣಕಾಸು ವ್ಯವಸ್ಥೆಗೆ ನಾವು ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂದು ಆಶಿಸಿದರು.ಕಸಾಪ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಮಹಾಂತಪ್ಪ ನಾವದಗಿ ಮಾತನಾಡಿ, ಶಿಕ್ಷಣದಲ್ಲಿ ಸಂಸ್ಕಾರ ಕಡಿಮೆಯಾಗುತ್ತಿದೆ. ನಾವು ಸಂಸ್ಕಾರವಂತರಾಗಿ ಸೇವೆ ನೀಡಬೇಕು ಎಂದರು.ಸಾಹಿತಿ ಅಶೋಕ ಮಣಿ ಮಾತನಾಡಿ, ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಪಾಸಾದವರು ದೊಡ್ಡ ದೊಡ್ಡ ನಗರಗಳಿಗೆ ಹೋಗುತ್ತಾರೆ. ತರುಣ ಜೈನ್ ಇಲ್ಲಿಯೇ ಇದ್ದುಕೊಂಡು ತಮ್ಮ ಸೇವೆ ನೀಡುವಂತಾಗಬೇಕು. ಜೈನ್ ಸಮಾಜಕ್ಕೆ ಕೀರ್ತಿ ತಂದಿದ್ದಾರೆ ಎಂದು ಶ್ಲಾಘಿಸಿದರು.
ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರಭು ಕಡಿ, ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿದರು. ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಮಾಜಿ ಅಧ್ಯಕ್ಷ ಬಾಬುಲಾಲ ಓಸ್ವಾಲ್, ಗಜೇಂದ್ರ ಜೈನ್ ಇದ್ದರು. ವಿವಿಧ ಸಂಘ, ಸಂಸ್ಥೆಗಳು ಸನ್ಮಾನಿಸಿದವು. ಮಹಾಬಲೇಶ್ವರ ಗಡೇದ ಸ್ವಾಗತಿಸಿದರು. ಡಾ.ವೀರೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಪಡದಾಳಿ ನಿರೂಪಿಸಿದರು. ಮಾಣಿಕಚಂದ ದಂಡಾವತಿ ವಂದಿಸಿದರು.