ದಾವಣಗೆರೆ: ನಿತ್ಯ ಶಿವಧ್ಯಾನ ಮಾಡುವುದರಿಂದ ಮನಸ್ಸು ಶುದ್ಧಿಯಾಗುತ್ತದೆ ಎಂದು ಶ್ರೀ ವಿಶ್ವವಾಸವಿ ಜಗದ್ಗುರು ಮಹಾಸಂಸ್ಥಾನದ ಪೀಠಾಧಿಪತಿ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಗುರುವಾರ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಂಗ ಸಂಸ್ಥೆಯಾದ ದಾವಣಗೆರೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶ್ರೀಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘ, ಶ್ರೀವಾಸವಿ ಸೇವಾ ಸಂಘ, ಶ್ರೀವಾಸವಿ ಅಮ್ಮನವರ ದೇವಸ್ಥಾನ, ಡಿಸಿಎಂ ಟೌನ್‌ಶಿಪ್ ದಾವಣಗೆರೆ ಮತ್ತು ಆರ್ಯವೈಶ್ಯ ಮಹಾಜನ ಸಮಿತಿ ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನ, ಬಾಲಾಜಿ ನಗರ, ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ವಾಸವಿ ಪೀಠದ ವಿಶ್ವವಾಸವಿ ಜಗದ್ಗುರು ಮಹಾಸಂಸ್ಥಾನದ ಪೀಠಾಧಿಪತಿ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಯವರ ಪೀಠಾರೋಹಣದ 4ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಭಕ್ತಿ ಸಿಂಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿತ್ಯ ಕೇವಲ 10 ನಿಮಿಷದಲ್ಲಿ 108 ಸಾರಿ ಪಂಚಾಕ್ಷರಿ ಮಂತ್ರದ ಮೂಲಕ ಶಿವನ ಧ್ಯಾನ ಮಾಡಬಹುದು. ಆದರೆ ಎಲ್ಲರೂ ಜೀವನದ ಓಟದಲ್ಲಿ ಓಡಾಟದಲ್ಲಿ ಭಗವಂತನನ್ನೇ ಮರೆತುಬಿಡುತ್ತಿದ್ದೀರಿ. ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಏನಾದರೂ ಬೇಕಿದ್ದರೆ ಮಾತ್ರ ಭಗವಂತನನ್ನು ಸ್ಮರಿಸುತ್ತೀರಿ. ಆದರೆ ಪ್ರತಿನಿತ್ಯವೂ ಪ್ರೀತಿಯಿಂದ ಭಗವಂತನನ್ನು ಜಪದ ಮುಖಾಂತರ ನೆನೆಸಿಕೊಳ್ಳುವ ಪ್ರಕ್ರಿಯೆ ಮಾಡಬೇಕು ಎಂದರು.ನಿತ್ಯ ಶಿವಧ್ಯಾನ ಮಾಡುವುದರಿಂದ ಮನಸ್ಸು ಶುದ್ಧಿಯಾಗುತ್ತೆ, ಆಧ್ಯಾತ್ಮಿಕ ಚಿಂತನೆ ಕಡೆ ಒಲವು ಕೊಡುವಂತಾಗುತ್ತದೆ, ಮನಸ್ಸು ಜೀವನದ ಸಣ್ಣಪುಟ್ಟ ವಿಷಯಗಳನ್ನು ಬಿಟ್ಟು ದೊಡ್ಡ ವಿಷಯಗಳ ಕಡೆ ಹರಿಸುವಂತಹ ಮನಸ್ಸು ನಮ್ಮದಾಗುತ್ತದೆ. ಇವೆಲ್ಲವೂ ಜಪದ ಸಾಧನೆಯಿಂದ ಆಗುತ್ತದೆ ಎಂದು ತಿಳಿಸಿದರು. ಗುರುಪೌರ್ಣಿಮೆಯು ಸಮಸ್ತ ಭಾರತೀಯ ಸಂಸ್ಕೃತಿಗಳು, ಹಿಂದೂ ಸನಾತನ ಧರ್ಮದ ಎಲ್ಲಾ ಪರಂಪರೆಗಳು ಕೂಡಾ ತಮ್ಮ ತಮ್ಮ ಗುರುಗಳಿಗೆ ಗುರುಪರಂಪರೆಗೆ ಪೂಜೆ, ಗೌರವನ್ನು ಸಲ್ಲಿಸುವಂತಹ ಪುಣ್ಯದಿನ. ಗುರುಪೌರ್ಣಮಿಯನ್ನು ವ್ಯಾಸಪೌರ್ಣಿಮೆ ಎಂದು ಕರೆಯುತ್ತಾರೆ. ಎಲ್ಲಾ ಗುರುಪರಂಪರೆಗಳಿಗೂ ಮೂಲ ವ್ಯಾಸ ಮಹರ್ಷಿಗಳು. ನಾಲ್ಕು ವೇದಗಳನ್ನು ಕೂಡಿಸಿ ನಮಗೆ ಕೊಟ್ಟಿರುವಂತಹ ಮಹರ್ಷಿಗಳು ವ್ಯಾಸಮಹರ್ಷಿಗಳು ಎಂದು ತಿಳಿಸಿದರು.ಭಾರತೀಯ ಸಂಸ್ಕೃತಿಯ ವಿಶೇಷ ಎಂದರೆ ಅದು ಗುರುಪರಂಪರೆ. ಇಡೀ ಜಗತ್ತಿನಲ್ಲಿ ಎಲ್ಲೂ ಗುರು ಪರಂಪರೆ ಇಲ್ಲ. ಬುದ್ಧಿಸಂ, ಜೈನಿಸಂ ಭಾರತೀಯ ಪರಂಪರೆಯಿಂದ ಬಂದಂತಹ ಪುಷ್ಪಗಳೇ. ಅವು ಸನಾತನ ಧರ್ಮದ ಭಾಗಗಳು. ಪ್ರೀಸ್ಟ್, ಮೌಲ್ವಿಗಳು ಎಂಬ ಸ್ಥಾನ ಇವೆ. ಆದರೆ ಗುರು ಎನ್ನುವ ಸ್ಥಾನ ಹಿಂದು ಸನಾತನ ಧರ್ಮದ ವಿಶೇಷ ಎಂದು ಹೇಳಿದರು.ಜಗತ್ತಿನಲ್ಲಿ ಏನೇ ಸಮಸ್ಯೆಗಳು ಇರಬಹುದು, ಆಧ್ಯಾತ್ಮಿಕ, ಭೌತಿಕ, ಯಾವುದೇ ಸಮಸ್ಯೆಗಳಿಗೂ ಕೂಡಾ ಪರಿಹಾರ ಕೊಡುವಂತ ವ್ಯಕ್ತಿ, ಶಕ್ತಿ ಎಂದರೆ ಗುರು. ಹಿಂದೂ ಸನಾತನ ಧರ್ಮದಲ್ಲಿ ಗುರುಗಳು ಅನ್ನುವ ಸ್ಥಾನ ಪುರುಷರು ಅಷ್ಟೇ ಅಲ್ಲ, ಸ್ತ್ರೀಯರೂ ಸಹಾ ಸಮವಾಗಿ ಇರುವ ಪರಂಪರೆ. ಯಾವುದೇ ಸಮುದಾಯ, ಪಂಗಡದಲ್ಲೂ ಗುರು ಸ್ಥಾನ ಇದೆ. ಭಾರತದ ಉದ್ದಗಲಕ್ಕೂ ಆಶ್ರಮ, ಮಠಗಳು ಸ್ಥಾಪನೆ ಮಾಡಿರುವ ಗುರುಗಳು, ಅವು ತಮಗೆ, ತಮ್ಮ ಶಿಷ್ಯರಿಗೆ ಅಲ್ಲ, ಎಲ್ಲರಿಗಾಗಿ. ಯಾರೇ ಬರಲಿ ಹಸಿದು ಬಂದವರಿಗೆ ಒಂದು ತುತ್ತು ಅನ್ನ, ಆಧ್ಯಾತ್ಮಿಕ ಹಸಿವಿನಿಂದ ಬಂದರೆ ಅವರಿಗೆ ಜ್ಞಾನ, ಜೀವನದ ಕಷ್ಟಗಳನ್ನು ಅನುಭವಿಸಿ ಪರಿಹಾರ ಮತ್ತು ಹೃದಯದಲ್ಲಿ ಶಾಂತಿ ಬೇಕೆನ್ನುವವರಿಗೆ ಭಕ್ತಿ ಇವೆಲ್ಲವನ್ನೂ ಕೂಡಾ ಗುರುಪರಂಪರೆ ಭಾರತೀಯರಿಗೆ ವಿಶ್ವಕ್ಕೆ ಕೊಟ್ಟಿರುವ ಮಹಾ ಸಂಸ್ಥೆ ಎಂದರು. ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಜಿಲ್ಲಾ ಸಮಿತಿ ಹಾಗೂ ಭಕ್ತಿ ಸಿಂಚನ ಸಮಿತಿಯ ಅಧ್ಯಕ್ಷ ಆರ್.ಎಲ್.ಪ್ರಭಾಕರ್, ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಜಿ.ನಾಗೇಂದ್ರ ಪ್ರಕಾಶ್, ಕಾರ್ಯದರ್ಶಿ ಎಂ.ನಾಗರಾಜ ಗುಪ್ತ, ಆರ್ಯವೈಶ್ಯ ಮುಖಂಡರಾದ ಎಸ್.ಟಿ.ಕುಸುಮ ಶ್ರೇಷ್ಠಿ, ಡಾ.ಬಿ.ಎಸ್.ನಾಗಪ್ರಕಾಶ್, ಕೆ.ಎಸ್.ರುದ್ರಶ್ರೇಷ್ಠಿ, ಆರ್.ಜಿ.ಶ್ರೀನಿವಾಸಮೂರ್ತಿ, ಕೆ.ಎನ್.ಅನಂತರಾಮ ಶೆಟ್ಟಿ, ಎಚ್.ಟಿ.ಶ್ರೀನಿವಾಸ್, ಬಿ.ಎಚ್.ಅಶೋಕ್, ಎಸ್.ಸುನೀಲ್, ಟಿ.ಎಸ್.ಕಿರಣ್ ಕುಮಾರ್, ಕೆ.ಎಸ್.ದರ್ಶನ್, ಜೆ.ರವೀಂದ್ರ ಗುಪ್ತ, ಎಚ್.ವೆಂಕಟೇಶ್, ಡಿ.ಎಚ್. ಅಂಬಿಕಾಪತಿ ಶೆಟ್ಟಿ, ಸಾಯಿಪ್ರಸಾದ್, ಬದರಿನಾಥ್, ಟಿ.ಸುರೇಶ್ ಉಪಸಮಿತಿಗಳ ಚೇರ್ಮನ್ನರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.ಶೋಭಾ ಯಾತ್ರೆ:ಕಾರ್ಯಕ್ರಮಕ್ಕೂ ಮುನ್ನ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಜಿಲ್ಲಾ ಸಮಿತಿಯಿಂದ ಸಚ್ಚಿದಾನಂದ ಸರಸ್ವತಿ ಶ್ರೀಗಳನ್ನು ಡಾ.ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿ ಹಿರೇಮಠದ ಆವರಣದಿಂದ ರಥದ ಮೂಲಕ ವಿವಿಧ ಕಲಾತಂಡಗಳಿಂದ ಶೋಭಾ ಯಾತ್ರೆ ಮೂಲಕ ಇಲ್ಲಿನ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನಕ್ಕೆ ಕರೆ ತರಲಾಯಿತು.