ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ: ಜಿಲ್ಲಾಧಿಕಾರಿ ಸುಶೀಲಾ.ಬಿ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಜಿಲ್ಲೆಯ ವಿವಿಧ ಗ್ರಾಮ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಮುಂಜಾಗ್ರತೆ ವಹಿಸುವಂತೆ ವಿವಿಧ ಇಲಾಖೆ ಅಧಿಕಾರಿಗಳೊಡನೆ ಟಿಸಿ ಡಾ.ಬಿ. ಸುಶೀಲಾ ಬರಗಾಲ ಮುಂಜಾಗ್ರತಾ ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮುಂಬರುವ ಬೇಸಿಗೆ ಸಮಯದಲ್ಲಿ ಸಂಭವನೀಯ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಜಿಲ್ಲೆಯ ವಿವಿಧ ಗ್ರಾಮ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಅವಶ್ಯಕ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಬರಗಾಲ ಮುಂಜಾಗ್ರತಾ ಕ್ರಮಗಳ ಕುರಿತು ಸಭೆ ನಡೆಸಿ ಮಾತನಾಡಿದರು. ಸರ್ಕಾರವು ಜಿಲ್ಲೆಯ ಆರು ತಾಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಇನ್ನು ಚುರುಕಾಗಿ ಮತ್ತು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಮುಂಬರುವ ಬೇಸಿಗೆ ಸಮಯದಲ್ಲಿ ಜಿಲ್ಲೆಯ ಸಂಭವನೀಯ ಕುಡಿಯುವ ನೀರಿನ ಸಮಸ್ಯೆ ಆಗಬಹುದಾದ ಗ್ರಾಮಗಳ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಲು ಸೂಚಿಸಿದರು.

ಬರ ಸಿದ್ಧತೆಗೆ ಸಂಬಂಧಿಸಿದಂತೆ ತಾಲೂಕು ವಾರು ಸಮಿತಿಗಳು ರಚನೆಯಾಗಿ, ಮೊದಲ ಹಂತದ ಸಭೆ ನಡೆಸಿದ್ದು, ಮುಂದಿನ ಒಂದು ವಾರದ ಅವಧಿಯಲ್ಲಿ ಎರಡನೇ ಸುತ್ತಿನ ಸಭೆ ನಡೆಸಬೇಕು. ಆಯಾ ತಹಸೀಲ್ದಾರ್‌ರು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು, ತಾಪಂ ಇಒಗಳು, ಕಾರ್ಯ ನಿರ್ವಾಹಕ ಅಭಿಯಂತರರು ಸೇರಿ ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಈಗಿನಿಂದಲೇ ಸಿದ್ಧತೆಯಲ್ಲಿ ತೊಡಗಬೇಕು ಎಂದರು.

ಅದರಂತೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆ ಸೇರಿ ಸಂಬಂಧಪಟ್ಟ ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಪರಸ್ಥಿತಿ ಅರಿತುಕೊಂಡು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳ ಸಮನ್ವಯದೊಂದಿಗೆ ಗುರುತಿಸಿದ ಗ್ರಾಮಗಳಲ್ಲಿ ಸಂಭವನೀಯ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಚಿಸಿದರು.

ಖಾಸಗಿ ಬೋರ್ವೆಲ್ ಗುರುತಿಸಿ: ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಖಾಸಗಿ ಬೋರ್ವೆಲ್ ಗುರುತಿಸಿ, ಅದರಂತೆ ಕುಡಿಯುವ ನೀರಿನ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಬಗ್ಗೆ ಅವಶ್ಯಕತೆಗೆ ಅನುಗುಣವಾಗಿ ನಿಯಮಾವಳಿಗಳ ಅನ್ವಯ ಟೆಂಡರ್ ಕರೆದು ಸೂಕ್ತ ಕ್ರಮ ಕೈಗೊಳ್ಳಲು, ಮತ್ತು 15 ದಿನಗಳ ಒಳಗಾಗಿ ಬಿಲ್ ಪಾವತಿ ಕುರಿತಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಈಗಾಗಲೇ ಸಂಭವನೀಯ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮ ಗುರುತಿಸಲಾಗಿದ್ದು, ಖಾಸಗಿ ಬೋರ್ವೆಲ್ ಮತ್ತು ತೆರೆದ ಬಾವಿಗಳಿಂದ ಬಾಡಿಗೆ ಆಧಾರದ ಮೇಲೆ ನೀರನ್ನು ಸರಬರಾಜು ಮಾಡಲು ನಿಯಮಾವಳಿ ಪಾಲಿಸಲು ತಿಳಿಸಿದರು.

ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ವಾರ್ಡ್ ಬಗ್ಗೆ ಸಮಗ್ರ ಮಾಹಿತಿ ಇಟ್ಟುಕೊಂಡು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ದುರಸ್ತಿ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಜಿಪಂ ಮುಖ್ಯ ಯೋಜನಾಧಿಕಾರಿ ಗುರುನಾಥ ಗೌಡಪ್ಪನ್ನೋರ್, ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ ಸೇರಿ ಎಲ್ಲಾ ಇಲಾಖೆ ತಹಸೀಲ್ದಾರರು, ವಿವಿಧ ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು.

Share this article