ಕನ್ನಡಪ್ರಭ ವಾರ್ತೆ ಹಾಸನ
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮೇದಿನಿ ನೃತ್ಯ ನಿಕೇತನ ನೃತ್ಯ ಶಾಲೆಯ ೨೫ನೇ ವರ್ಷದ ಮೇದಿನಿ ಬೆಳ್ಳಿ ಸಂಭ್ರಮ ಮತ್ತು ಸಿಂಹಾಸನಪುರಿ ವೈಭವ ನೃತ್ಯ ರೂಪಕ ಪ್ರಸ್ತುತಿ ಕಾರ್ಯಕ್ರಮವನ್ನು ಆಗಸ್ಟ್ ೧೧ರಂದು ಸಂಜೆ ೪ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ವಿದುಷಿ ಭಾನು ಚಿದಾನಂದ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಮೇದಿನಿ ಬೆಳ್ಳಿ ಸಂಭ್ರಮ ಮತ್ತು ಸಿಂಹಾಸನಪುರಿ ವೈಭವ ನೃತ್ಯ ರೂಪಕದ ಕಾರ್ಯಕ್ರಮವನ್ನು ಭಾರತೀಯ ಸಂಗೀತ ನೃತ್ಯ ಶಾಲೆಯ ಗುರು ವಿದುಷಿ ಕೆ.ಎಸ್. ಅಂಬಳೆ ರಾಜೇಶ್ವರಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾದ ಡಾ. ವಿಜಯ ಅಂಗಡಿ, ಟಿ.ಪಿ. ರಂಗನಾಥ್ ಗುಪ್ತ ಇತರರು ಭಾಗವಹಿಸಲಿದ್ದಾರೆ ಎಂದರು.ಗುರು ವಿದುಷಿ ಭಾನುಚಿದಾನಂದರವರ ಮಾರ್ಗದರ್ಶನದಲ್ಲಿ ೧೯೯೯ನೇ ಫೆಬ್ರವರಿ ೧೫ರಂದು ಕೇವಲ ೩ ವಿದ್ಯಾರ್ಥಿಗಳಿಂದ ಪ್ರಾರಂಭವಾದ "ಮೇದಿನಿ ನೃತ್ಯ ನಿಕೇತನ "ವು ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿ ೨೫ನೇ ವರ್ಷದ ಬೆಳ್ಳಿ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಸರ್ಕಾರವು ನಡೆಸುವ ಭರತನಾಟ್ಯ ಕಿರಿಯ ಹಿರಿಯ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಉನ್ನತ, ಅತ್ಯುನ್ನತ ಶ್ರೇಣಿಗಳಲ್ಲಿ ತೇರ್ಗಡೆಯಾಗಿರುವ ಜೊತೆಗೆ ಕೆಲವು ವಿದ್ಯಾರ್ಥಿಗಳು ಜಿಲ್ಲೆಗೆ ಹಾಗೂ ರಾಜ್ಯಕ್ಕೆ ೫ ಶ್ರೇಣಿಗಳ ಒಳಗೆ ತೇರ್ಗಡೆ ಹೊಂದಿರುತ್ತಾರೆ. ನಿಕೇತನದ ವತಿಯಿಂದ ಅರ್ಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಜಿಲ್ಲೆ ಹಾಗೂ ರಾಜ್ಯಾದ್ಯಂತ ಅನೇಕ ಪ್ರಸಿದ್ಧ ವೇದಿಕೆಗಳಲ್ಲಿ ಹಲವಾರು "ನೃತ್ಯ ರೂಪಕ "ಗಳ ಜೊತೆಗೆ ನೃತ್ಯ ಪ್ರದರ್ಶನವನ್ನು ಯಶಸ್ವಿಯಾಗಿ ನೀಡಿದ್ದು, ಅನೇಕ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಮೊದಲ ೩ ಸ್ಥಾನಗಳಲ್ಲಿ ಒಬ್ಬರಾಗಿ ನಿಕೇತನದ ಗೌರವವನ್ನು ಇಮ್ಮಡಿಗೊಳಿಸಿದ್ದಾರೆ. ಹಲವಾರು ಮಕ್ಕಳು ಪ್ರತಿಭಾ ಕಾರಂಜಿ, ಚಿಗುರು, ಯುವ ಪ್ರತಿಭೆಗಳಲ್ಲೂ ಭಾಗವಹಿಸಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಕಳೆದ ಮಾರ್ಚ್ ೨೦೨೩ ರಿಂದ ಫೆಬ್ರವರಿ ೨೦೨೪ರವರೆಗೂ ವರ್ಷವಿಡಿ ಪ್ರತೀ ತಿಂಗಳ ಕಡೆಯ ಶನಿವಾರದಂದು "ತೆರೆಮರೆಯ ಕಲಾತಾರೆ " ಮತ್ತು "ಯುವ ಪ್ರತಿಭಾ ಪರಿಚಯ " ಕಾರ್ಯಕ್ರಮದ ಅಡಿಯಲ್ಲಿ ಹುದುಗಿರುವ ಅನೇಕ ಕಲಾವಿದರನ್ನು ಕಲಾರಂಗಕ್ಕೆ ಪರಿಚಯಿಸಿರುವ ಹೆಗ್ಗಳಿಕೆ ನಿಕೇತನದ್ದಾಗಿದೆ ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸ್ವಪ್ನ ರಂಗಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.