ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕಸಾಪ ಆಶ್ರಯದಲ್ಲಿ ಉಪನ್ಯಾಸ ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಟಿವಿ ಮಾದ್ಯಮಗಳು ಜನರ ದ್ವನಿಯಾಗಬೇಕು. ತೀರ್ಪುಗಾರರಾಗಬಾರದು ಎಂದು ದೂರದರ್ಶನ ಚಂದನ ವಾಹಿನಿ ವಾರ್ತಾ ವಾಚಕಿ, ನಿರೂಪಕಿ ಎಚ್.ಚೇತನಾ ರಾಜೇಂದ್ರ ಸಲಹೆ ನೀಡಿದರು.ಬುಧವಾರ ಪಟ್ಟಣದ ಸಿಂಸೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತಾ. ಕಸಾಪ ಆಶ್ರಯದಲ್ಲಿ ನಡೆದ ಕನ್ನಡ ಡಿಂಡಿಮ ಕಾರ್ಯಕ್ರಮದಲ್ಲಿ ದೃಶ್ಯ ಮಾದ್ಯಮದಲ್ಲಿ ಕನ್ನಡ ಭಾಷಾ ಬೆಳವಣಿಗೆ ಎಂಬ ವಿಷಯದ ಉಪನ್ಯಾಸ ನೀಡಿದರು. ಇಂದು ಹಲವಾರು ಖಾಸಗಿ ಟಿವಿ ಚಾನಲ್ ಗಳು ಕನ್ನಡ ಭಾಷೆ ಬಗ್ಗೆ ಚರ್ಚೆ ನಡೆಸುತ್ತಾರೆ. ಆದರೆ, ಟಿವಿ ಚಾನಲ್ ಹೆಸರಿನಿಂದ ಹಿಡಿದು ಎಲ್ಲವೂ ಇಂಗ್ಲಿಷ್ ಮಯವಾಗಿದೆ. ಚಾನಲ್ ಗಳಿಗೆ ಇಂದು ಜವಾಬ್ದಾರಿ ಹೆಚ್ಚಿದ್ದು ಯುವ ಜನರಿಗೆ ಒಳ್ಳೆಯ ಸಂದೇಶ ನೀಡಬೇಕು. ಚಂದನ ವಾಹಿನಿ ಸುದ್ದಿಯಲ್ಲಿ ನಿಖರತೆ, ಕನ್ನಡ ಭಾಷೆಗೆ ಹೆಚ್ಚು ಪ್ರಾಮುಖ್ಯತೆ ಹಾಗೂ ಸಮಾಜಕ್ಕೆ ಉಪಯುಕ್ತ ಕಾರ್ಯಕ್ರಮ ನೀಡುತ್ತದೆ. ಟಿಆರ್‌ಪಿ ಹೆಚ್ಚಿಸಲು ಹಲವಾರು ಖಾಸಗಿ ಚಾನಲ್ ಗಳು ವೇಗವಾಗಿ ಸುದ್ದಿ ನೀಡಲು ಹೋಗಿ ಸುಳ್ಳು ಸುದ್ದಿ ನೀಡುತ್ತದೆ. ಇದಕ್ಕೆ ಕಡಿವಾಣ ಅಗತ್ಯ.
ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಬಾರದು. ಟಿವಿಗಳು ಮನರಂಜನೆ, ಮಾಹಿತಿ, ಶಿಕ್ಷಣ ನೀಡಬೇಕು.ಇಂದು ಖಾಸಗಿ ಟಿವಿಗಳು ಮನರಂಜನೆ ನೀಡುತ್ತದೆ. ಶಿಕ್ಷಣ ನೀಡುವುದಿಲ್ಲ. ಎಲ್ಲವೂ ವ್ಯವಹಾರವಾಗಿದೆ ಎಂದರು.ವಿದ್ಯಾರ್ಥಿಗಳು ಕನ್ನಡ ಬಾಷೆ ಬಗ್ಗೆ ಪ್ರೀತಿ ಬೆಳೆಸಿಕೊಂಡು ಪ್ರತಿ ತಿಂಗಳು ಒಂದು ಕನ್ನಡ ಪುಸ್ತಕ ವನ್ನಾದರೂ ಓದಬೇಕು. ಇಂದು ಕನ್ನಡ ದಿನ ಪತ್ರಿಕೆಗಳು ಹಾಗೂ ಆಕಾಶವಾಣಿಯಲ್ಲಿ ಕನ್ನಡ ಭಾಷೆ ಬೆಳವಣಿಗೆಯಾಗಿದೆ. ಆದರೆ, ದೃಶ್ಯ ಮಾದ್ಯಮದಲ್ಲಿ ಮಾತ್ರ ಇಂಗ್ಲಿಷ್ ಬಳಕೆ ಹೆಚ್ಚಿದೆ ಎಂದು ವಿಷಾದಿಸಿದರು. ನಂತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.
ವಕೀಲ ಎಸ್.ಎಸ್.ಸಂತೋಷ್ ಕುಮಾರ್ ಭಾಷಣ ಮಾಡಿ, ಕಸಾಪ ಹಿಂದಿನಿಂದಲೂ ಕನ್ನಡ ಭಾಷೆ ಬೆಳೆವಣಿಗೆ ಹೆಚ್ಚು ಒತ್ತು ನೀಡುತ್ತಿದೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ್ದರೂ ಅನ್ಯ ಭಾಷೆಗಳ ಸ್ಪರ್ಧೆ ಎದುರಿಸಬೇಕಾಗಿದೆ. ದೂರದರ್ಶನ ಚಂದನ ವಾಹಿನಿ ಕನ್ನಡ ನೆಲದ ಸೊಗಡು ಬಿಂಬಿಸುವ ಗುಣ ಮಟ್ಟದ ಕಾರ್ಯಕ್ರಮ ಬಿತ್ತರಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕಳೆದ 2 ತಿಂಗಳಲ್ಲಿ ಶ್ರಾವಣ ಸಂಜೆ, ಕನ್ನಡ ಡಿಂಡಿಮ ಕಾರ್ಯಕ್ರಮ ಮಾಡಿದ್ದೇವೆ. ಎಲ್ಲಾ ಶಾಲೆಗಳ ಮಕ್ಕಳಿಗೆ ಕನ್ನಡದಲ್ಲಿ ಸುಂದರವಾಗಿ ಬರೆಯುವ ಸ್ಪರ್ಧೆ ನಡೆಸಿದ್ದೇವೆ. ನರಸಿಂಹರಾಜಪುರದಲ್ಲಿ ಕನ್ನಡ ಭವನ ಕಟ್ಟಲು ನಿವೇಶನ ನೀಡಬೇಕು. ಗ್ರಂಥಾಲಯ ಸ್ಥಾಪಿಸಬೇಕು ಎಂದು ಪಟ್ಟಣ ಪಂಚಾಯಿತಿಯನ್ನು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಎರಡು ಕೈಗಳಲ್ಲಿ ಏಕ ಕಾಲಕ್ಕೆ ಬರೆಯುವ ಕಲೆಯನ್ನು ಪ್ರದರ್ಶಿಸಿದ ಬೆಂಗಳೂರಿನ ಎಚ್.ಸಂಜನಾ ರಾಜೇಂದ್ರ , ಚಂದನ ವಾಹಿನಿ ನಿರೂಪಕಿ ಚೇತನಾ ರಾಜೇಂದ್ರ, ಬರಹಗಾರರಾದ ಡಾ.ಸುರೇಶ್ ಕುಮಾರ್, ದೀಪಕ್ ನಿಡಘಟ್ಟ,ಸೀಗುವಾನಿ ಸಂತೋಷ್ ಹಾಗೂ ಪ್ರಾಂಶುಪಾಲ ಅಜ್ಜಪ್ಪ ಅವರನ್ನು ಅಭಿನಂದಿಸಲಾಯಿತು.ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಂಶುಪಾಲ ಎಚ್.ಇ.ಅಜ್ಜಪ್ಪ, ಮುಖ್ಯ ಅತಿಥಿಗಳಾಗಿ ಕಸಾಪ ಜಿಲ್ಲಾ ಸಂಚಾಲಕ ಎಚ್.ಡಿ.ವಿನಯ, ಕಸಾಪ ಕಸಬಾ ಹೋಬಳಿ ಅಧ್ಯಕ್ಷೆ ಜುಬೇದ, ಜೇಸಿ ಸಂಸ್ಥೆಯ ನಿಯೋಜಿತ ಅಧ್ಯಕ್ಷ ಮನು ಅಬ್ರಾಹಂ ಉಪಸ್ಥಿತರಿದ್ದರು. ವಹೀದ, ಭಾಗ್ಯ , ರಾಮಕೃಷ್ಣ ಇದ್ದರು.