ಕನ್ನಡಪ್ರಭ ವಾರ್ತೆ ಕೋಲಾರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡೆಂಘೀ ಜ್ವರ ಪ್ರಕರಣಗಳು ಏರಿಕೆಯಾಗುತ್ತಿದ್ದು, ಕೋಲಾರ ಜಿಲ್ಲೆಯಲ್ಲಿ ತಕ್ಕಮಟ್ಟಿಗೆ ನಿಯಂತ್ರಣದಲ್ಲಿದೆ.
ಇದೇ ವರ್ಷದ ಜನವರಿಯಿಂದ ಜೂನ್ ಅಂತ್ಯದವರೆಗೆ ಜಿಲ್ಲೆಯಲ್ಲಿ ೬೮೬ ಮಂದಿಯ ರಕ್ತ ಪರೀಕ್ಷೆಗಳನ್ನು ಮಾಡಿದ್ದು, ಇದರಲ್ಲಿ ೫೭ ಪ್ರಕರಗಳಲ್ಲಿ ಡೆಂಘೀ ಇರುವುದು ದೃಢಪಟ್ಟಿದೆ. ಆರೋಗ್ಯ ಇಲಾಖೆಯು ಜ್ವರದಿಂದ ಬಳಲುತ್ತಿರುವವರ ರಕ್ತದ ಮಾದರಿ ಸಂಗ್ರಹಿಸಿ ಅವುಗಳನ್ನು ಕೋಲಾರ ನಗರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಪಾಸಿಟಿವ್ ಬಂದರಷ್ಟೇ ಅವುಗಳನ್ನು ಆರೋಗ್ಯ ಇಲಾಖೆ ಡೆಂಘೀ ಎಂದು ದೃಢಪಡಿಸಿ ವರದಿ ರವಾನೆ ಮಾಡುತ್ತಿದೆ.ಈಗ ಸಂಗ್ರಹಿಸುತ್ತಿರುವ ರಕ್ತದ ಮಾದರಿಯಲ್ಲಿ ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯಾ ಪತ್ತೆ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಚಿಕೂನ್ ಗುನ್ಯಾ ೨೨ ಪ್ರಕರಣ ಹಾಗೂ ಮಲೇರಿಯಾ ಎರಡು ಪ್ರಕರಣ ಪತ್ತೆಯಾಗಿವೆ.ಜಿಲ್ಲೆಯಲ್ಲಿ ಮಲೇರಿಯಾ, ಡೆಂಘೀ ಹಾಗೂ ಚಿಕೂನ್ ಗುನ್ಯಾದಂತಹ ಸಮುದಾಯ ರೋಗಗಳು ತೀರಾ ಕಡಿಮೆ. ಹೊರ ರಾಜ್ಯಗಳಿಂದ ಬರುವವರಿಂದ ರೋಗಗಳು ಹರುಡುತ್ತಿವೆ. ಆದ್ದರಿಂದ ಆರೋಗ್ಯ ಇಲಾಖೆಯು ಇಂತಹವರನ್ನು ಗಮನಿಸಿ ರಕ್ತ ಪರೀಕ್ಷೆ ನಡೆಸುತ್ತಿದೆ. ಶ್ರೀನಿವಾಸಪುರ ತಾಲೂಕಿನ ಮಾವಿನ ಮಂಡಿಯಲ್ಲಿ ಉತ್ತರಪ್ರದೇಶದ ಇಬ್ಬರಿಗೆ ಮಲೇರಿಯಾ ದೃಢಪಟ್ಟ ಹಿನ್ನೆಲೆ, ಸುತ್ತಮುತ್ತ ೭೨ಕ್ಕೂ ಅಧಿಕ ವ್ಯಕ್ತಿಗಳಿಗೆ ರಕ್ತ ಪರೀಕ್ಷೆ ನಡೆಸಲಾಯಿತು. ಉಳಿದವರಲ್ಲಿ ಕಾಣಿಸಿಕೊಂಡಿಲ್ಲ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ರವಿಕುಮಾರ್ ವಿವರಿಸಿದರು.ಜಿಲ್ಲೆಯಲ್ಲಿ ಡೆಂಘೀ ಪ್ರಕರಣ
ಶ್ರೀನಿವಾಸಪುರದಲ್ಲಿ: ೫ ಪ್ರಕರಣ. ಮುಳಬಾಗಿಲು: ೭ ಪ್ರಕರಣ. ಬಂಗಾರಪೇಟೆ: ೧೧. ಕೆಜಿಎಫ್: ೭ ಪ್ರಕರಣ. ಕೋಲಾರ: ೧೯ ಪ್ರಕರಣ. ಮಾಲೂರು: ೮ ಪ್ರಕರಣ. ಒಟ್ಟು; ೫೭ ಪ್ರಕರಣಗಳು ದಾಖಲಾಗಿದೆ.ಡೆಂಘೀ ನಿಯಂತ್ರಣಕ್ಕೆ ಸಿದ್ಧತೆಡೆಂಘೀ ನಿಯಂತ್ರಣ ಕ್ರಮಗಳ ಜೂತೆಗೆ ಝೀಕಾ ವೈರಸ್ ಬಗ್ಗೆ ಜಿಲ್ಲೆಯ ಎಲ್ಲಾ ತಾಲೂಕು ಆರೋಗ್ಯಾಧಿಕಾರಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ. ಆಶಾ ಕಾರ್ಯಕರ್ತರು ಮನೆ, ಮನೆಗೆ ಭೇಟಿ ನೀಡಬೇಕು. ವೈದ್ಯಾಧಿಕಾರಿಗಳು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿಜ್ಞಾನ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಲ್ಲಿ ಡೆಂಘೀ ಮತ್ತು ಝೀಕಾ ವೈರಸ್‌ಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ ಎಂದು ಡಿಹೆಚ್‌ಓ ಡಾ.ಜಗದೀಶ್ ತಿಳಿಸಿದರು.