ಮೇಯರ್ ಚುನಾವಣೆ ಮುಂದಕ್ಕೆ

KannadaprabhaNewsNetwork | Published : Nov 29, 2023 1:15 AM

ಸಾರಾಂಶ

ಮಧ್ಯಾಹ್ನ 12.30ರ ಒಳಗೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಯಾರೂ ಕೂಡ ನಾಮಪತ್ರ ವಾಪಸ್ ಪಡೆಯದ ಹಿನ್ನೆಲೆ ಚುನಾವಣೆ ನಡೆಯಬೇಕಿತ್ತು. ಚುನಾವಣೆ ಅಧಿಕಾರಿಯಾಗಿದ್ದ ಕಲಬುರಗಿ ಪ್ರಾದೇಶಿಕ ಆಯುಕ್ತರು ಕಾರಣಾಂತರಗಳಿಂದ ಬರದೆ ಇರುವುದರಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ ಅವರು ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿಕಾಂಗ್ರೆಸ್ ನಾಯಕರ ನಡುವಿನ ಹೊಂದಾಣಿಕೆ ಕೊರತೆ ಹಾಗೂ ಎರಡು ಬಣಗಳ ರಾಜಕೀಯದಿಂದಾಗಿ ಮೇಯರ್ ಸ್ಥಾನಕ್ಕೆ ಮಂಗಳವಾರ ನಡೆಯಬೇಕಿದ್ದ ಚುನಾವಣೆ ಮುಂದೂಡಲಾಯಿತು. ಪ್ರಾದೇಶಿಕ ಆಯುಕ್ತರು ಆಗಮಿಸದ ಹಿನ್ನೆಲೆ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಘೋಷಿಸಿದರು.ಕಾಂಗ್ರೆಸ್‌ನಿಂದ ಇಬ್ಬರು, ಬಿಜೆಪಿ ಮತ್ತು ಪಕ್ಷೇತರ ತಲಾ ಒಬ್ಬ ಸದಸ್ಯರು ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಕಾಂಗ್ರೆಸ್‌ನ ಎರಡು ಗುಂಪುಗಳ ನಡುವಿನ ಪ್ರತಿಷ್ಠೆಯಿಂದಾಗಿ ಚುನಾವಣೆ ಮುಂದೂಡಬೇಕಾದ ಅನಿವಾರ್ಯತೆ ತಂದೊಡ್ಡಿತು. ಇದು ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ ಬಿಜೆಪಿ ಸದಸ್ಯರಿಗೂ ನಿರಾಸೆ ಮೂಡಿಸಿತು.ಆಗಿದ್ದೇನು? ಮುಂದೂಡಿಕೆ ಯಾಕೆ?:31ನೇ ವಾರ್ಡ್‌ನ ಸದಸ್ಯೆ ಶ್ವೇತಾ ಬಿ., 35ನೇ ವಾರ್ಡ್‌ನ ಮಿಂಚು ಶ್ರೀನಿವಾಸ್ ಹಾಗೂ 38ನೇ ವಾರ್ಡ್‌ನ ವಿ. ಕುಬೇರ ಮತ್ತು ಒಂದನೇ ವಾರ್ಡ್ ಬಿಜೆಪಿ ಸದಸ್ಯ ಗುಡಗಂಟಿ ಹನುಮಂತಪ್ಪ ಅವರು ಮೇಯರ್ ಸ್ಥಾನ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 12.30ರ ಒಳಗೆ ನಾಮಪತ್ರ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಯಾರೂ ಕೂಡ ನಾಮಪತ್ರ ವಾಪಸ್ ಪಡೆಯದ ಹಿನ್ನೆಲೆ ಚುನಾವಣೆ ನಡೆಯಬೇಕಿತ್ತು. ಚುನಾವಣೆ ಅಧಿಕಾರಿಯಾಗಿದ್ದ ಕಲಬುರಗಿ ಪ್ರಾದೇಶಿಕ ಆಯುಕ್ತರು ಕಾರಣಾಂತರಗಳಿಂದ ಬರದೆ ಇರುವುದರಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ ಅವರು ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು. ಬಿಜೆಪಿ ಸದಸ್ಯರು ವಿರೋಧ:ವಿ‌ನಾಕಾರಣದ ಚುನಾವಣೆ ಮುಂದೂಡಿಕೆಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ನಡೆಸಬೇಕು. ಇಲ್ಲವೇ ಚುನಾವಣೆ ಮುಂದೂಡಿಕೆಯ ಕಾರಣವನ್ನು ತಿಳಿಸಬೇಕು ಎಂದು ಪಟ್ಟು ಹಿಡಿದರು. ಆದರೆ, ಬಿಜೆಪಿ ಸದಸ್ಯರ ಒತ್ತಾಯಕ್ಕೆ ಮಣಿಯದೆ ಚುನಾವಣೆಯನ್ನು ಮುಂದೂಡಲಾಯಿತು. ಇದು ಬಿಜೆಪಿಯ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಕಾಂಗ್ರೆಸ್ ಬೆಂಬಲಿತ, ಪಕ್ಷೇತರ ಸದಸ್ಯ ಮಿಂಚು ಶ್ರೀನಿವಾಸ್ ಹಾಗೂ ಶ್ವೇತಾ ಅವರ ನಡುವೆ ಮೇಯರ್ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯಿತು. ಶಾಸಕ ನಾರಾ ಭರತ್ ರೆಡ್ಡಿ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಮಿಂಚು ಶ್ರೀನಿವಾಸ್ ಅವರ ಪರವಾಗಿ ಕಾಂಗ್ರೆಸ್‌ನ 14 ಸದಸ್ಯರಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ಈ ಬಾರಿ ಶ್ವೇತಾ ಅವರನ್ನು ಮೇಯರ್ ಮಾಡಬೇಕು ಎನ್ನುವ ಮಹಾದಾಸೆಯನ್ನು ಹೊಂದಿದ್ದು, ಶ್ವೇತಾ ಅವರ ಪರವಾಗಿ 12 ಸದಸ್ಯರಿದ್ದಾರೆ. ಮಿಂಚು ಶ್ರೀನಿವಾಸ್ ಪಕ್ಷೇತರ ಸದಸ್ಯರಾಗಿರುವುದರಿಂದ ಬಿಜೆಪಿ ಸದಸ್ಯರು ಕೂಡ ಬೆಂಬಲಿಸುವುದಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿದ ಹಿನ್ನೆಲೆ ಚುನಾವಣೆ ಪ್ರಕ್ರಿಯೆ ಮುಂದೂಡಲು ಕಾರಣವಾಯಿತು. ಈ ಬೆಳವಣಿಗೆ ಬಳ್ಳಾರಿ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯದ ಮೇಲಾಟ‌ ಮುನ್ನೆಲೆಗೆ ಬಂದಾಂತಾಗಿದೆ.ಎರಡನೇ ಅವಧಿಗೆ ನಿಗದಿಯಂತೆ ಮೇಯರ್ ಆಗಿದ್ದ ಡಿ. ತ್ರಿವೇಣಿ ಅವರು ಏಳು ತಿಂಗಳಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಉಳಿದ ಅವಧಿಗೆ ಚುನಾವಣೆ ನಡೆಸಲು ನ. 28ರಂದು ಚುನಾವಣೆ ನಿಗದಿಯಾಗಿತ್ತು.ಸದಸ್ಯರು ಬಿಕರಿಯಾದರೆ?:

ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಕೆಲ ಸದಸ್ಯರು ಬಿಕರಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಕೆಲ ಸದಸ್ಯರಿಗೆ ಬೆಂಬಲಿಸುವಂತೆ ₹10 ಲಕ್ಷದವರೆಗೆ ಡಿಮಾಂಡ್ ಇಡಲಾಗಿತ್ತು. ಅದರಲ್ಲಿ ₹8 ಲಕ್ಷದವರೆಗೆ ಡೀಲ್ ಕುದುರಿಸಲಾಗಿದೆ ಎನ್ನುವ ಮಾತುಗಳು ಕೇಳಿಬಂದವು.ಪ್ರಜಾಪ್ರಭುತ್ವದ ಕಗ್ಗೊಲೆ:

ಮೇಯರ್ ಚುನಾವಣೆ ಮುಂದೂಡಿಕೆಗೆ ಸೂಕ್ತ ಕಾರಣಗಳನ್ನು ಅಧಿಕಾರಿಗಳು ನೀಡಿಲ್ಲ. ಅಧಿಕಾರಿಗಳು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ ಎಂದರು ಪಾಲಿಕೆ ವಿರೋಧ ಪಕ್ಷದ ನಾಯಕ ಇಬ್ರಾಹಿಂ ಬಾಬು.ಎಡಿಸಿ ಹೇಳಿಕ:ಅನಿವಾರ್ಯ ಕಾರಣಗಳಿಂದ ಚುನಾವಣೆಯನ್ನು ಮುಂದೂಡುವಂತೆ ಕಲಬುರಗಿ ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದ್ದರು. ಅದರಂತೆ ಚುನಾವಣೆಯನ್ನು ಮುಂದೂಡಲಾಗಿದೆ ಎಂದರು ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ.

Share this article