ಕನ್ನಡಪ್ರಭವಾರ್ತೆ, ಚಿತ್ರದುರ್ಗ
ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಚಿತ್ರದುರ್ಗದ ಸರ್ಕಾರಿ ಮೆಡಿಕಲ್ ಕಾಲೇಜಿಗೆ 500 ಕೋಟಿ ರುಪಾಯಿ ಅನುದಾನದ ಭರವಸೆ ನೀಡಿದ್ದರು. ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣದ ಕಾಮಗಾರಿ ಅರಂಭವಾಗಿದೆ. ಮೊದಲ ವರ್ಷಕ್ಕೆ 150 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದ್ದು ಬಹುದಿನಗಳ ನಿರೀಕ್ಷೆ ಫಲ ನೀಡಿದಂತಾಗಿದೆ. ರಾಜ್ಯದಲ್ಲಿ ಹೊಸದಾಗಿ 9 ಕೈಗಾರಿಕಾ ವಸಾಹತುಗಳ ಸ್ಥಾಪನೆ ಮಾಡುವುದಾಗಿ ಬಸವರಾಜ ಬೊಮ್ಮಾಯಿ ತಿಳಿಸಿದ್ದು ಅದರಲ್ಲಿ ಚಳ್ಳಕೆರೆ ಹಾಗೂ ಮೊಳಕಾಲ್ಮುರು ಸೇರಿತ್ತು. ಈ ಘೋಷಣೆ ಹಾಗೆಯೇ ಉಳಿದಿದೆ.
ಸಿಎಂ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾದ ನಂತರ ಮಂಡಿಸಿದ ಬಜೆಟ್ ನಲ್ಲಿ ಚಿತ್ರದುರ್ಗ ಜಿಲ್ಲೆಗೆ ಎರಡು ಪ್ರಮುಖ ವಿಷಯಗ ಪ್ರಸ್ತಾಪಿಸಲಾಗಿತ್ತು. ಕಣ್ಣು ಚಿಕಿತ್ಸೆಗೆ ಸಂಬಂಧಿಸಿದಂತೆ ಆಶಾಕಿರಣ ಎಂಬ ಹೊಸ ಯೋಜನೆ ಘೋಷಿಸಿ ಆರೇಳು ಜಿಲ್ಲೆಗಳ ವ್ಯಾಪ್ತಿ ನಿಗದಿ ಮಾಡಿ 21 ಕೋಟಿ ರುಪಾಯಿ ಅನುದಾನ ಕಾಯ್ದಿರಿಸಲಾಗಿತ್ತು. ಆಶಾಕಿರಣಯೋಜನೆ ಜಾರಿಯಾಗಿದೆ. ರಾಜ್ಯದ 9 ರೇಲ್ವೆ ಯೋಜನೆಗಳಿಗೆ 8600 ಕೋಟಿ ರುಪಾಯಿ ಅನುದಾನದ ಭರವಸೆ ನೀಡಲಾಗಿತ್ತು. ಇದು ಕೇವಲ ಭರವೆಸೆಯಾಗಿಯೇ ಉಳಿದಿದೆ. ಹಾಗಾಗಿ ಕಳೆದ ವರ್ಷದ ಬಜೆಟ್ ಘೋಷಣೆಗಳು ಅರೆಬರೆಯಾಗಿವೆ. ಘೋಷಣೆ ನೆನಪು ಮಾಡಿಕೊಳ್ಳುವಲ್ಲಿಯೂ ಸರ್ಕಾರ ಮುಂದಾಗಿಲ್ಲ.ಈ ಬಾರಿಯ ನಿರೀಕ್ಷೆಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಅನುದಾನದ ಕೊರತೆ ಎದುರಿಸುತ್ತಿದೆ. ಇದು ಹಳೇ ಯೋಜನೆಯಾದ್ದರಿಂದ ಬಜೆಟ್ ಘೋಷಣೆ ವ್ಯಾಪ್ತಿಗೆ ಬಾರದು. ಆದರೆ ಜಲ ಸಂಪನ್ಮೂಲ ಇಲಾಖೆಗೆ ಕಾಯ್ದಿರಿಸುವ ಅನುದಾದನಲ್ಲಿ ಹೆಚ್ಚಿನ ಪ್ರಮಾಣವ ಭದ್ರಾ ಮೇಲ್ದಂಡೆಗೆ ವಿನಿಯೋಗಿಸುವ, ಕಾಲಮಿತಿಯಲ್ಲಿ ಮುಗಿಸುವ ಭರವಸೆ ವ್ಯಕ್ತವಾಗಬೇಕಾಗಿದೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಶೇ.50 ರಷ್ಟು ಅನುದಾನ ನೀಡುವುದಾಗಿ ಘೋಷಿಸಿರುವುದಿಂದ ರಾಜ್ಯ ತನ್ನ ಪಾಲಿನ ಅನುದಾನವ ಕಾಯ್ದಿರಿಸಬೇಕು. ಕಳೆದ ಬಾರಿ 9 ರೇಲ್ವೆ ಯೋಜನೆಗಳಿಗೆ ಕಾಯ್ದಿರಿಸಲಾದ ಅನುದಾನ ಏನಾಯಿತೆಂಬ ಬಗ್ಗೆ ಸುಳಿವುಗಳಿಲ್ಲ.