ಎಲೆಚಾಗಹಳ್ಳಿಯಲ್ಲಿ ಸಮುದಾಯ ಆಧಾರಿತ ತಪಾಸಣಾ ಶಿಬಿರ

KannadaprabhaNewsNetwork | Published : Nov 12, 2023 1:02 AM

ಸಾರಾಂಶ

ಹೊಳೆನರಸೀಪುರ ತಾಲೂಕಿನ ಎಲೆಚಾಗಹಳ್ಳಿ ಗ್ರಾಮದಲ್ಲಿ ಹಳ್ಳಿಮೈಸೂರು ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿ ವಿಭಾಗದಿಂದ ಸಮುದಾಯ ಆಧಾರಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ನಮ್ಮ ಭಾರತ ದೇಶವನ್ನು ೨೦೩೦ರ ಒಳಗೆ ಎಚ್‌ಐವಿ ಅಥವಾ ಏಡ್ಸ್ ಮುಕ್ತ ದೇಶವನ್ನಾಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳು ಮತ್ತು ತಡೆಗಟ್ಟುವಿಕೆಯಲ್ಲಿ ನೀಡುತ್ತಿರುವ ಮಾರ್ಗದರ್ಶನ ಹಾಗೂ ಚಿಕಿತ್ಸಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡಲ್ಲಿ ಏಡ್ಸ್ ಮುಕ್ತ ಭಾರತ ಜತೆಗೆ ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನು ಕೊಡುಗೆಯಾಗಿ ನೀಡಲು ಸಾಧ್ಯವೆಂದು ಹಳ್ಳಿಮೈಸೂರು ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯಾಧಿಕಾರಿ ಡಾ. ಅನುಪ್ರಿಯ ಸಲಹೆ ನೀಡಿದರು.

ತಾಲೂಕಿನ ಎಲೆಚಾಗಹಳ್ಳಿ ಗ್ರಾಮದಲ್ಲಿ ಹಳ್ಳಿಮೈಸೂರು ಸಮುದಾಯ ಆರೋಗ್ಯ ಕೇಂದ್ರದ ಐಸಿಟಿಸಿ ವಿಭಾಗದಿಂದ ಆಯೋಜನೆ ಮಾಡಿದ್ದ ಸಮುದಾಯ ಆಧಾರಿತ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಸುರಕ್ಷಿತ ವಿಧಾನಗಳ ಪಾಲನೆಯಿಂದ ಎಚ್‌ಐವಿ ಅಥವಾ ಏಡ್ಸ್‌ನಿಂದ ರಕ್ಷಣೆ ಪಡೆಯುವ ಜತೆಗೆ ಭಾರತೀಯ ಸಂಸ್ಕೃತಿಯ ಪಾಲನೆಯಿಂದ ನೆಮ್ಮದಿಯ ಜೀವನ ಸಾಧ್ಯವೆಂದರು.

ಹಳ್ಳಿಮೈಸೂರು ಸಮುದಾಯ ಆರೋಗ್ಯ ಕೇಂದ್ರದ ಆಪ್ತಸಮಾಲೋಚಕಿ ರೇಖಾ ಮಾತನಾಡಿ, ಆರಂಭಿಕ ರೋಗ ನಿರ್ಣಯವನ್ನು ಸುಧಾರಿಸಲು ಮೊದಲು ಬಾರಿಗೆ ಪರೀಕ್ಷಕರನ್ನು ತಲುಪಲು ಮತ್ತು ವೈದ್ಯಕೀಯ ಸೇವೆಗಳನ್ನು ವಿರಳವಾಗಿ ಬಳಸುವ ಜನರನ್ನು ತಲುಪಲು ಸಮುದಾಯ ಆಧಾರಿತ ಸ್ಕ್ರೀನಿಂಗ್ (ಸಿಬಿಎಸ್) ಒಂದು ಪ್ರಮುಖ ವಿಧಾನವಾಗಿದೆ. ಪುರುಷರು ಮತ್ತು ಹದಿಹರೆಯದವರು ಹೆಚ್ಚು ಹರಡಬಹುದಾದ ಸನ್ನಿವೇಶ ಮತ್ತು ಹೆಚ್ಚು ಅಪಾಯದ ಗುಂಪುಗಳ (ಎಚ್‌ಆರ್‌ಜಿ) ಎಚ್‌ಐವಿ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಸೇವೆಗಳ (ಎಚ್‌ಸಿಟಿಎಸ್) ಪಡೆಯುವಿಕೆ ಮತ್ತು ವ್ಯಾಪ್ತಿಯನ್ನು ಸುಧಾರಿಸಲು ಸಮುದಾಯ ಆಧಾರಿತ ಎಚ್‌ಐವಿ ಕುರಿತು ಪರಿಶೀಲಿಸಲು ವಿವಿಧ ವಿಧಾನಗಳ ಮೂಲಕ ನಡೆಸಲಾಗುತ್ತದೆ ಎಂದರು. ನಂತರ ಸಮುದಾಯ ಆಧಾರಿತ ತಪಾಸಣೆಯ ಉದ್ದೇಶ, ಸಮುದಾಯ ಆಧಾರಿತ ತಪಾಸಣೆಯನ್ನು ಆಯೋಜಿಸುವ ಬಗ್ಗೆ ಮತ್ತು ಎಚ್‌ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಏಕೆ ಮುಖ್ಯ ಎಂಬುದರ ಕುರಿತು ಸವಿಸ್ತಾರವಾಗಿ ವಿವರಿಸಿದರು. ಐಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಬಿರದಲ್ಲಿ ೧೦೩ ಜನರಿಗೆ ಐಸಿಟಿಸಿ ಪರೀಕ್ಷೆ, ೮೬ ಜನರಿಗೆ ಎನ್‌ಸಿಡಿ ಪರೀಕ್ಷೆ, ೩೮ ಜನರಿಗೆ ಕಣ್ಣಿನ ಪರೀಕ್ಷೆ ಮತ್ತು ೪೪ ಜನರಿಗೆ ದಂತ ಪರೀಕ್ಷೆ ನಡೆಸಲಾಯಿತು.

ನೇತ್ರ ತಪಾಸಣೆ ಅಧಿಕಾರಿ ಹೇಮಲತಾ, ಐಸಿಟಿಸಿ ಹಾಗೂ ಕೆಎಚ್‌ಪಿಟಿ ವಿಭಾಗದವರು, ಓಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

Share this article