ಎಂಸಿಸಿ ಬ್ಯಾಂಕ್‌: 13.12 ಕೋಟಿ ರು. ಲಾಭ, ರಾಜ್ಯಕ್ಕೆ ಕಾರ್ಯಕ್ಷೇತ್ರ ವಿಸ್ತರಣೆ

KannadaprabhaNewsNetwork |  
Published : Apr 06, 2024, 12:51 AM IST
ಅನಿಲ್‌ ಲೋಬೋ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಪ್ರಸ್ತುತ ಆರ್ಥಿಕ ವರ್ಷದ 14 ಸದಸ್ಯರ ಆಡಳಿತ ಮಂಡಳಿ 2023-28 ವರ್ಷಕ್ಕೆ ಅವಿರೋಧ ಆಯ್ಕೆಯಾಗಿದೆ. 28, ಅಗಸ್ಟ್‌ 2023ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ನನ್ನನ್ನು ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಕೆಥೋಲಿಕ್‌ ಕೋಪರೇಟಿವ್‌ ಬ್ಯಾಂಕ್‌ (ಎಂಸಿಸಿ) 2023-24ನೇ ವಿತ್ತೀಯ ವರ್ಷದಲ್ಲಿ 13.12 ಕೋಟಿ ರು. ಲಾಭ ಗಿಸಿದೆ. ಈ ಬಾರಿ ಕರ್ನಾಟಕ ರಾಜ್ಯಕ್ಕೆ ಕಾರ್ಯ ಕ್ಷೇತ್ರ ವಿಸ್ತರಣೆಗೊಳಿಸುತ್ತಿದ್ದು, ಶೀಘ್ರದಲ್ಲೇ ಕಾವೂರು, ಬೆಳ್ತಂಗಡಿ ಮತ್ತು ಶಿವಮೊಗ್ಗದಲ್ಲಿ ಹೊಸ ಶಾಖೆಗಳನ್ನು ತೆರೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೋ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 112 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಂಸಿಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2024 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಲೆಕ್ಕ ಪರಿಶೋಧನಾ ಪೂರ್ವ 13.12 ಕೋಟಿ ರು. ವ್ಯವಹಾರಿಕ ಲಾಭ ಗಳಿಕೆಯನ್ನು ದಾಖಲಿಸಿದೆ. ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರಥಮ ಬಾರಿಗೆ ಶೇ.1.07 ಎನ್.ಪಿ.ಎ. ದಾಖಲಿಸಿದೆ ಎಂದರು.ರಾಜ್ಯಕ್ಕೆ ಕಾರ್ಯ ವಿಸ್ತಾರ:ದಾಖಲೆಯ ಲಾಭ ಮತ್ತು ಕನಿಷ್ಠ ಎನ್.ಪಿ.ಎ. ಜೊತೆಗೆ 2023-2024ನೇ ವಿತ್ತೀಯ ವರ್ಷದಲ್ಲಿ ಬ್ಯಾಂಕ್ ಸ್ಥಾಪನೆಯಾದಂದಿನಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯ ಕ್ಷೇತ್ರವನ್ನು ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಹೀಗೆ ಐದು ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಪ್ರಸ್ತುತ ವರ್ಷ ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಲು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಅನುಮತಿ ದೊರಕಿದ್ದು, ಇದೊಂದು ಮಹತ್ವದ ಸಾಧನೆಯಾಗಿದೆ ಎಂದರು. ಈಗಾಗಲೇ ಬ್ರಹ್ಮಾವರದಲ್ಲಿ ಬ್ಯಾಂಕಿನ 17ನೇ ಶಾಖೆಯನ್ನು ತೆರೆದಿದ್ದು, ಕಾವೂರು, ಬೆಳ್ತಂಗಡಿ ಮತ್ತು ಶಿವಮೊಗ್ಗದಲ್ಲಿ ಶೀಘ್ರದಲ್ಲೇ ಶಾಖೆಗಳನ್ನು ತೆರೆಯಲಾಗುವುದು. ಅನಿವಾಸಿ ಭಾರತೀಯರರಿಗೆ (ಎನ್‌ಆರ್‌ಐ) ಸೇವಾ ಸೌಲಭ್ಯವನ್ನು ನೀಡುವ ಕರ್ನಾಟಕದ ಪಟ್ಟಣ ಸಹಕಾರಿ ಬ್ಯಾಂಕುಗಳ ಪೈಕಿ ಇದು ಎರಡನೇ ಬ್ಯಾಂಕ್ ಆಗಿರುತ್ತದೆ ಎಂದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 17 ಶಾಖೆಗಳನ್ನು ಹೊಂದಿರುವ ಎಂಸಿಸಿ ಬ್ಯಾಂಕ್ 2023-24 ವಿತ್ತೀಯ ವರ್ಷದಲ್ಲಿ ದಾಖಲೆಯ 13.12 ಕೋಟಿ ರು. ವ್ಯವಹಾರಿಕ ಲಾಭ ಗಳಿಸಿದೆ. 2023-24 ವಿತ್ತೀಯ ವರ್ಷದಲ್ಲಿ ಗಣನೀಯ ಪ್ರಮಾಣದಲ್ಲಿ ಬ್ಯಾಂಕಿನ ವ್ಯವಹಾರ ಪ್ರಗತಿಯನ್ನು ದಾಖಲಿಸಿದ್ದು, ಬ್ಯಾಂಕಿನ ನಿವ್ವಳ ಮೌಲ್ಯ (Net Worth) 62.45 ಕೋಟಿ ರು.ನಿಂದ 76.35 ಕೋಟಿ ರು.ಗೆ ತಲುಪಿದೆ ಎಂದರು.

ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂದ್ರೂ ಡಿಸೋಜಾ, ಡಾ. ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೋಜಾ, ಎಲೊಯ್ ಕಿರಣ್ ಕ್ರಾಸ್ಕೊ, ಹೆರಾಲ್ಡ್ ಮೊಂತೆರೊ, ರೋಶನ್ ಡಿಸೋಜಾ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ದಾನಾ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜಾ, ಆಲ್ವಿನ್ ಪಿ. ಮೊಂತೆರೊ, ಫೆಲಿಕ್ಸ್ ಡಿ ಕ್ರೂಜ್, ಶರ್ಮಿಳಾ ಮಿನೇಜಸ್, ಮಹಾಪ್ರಬಂಧಕ ಸುನಿಲ್ ಮಿನೇಜಸ್ ಇದ್ದರು.

ಆಡಳಿತ ಮಂಡಳಿ ಅವಿರೋಧ ಆಯ್ಕೆ

ಪ್ರಸ್ತುತ ಆರ್ಥಿಕ ವರ್ಷದ 14 ಸದಸ್ಯರ ಆಡಳಿತ ಮಂಡಳಿ 2023-28 ವರ್ಷಕ್ಕೆ ಅವಿರೋಧ ಆಯ್ಕೆಯಾಗಿದೆ. 28, ಅಗಸ್ಟ್‌ 2023ರಂದು ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ನನ್ನನ್ನು ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಬ್ಯಾಂಕಿನ ಸದಸ್ಯರು ಬ್ಯಾಂಕಿನ ಮೇಲೆ ಹೊಂದಿರುವ ವಿಶ್ವಾಸವೇ ಇದಕ್ಕೆ ಕಾರಣವಾಗಿದೆ ಎಂದು ಅನಿಲ್‌ ಲೋಬೋ ತಿಳಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ