ಪುನೀತ್‌ ರಾಜ್‌ಕುಮಾರ್ ಆದರ್ಶ ಮೈಗೂಡಿಸಿಕೊಳ್ಳಿ: ಅಮೃತೇಶ್‌

KannadaprabhaNewsNetwork | Published : Mar 18, 2024 1:45 AM

ಸಾರಾಂಶ

ಅದ್ಭುತ ನಟನೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ಪುನೀತ್‌ರಾಜ್‌ಕುಮಾರ್ ಇಂದಿಗೂ ನಾಡಿನ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಮೇರುನಟ ಎಂದು ನಗರಸಭಾ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ ಹೇಳಿದರು.

ಚಿಕ್ಕಮಗಳೂರಿನ ತೊಗರಿಹಂಕಲ್‌ ವೃತ್ತದಲ್ಲಿ ನಟ ಪುನೀತ್‌ ರಾಜ್‌ಕುಮಾರ್ 49ನೇ ಜನ್ಮ ದಿನಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅದ್ಭುತ ನಟನೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ಪುನೀತ್‌ರಾಜ್‌ಕುಮಾರ್ ಇಂದಿಗೂ ನಾಡಿನ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಮೇರುನಟ ಎಂದು ನಗರಸಭಾ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ ಹೇಳಿದರು. ನಗರದ ತೊಗರಿಹಂಕಲ್ ವೃತ್ತದ ಜೈ ಭುವನೇಶ್ವರಿ ಆಟೋ ನಿಲ್ದಾಣದಲ್ಲಿ ನಟ ಪುನೀತ್‌ರಾಜ್‌ಕುಮಾರ್ ಅವರ 49ನೇ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬಳಿಕ ಕೇಕ್ ಕತ್ತರಿಸಿ ಸಿಹಿ ಹಂಚುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. ಇಂದಿನ ಕ್ಷಣ ಸಂಭ್ರಮಿಸುವುದೋ ಅಥವಾ ದುಃಖಿಸುವುದು ತಿಳಿಯದು. ಮೇರುನಟನ ಸವಿನೆನಪು ಮರೆಯಲಾಗುತ್ತಿಲ್ಲ. ಹೀಗಾಗಿ ಪುನೀತ್ ತೋರಿದ ಮಾರ್ಗದರ್ಶನ ಹಾಗೂ ಆದರ್ಶಗಳನ್ನು ಜೀವನದಲ್ಲಿ ಪ್ರತಿಯೊ ಬ್ಬರು ಮೈಗೂಡಿಸಿ ಕೊಂಡರೆ ಮಾತ್ರ ಅವರ ಜನ್ಮದಿನಾಚರಣೆಗೆ ನಿಜವಾದ ಅರ್ಥ ಬರಲಿದೆ ಎಂದು ಹೇಳಿದರು. ನಟನೆ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಪುನೀತ್‌ ರಾಜ್‌ಕುಮಾರ್ ಸರಳ, ಸಜ್ಜನ ವ್ಯಕ್ತಿತ್ವ ಹೊಂದಿದವರು. ತಂದೆ ಡಾ.ರಾಜ್‌ಕುಮಾರ್ ಕನ್ನಡ ನಾಡಿನ ಕುಲದೇವರಾದವರೂ ಯಾವುದೇ ಅಹಂ ಅವರ ಜೀವನ ದಲ್ಲಿ ಇರಲಿಲ್ಲ. ದುಡಿಮೆಯ ಇಂತಿಷ್ಟು ಹಣವನ್ನು ಸಮಾಜದಲ್ಲಿ ನೊಂದ ಹೆಣ್ಣು ಮಕ್ಕಳ ಜೀವನಕ್ಕೆ ಮುಡಿಪಿಟ್ಟವರು ಎಂದರು. ಪುನೀತ್‌ ರಾಜ್‌ಕುಮಾರ್‌ಗೂ ಚಿಕ್ಕಮಗಳೂರಿಗೂ ಅವಿನಾಭಾವ ಸಂಬಂಧವಿದೆ. ಅವರ ಧರ್ಮಪತ್ನಿ ಇದೇ ಜಿಲ್ಲೆಯ ವರಾದ ಹಿನ್ನೆಲೆಯಲ್ಲಿ ಸ್ಥಳೀಯ ಜನತೆಯಲ್ಲಿ ವಿಶೇಷ ಅಭಿಮಾನವಿದೆ. ಆ ನಿಟ್ಟಿನಲ್ಲಿ ನಗರದ ಹಲವಾರು ಕಡೆಗಳಲ್ಲಿ ನಟ ಪುನೀತ್‌ ರಾಜ್‌ಕುಮಾರ್ ಹೆಸರಿನಲ್ಲಿ ರಸ್ತೆ ನಾಮಕರಣಗೊಂಡಿವೆ ಎಂದು ವಿಶ್ಲೇಷಿಸಿದರು. ಕಾರ್ಯಕ್ರಮದ ಆಯೋಜಕ ಫೈರೋಜ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ನಗುಮುಖದ ಒಡೆಯ ಪುನೀತ್‌ ರಾಜ್‌ಕುಮಾರ್ ಜನ್ಮದಿನದ ಪ್ರಯುಕ್ತ ಟ್ರಾಫಿಕ್ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಲಾಗುತ್ತಿದೆ. ಆಟೋ ಚಾಲಕರ ಬದುಕಿನಲ್ಲಿ ಇಂದಿಗೂ ಪುನೀತ್ ಜೀವಂತ ವ್ಯಕ್ತಿ. ಅವರ ಮೌಲ್ಯಯುತ ಸಾಧನೆ ನಮ್ಮಗೆಲ್ಲಾ ದಾರಿದೀಪ ಎಂದು ಹೇಳಿದರು.

ವರ್ಷದಲ್ಲೇ ಕನಿಷ್ಟ ಎರಡ್ಮೂರು ಬಾರಿ ಆಟೋದಲ್ಲೇ ಬೆಂಗಳೂರಿಗೆ ತೆರಳುವ ಮೂಲಕ ಮೇರುನಟ ನೆಲೆ ಸಿರುವ ಸ್ಥಳದಲ್ಲಿ ಗೌರವ ಸೂಚಿಸಲಾಗುತ್ತಿದೆ. ಸಿನಿಮಾ ಜಗತ್ತಿನಲ್ಲಿ ಸಮಾಜಕ್ಕೆ ಕೊಡುಗೆ ನೀಡುವಂತಹ ಚಿತ್ರಗಳನ್ನು ನಿರ್ಮಿಸಿ ರಂಜಿಸುವ ಕೆಲಸ ಮಾಡಿದ ಪುನೀತ್, ಒಂದೇ ಒಂದು ಕಪ್ಪುಚುಕ್ಕೆ ಇಲ್ಲದಂತೆ ಸಮಾಜದಲ್ಲಿ ಬಾಳಿದವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆಟೋ ಸಂಘದ ಅಧ್ಯಕ್ಷ ಉದಯ್‌ಕುಮಾರ್, ನಗರಾಧ್ಯಕ್ಷ ರಾಮೇಗೌಡ, ಮಾಜಿ ಅಧ್ಯಕ್ಷ ಎಂ.ಟಿ.ಜಗದೀಶ್, ಚಾಲಕರಾದ ದೇವರಾಜ್, ಕುಮಾರ್, ಚಂದ್ರು, ತಿರುಪಾಲ್ ಇದ್ದರು.17 ಕೆಸಿಕೆಎಂ 5ಚಿಕ್ಕಮಗಳೂರಿನ ತೊಗರಿಹಂಕಲ್‌ ವೃತ್ತದಲ್ಲಿ ನಟ ಪುನೀತ್‌ ರಾಜ್‌ಕುಮಾರ್ ಅವರ 49ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು. ಅಮೃತೇಶ್‌ ಚೆನ್ನಕೇಶವ, ಫೈರೋಜ್, ಜಗದೀಶ್‌, ಉದಯಕುಮಾರ್‌ ಇದ್ದರು.

Share this article