ಮಾಧ್ಯಮ ಜನತೆಯ ಜೀವನದ ಅವಿಭಾಜ್ಯ ಅಂಗ

KannadaprabhaNewsNetwork | Published : Jul 14, 2024 1:41 AM

ಸಾರಾಂಶ

ಪತ್ರಿಕೋದ್ಯಮವು ಇಂದು ಸಮೂಹ ಮಾಧ್ಯಮ ಆಗುವುದರೊಂದಿಗೆ ಬೃಹತ್‌ ಉದ್ದಿಮೆಯಾಗಿ ಮಾರ್ಪಟ್ಟಿದೆ. ಅದರ ಜತೆ ಸಂಶೋಧನೆ, ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಎಲ್ಲ ವರ್ಗದ ಜನರಿಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಹೊರಸೂಸುವ ಪ್ರಮುಖ ಅಂಗವಾಗಿ ಮಾರ್ಪಟ್ಟಿದೆ.

ಹುಬ್ಬಳ್ಳಿ:

ಮಾಧ್ಯಮ ರಂಗವು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ ಎಂದು ಬೆಂಗಳೂರಿನ ನೃಪತುಂಗ ವಿವಿ ಉಪಕುಲಪತಿ ಶ್ರೀನಿವಾಸ ಬಳ್ಳಿ ಹೇಳಿದರು.

ಅವರು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಕೇಂದ್ರದ ಚಂದ್ರವದನ ದೇಸಾಯಿ ಸಭಾಂಗಣದಲ್ಲಿ ಲೋಕಹಿತ ಟ್ರಸ್ಟ್‌ ಹಾಗೂ ವಿಶ್ವ ಸಂವಾದ ಕೇಂದ್ರದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಆದ್ಯ ಪತ್ರಕರ್ತ ಮಹರ್ಷಿ ನಾರದ ಜಯಂತಿ ಹಾಗೂ ಸನ್ಮಾನ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಈ ಜಗತ್ತಿನ ಮೊದಲ ಪತ್ರಕರ್ತರು ಶ್ರೀ ನಾರದ ಮಹರ್ಷಿಗಳು. ದೇವಲೋಕ, ದಾನವಲೋಕ ಹಾಗೂ ಭೂಲೋಕ ಮೂರು ಕಡೆಗಳಲ್ಲಿ ಸಂಚರಿಸಿ ಲೋಕಕಲ್ಯಾಣಕ್ಕಾಗಿ ಶ್ರಮಿಸಿದವರು. ಅಂತಹ ಶ್ರೀನಾರದ ಮಹರ್ಷಿಗಳ ಜಯಂತಿ ಆಚರಿಸುತ್ತಿರುವ ಸಂಘಟಕರ ಕಾರ್ಯ ಶ್ಲಾಘನೀಯ. ಎಲ್ಲಿಯೇ ಹೋದರೂ ಗೌರವಾಧರಗಳು ಲಭಿಸಲಿವೆ ಎಂದರೆ ಅದು ಪತ್ರಕರ್ತರಿಗೆ ಮಾತ್ರ. ಪತ್ರಿಕೋದ್ಯಮವು ಇಂದು ಸಮೂಹ ಮಾಧ್ಯಮ ಆಗುವುದರೊಂದಿಗೆ ಬೃಹತ್‌ ಉದ್ದಿಮೆಯಾಗಿ ಮಾರ್ಪಟ್ಟಿದೆ. ಅದರ ಜತೆ ಸಂಶೋಧನೆ, ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಎಲ್ಲ ವರ್ಗದ ಜನರಿಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಹೊರಸೂಸುವ ಪ್ರಮುಖ ಅಂಗವಾಗಿ ಮಾರ್ಪಟ್ಟಿದೆ ಎಂದರು.

ಸನ್ಮಾನ ಸ್ವೀಕರಿಸಿದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಶ್ರೀ ನಾರದ ಮಹರ್ಷಿಗಳು ನಮ್ಮ (ಪತ್ರಕರ್ತರು) ಪೂರ್ವಿಕರು ಎಂದು ಹೆಮ್ಮೆಯಿಂದ ಹೇಳುವೆ. ಪ್ರತಿಯೊಬ್ಬ ಪತ್ರಕರ್ತನೂ ತ್ರಿಲೋಕ ಸಂಚಾರಿಗಳಿದ್ದಂತೆ. ಅವರ ನಿತ್ಯ ಬದುಕಿನಲ್ಲಿ ಮಾನವ, ದಾನವ, ಕೆಟ್ಟವರು, ಒಳ್ಳೆಯವರು, ಕೊಲೆಗಡುಕರು ಹೀಗೆ ಎಲ್ಲ ವರ್ಗದ ಜನರನ್ನು ಭೇಟಿಯಾಗುತ್ತಾನೆ ಎಂದರು.

ಅಸ್ಪೃಶ್ಯತೆ ಜೀವಂತ:

ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿರುವುದು ದುರ್ದೈವದ ಸಂಗತಿ. ಭಾರತವು ಇಂದು ಆಹಾರ, ನೀರು, ವೈದ್ಯಕೀಯ, ಶೈಕ್ಷಣಿರ ರಂಗದಲ್ಲಿ ಸ್ವಾವಲಂಬನೆ ಹೊಂದಿ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ತಂತ್ರಜ್ಞಾನದಲ್ಲಿ ಹೆಚ್ಚಿನ ಸಾಧನೆ ಮಾಡುತ್ತಾ ಮುನ್ನಡೆದಿದ್ದೇವೆ. ಇವೆಲ್ಲವುಗಳ ನಡುವೆ ಭಾರತ ಹಲವು ಕೊರತೆ ಎದುರಿಸುತ್ತಿರುವುದು ಸುಳ್ಳಲ್ಲ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಸಂಪತ್ತಿನ ಸಮಾನ ಹಂಚಿಕೆಯಾಗದ ಹಿನ್ನೆಲೆಯಲ್ಲಿ ಇಂದಿಗೂ ಶ್ರೀಮಂತರು ಶ್ರೀಮಂತರಾಗಿ ಮುಂದೆ ಸಾಗುತ್ತಿದ್ದರೆ, ಬಡವರು ಬಡವರಾಗಿಯೇ ತುತ್ತು ಅನ್ನಕ್ಕಾಗಿ ಪರಿತಪಿಸುವ ಸ್ಥಿತಿ ಇಂದಿಗೂ ಮುಂದುವರಿದಿದೆ ಎಂದ ಅವರು, ಈ ಜಾತಿ ವ್ಯವಸ್ಥೆಯಿಂದ ಬೇಸತ್ತು ಡಾ. ಬಿ.ಆರ್‌. ಅಂಬೇಡ್ಕರ್‌ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಇಂದಿಗೂ ಪ್ರತಿವರ್ಷ 5 ಲಕ್ಷಕ್ಕೂ ಅಧಿಕ ಜನರು ಬೌದ್ಧ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಅಸ್ಪೃಶ್ಯತೆ ಜೀವಂತವಾಗಿರುವುದು ಎಂದು ವಿಷಾಧಿಸಿದರು.

ದೇಶದಲ್ಲಿ ಹಲವು ವರ್ಷಗಳಿಂದ ಲಕ್ಷಾಂತರ ಮಹಿಳೆಯರ ಅಪಹರಣವಾಗಿವೆ. 3 ವರ್ಷಗಳಲ್ಲಿ ದೇಶದಲ್ಲಿ 13 ಲಕ್ಷಕ್ಕೂ ಅಧಿಕ ಮಹಿಳೆಯರು ಇದರಲ್ಲಿ ಶೇ. 81ರಷ್ಟು ಹಿಂದೂ ಮಹಿಳೆಯರು ಅಪಹರಣವಾಗಿರುವ ವರದಿಯಾಗಿದೆ. ಹುಬ್ಬಳ್ಳಿಯಲ್ಲೂ ಈ ಜಾಲ ವ್ಯಾಪಕ, ವ್ಯವಸ್ಥಿತವಾಗಿ ನಡೆಯುತ್ತಿದೆ. ಗುಜ್ಜರ ಮದುವೆ ಎಂಬ ವ್ಯವಸ್ಥಿತ ದೊಡ್ಡ ಜಾಲವಿದೆ ಎಂದು ಸಿದ್ದಣ್ಣವರ ಹೇಳಿದರು.

ಘರ ವಾಪ್ಸಿಯಾಗಲಿ:

ಅಪಹರಣವಾದ ಹೆಣ್ಣುಮಕ್ಕಳು ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ದುರ್ದೈವದ ಸಂಗತಿ. ಅನ್ಯ ಧರ್ಮಕ್ಕೆ ಮತಾಂತರಗೊಂಡವರನ್ನು ಮರಳಿ ತಮ್ಮ ಧರ್ಮಕ್ಕೆ ಕರೆಸಿಕೊಳ್ಳುವ ಘರ್‌ ವಾಪ್ಸಿಯಂತೆ ಅಪಹರಣಕ್ಕೊಳಗಾಗಿರುವ ಮಹಿಳೆಯರನ್ನು ರಕ್ಷಿಸಿ ಅವರನ್ನು ಮರಳಿ ತಮ್ಮ ಮನೆಗೆ ಕರೆತರುವ ಘರ್‌ ವಾಪ್ಸಿ ಎಲ್ಲೆಡೆಯು ನಡೆಯುವಂತಾಗಲಿ ಎಂದರು.

ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದ ಲೋಕಹಿತ ಟ್ರಸ್ಟ್ ವಿಶ್ವಸ್ಥರಾದ ಗೋವಿಂದಪ್ಪ ಗೌಡಪ್ಪಗೋಳ, ನಾರದ ಮಹರ್ಷಿ ಜಗತ್ತಿಜನ ಮೊದಲ ಪತ್ರಕರ್ತನ ಕೆಲಸ ಮಾಡಿದವರು. ಬೇಡನಾಗಿದ್ದ ವಾಲ್ಮಿಕಿಯನ್ನು ಮರಾ ಮರಾ ಜಪ ಮಾಡಲು ಹಚ್ಚಿ ಮಹರ್ಷಿ ಮಾಡುವ ಮೂಲಕ ರಾಮಾಯಣ ಮಹಾಕಾವ್ಯ ರಚನೆಗೆ ಕಾರಣರಾದರು. ದೇವ-ದಾನವರೊಂದಿಗೆ ಸಂಪರ್ಕ, ಸಂಹನ ನಡೆಸುತ್ತಿದ್ದರೂ ಉಭಯೇತರ ಗೌರವಕ್ಕೆ ಪಾತ್ರರಾಗಿದ್ದರು. ಈ ನಡೆ ಇಂದಿನ ಪತ್ರಕರ್ತರಿಗೆ ಮಾದರಿ ಎಂದು ಬಣ್ಣಿಸಿದರು.

ಈ ವೇಳೆ ಮಲ್ಲಿಕಾರ್ಜುನ ಸಿದ್ದಣ್ಣವರ ಹಾಗೂ ಹಿರಿಯ ಛಾಯಾಗ್ರಾಹಕ ಗಣಪತಸಾ ಜರತಾರಘರ ಅವರನ್ನು ಸನ್ಮಾನಿಸಲಾಯಿತು. ಆರ್‌ಎಸ್‌ಎಸ್‌ ಕರ್ನಾಟಕ ಪ್ರಾಂತ ಪ್ರಮುಖ ಅರುಣಕುಮಾರಜಿ, ಲಿಂಗರಾಜ ಪಾಟೀಲ, ಶಶಿಧರ ನರೇಂದ್ರ, ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ಜಮಾದಾರ, ವಿಶ್ರಾಂತ ಬಿಇಒ ಬಸವರಾಜ ಶಿವಪುರ, ಪ್ರಭು ಉಮದಿ ಸೇರಿದಂತೆ ಹಲವರಿದ್ದರು.

Share this article