ಸೆ.4 ರಂದು ಸಂಡೂರಿನಲ್ಲಿ ಗಣಿಗಾರಿಕೆ ವಿರುದ್ಧ ಸಭೆ

KannadaprabhaNewsNetwork | Published : Aug 7, 2024 1:03 AM

ಸಾರಾಂಶ

Meeting against mining in Sandur on 4th September

-ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ । ರಾಜ್ಯವ್ಯಾಪಿ ಜನಾಂದೋಲನ

-------

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರದ ನಡೆ ವಿರೋಧಿಸಿ ಸೆ.4 ರಂದು ಹಿರೇಮಠ ಅವರ ನೇತೃತ್ವದಲ್ಲಿ ಸಂಡೂರಿನಲ್ಲಿ ಸಭೆ ಕರೆಯಲಾಗಿದ್ದು ರಾಜ್ಯವ್ಯಾಪಿ ಆಂದೋಲನ ಸೃಷ್ಟಿಸಲಾಗುವುದೆಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೆಚ್.ಡಿ.ಕುಮಾರಸ್ವಾಮಿ ಕೇಂದ್ರದ ಸಚಿವರಾದ ತಕ್ಷಣ ಸಂಡೂರಿನಲ್ಲಿ ಗಣಿಗಾರಿಕೆಗೆ ಅನುಮತಿಸಿದ್ದಾರೆ. ಇದರ ಹಿಂದೆ ಇರುವ ಆಸಕ್ತಿಗಳ ಗಮನಿಸುವುದು ಅನಿವಾರ್ಯ. ಕೇರಳದಲ್ಲಿ ವಯನಾಡ್ ದುರಂತ ಪ್ರಕೃತಿ ವಿಕೋಪದಿಂದ ಆಗಿದ್ದಲ್ಲ. ಅಭಿವೃದ್ಧಿ ನೆಪದಲ್ಲಿ ಬೆಟ್ಟ ಗುಡ್ಡಗಳನ್ನು ಕರಗಿಸುವುದು, ಮೈನ್ಸ್, ರೆಸಾರ್ಟ್‍ಗಳ ನಿರ್ಮಾಣ, ಪ್ರಕೃತಿ ವಿರುದ್ಧ ಮಾನವ ಸಂಪತ್ತುಗಳನ್ನು ನಾಶ ಪಡಿಸುತ್ತಿರುವುದೇ ಇದಕ್ಕೆ ಕಾರಣ. ಕೊಡಿಗಿನಲ್ಲಿ ಭೂ ಕುಸಿತವಾಗುತ್ತಿದೆ. ವಯನಾಡು ಪ್ರಕರಣವನ್ನು ಕೇಂದ್ರ ರಾಷ್ಟ್ರೀಯ ವಿಪತ್ತೆಂದು ಘೋಷಿಸುವಂತೆ ಒತ್ತಾಯಿಸಿದರು.

ದೇಶದಲ್ಲಿ ಇಂಡಿಯಾ ವರ್ಸಸ್ ಎನ್ ಡಿಎ ಚುನಾವಣೆ ನಡೆದಿಲ್ಲ. ಸರ್ವಾಧಿಕಾರಿ ವರ್ಸಸ್ ಪ್ರಜಾಪ್ರಭುತ್ವದ ಚುನಾವಣೆಯಾಗಿರುವುದರಿಂದ ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿಲ್ಲ. ಸಂವಿಧಾನ ಪ್ರಜಾಪ್ರಭುತ್ವ ಉಳಿಸುವ ತೀರ್ಮಾನ ತೆಗೆದುಕೊಂಡಿದ್ದೇವೆ. ಇದೆ ತಿಂಗಳ 9 ರಂದು ಕ್ವಿಟ್ ಇಂಡಿಯಾ ಚಳುವಳಿ ಅಂಗವಾಗಿ 541 ಸಂಘಟನೆಗಳು ಸೇರಿಕೊಂಡು ಸಂಯುಕ್ತ ಕಿಸಾನ್ ಮೋರ್ಚ ಮೇರೆಗೆ ಕಾರ್ಪೊರೇಟ್ ಕಂಪನಿಗಳೆ ದೇಶ ಬಿಟ್ಟು ತೊಲಗಿ ಎನ್ನುವ ಚಳುವಳಿ ನಡೆಸುತ್ತೇವೆ. ರೈತರ ಸಂಕಷ್ಠಗಳಿಗೆ ಇನ್ನು ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗುತ್ತಿಲ್ಲ. ನಿಶ್ಯಕ್ತ ರಾಜಕಾರಣದಿಂದ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು ನೀಡಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಚಳುವಳಿಗೆ 45 ವರ್ಷಗಳ ಇತಿಹಾಸವಿದೆ. ಕೆಲವರಿಂದ ಹಸಿರು ಟವಲ್‍ಗಳ ದುರುಪಯೋಗವಾಗುತ್ತಿದೆ. ರೈತ ಕುಟುಂಬಕ್ಕೊಬ್ಬ ಸದಸ್ಯ, ಊರಿಗೊಬ್ಬ ಕಾರ್ಯಕರ್ತನನ್ನು ನೇಮಿಸಿ ಭ್ರಷ್ಟ ಸರ್ಕಾರಗಳ ವಿರುದ್ಧ ಚಳುವಳಿ ಆರಂಭಿಸಿ ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಪ್ರತಿ ಹಳ್ಳಿ ಹಳ್ಳಿಯಲ್ಲೂ ರೈತ ಸಂಘವನ್ನು ಬಲಿಷ್ಟವಾಗಿ ಕಟ್ಟುತ್ತೇವೆಂದು ತಿಳಿಸಿದರು.

ಸರ್ವೋದಯ ಕರ್ನಾಟಕದ ರಾಜ್ಯಾಧ್ಯಕ್ಷ ಚಾಮರಸ ಪಾಟೀಲ್ ಮಾತನಾಡಿ, ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಿರುವ ನರೇಂದ್ರಮೋದಿ ರೈತರ ಸಮಸ್ಯೆಗಳತ್ತ ಕಣ್ಣೆತ್ತಿ ನೋಡುತ್ತಿಲ್ಲ. ಸ್ವಾಮಿನಾಥನ್ ವರದಿ ಜಾರಿಯಾಗಿಲ್ಲ. ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ಕೃಷಿ ಭೂಮಿ, ಮಾರುಕಟ್ಟೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿದ್ದಾರೆಂದು ಕರ್ನಾಟಕವನ್ನು ಆಪಾದಿಸಿದರು.

ರೈತರು, ದಲಿತರು, ಮಹಿಳೆಯರು, ಮಕ್ಕಳ ಆಶೋತ್ತರಗಳನ್ನು ಈಡೇರಿಸುವಲ್ಲಿ ಎಲ್ಲಾ ಪಕ್ಷಗಳು ವಿಫಲವಾಗಿವೆ. ದುಡಿಯುವ ವರ್ಗದ ಹಿತ ಕಾಯುವತ್ತ ಗಮನಹರಿಸುತ್ತಿಲ್ಲ. ಕೋಮು ಭಾವನೆ ಬಿತ್ತಿ ಜಾತಿ ಧರ್ಮಗಳ ನಡುವೆ ಸಂಘರ್ಷವಿಡುತ್ತಿದ್ದಾರೆ. ರಾಮ ಮಂದಿಕ್ಕೆ ದೇಣಿಗೆ ಸಂಗ್ರಹಿಸಿ ಲೂಟಿ ಮಾಡಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಿಂದ ಉದ್ಯಮಿಗಳ ನಲವತ್ತು ಲಕ್ಷ ಕೋಟಿ ರು.ಗಳ ಸಾಲ ಮನ್ನಾ ಮಾಡಿ ದುಡಿಯುವ ವರ್ಗವನ್ನು ಸಾಲದ ಕೂಪಕ್ಕೆ ನೂಕಿದ್ದಾರೆ.

ಕಾಂಗ್ರೆಸ್ ಇವರಿಗಿಂತ ಭಿನ್ನವಾಗೇನು ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರು.ಗಳನ್ನು ಚುನಾವಣೆಯಲ್ಲಿ ಹೆಂಡಕ್ಕೆ ಹಂಚಲು ಬಳಸಿದ್ದಾರೆ. ಇದಕ್ಕಿಂತ ದಿವಾಳಿ ಇನ್ನೇನು ಬೇಕು ಎಂದು ಪ್ರಶ್ನಿಸಿದರು?

ರಾಜ್ಯದ 192 ತಾಲೂಕುಗಳಲ್ಲಿ ಕಳೆದ ವರ್ಷ ಬರವಿತ್ತು. ಫಸಲ್‍ ಭೀಮ ಯೋಜನೆಯಲ್ಲಿ ಗೋಲ್‍ಮಾಲ್ ಆಗಿದೆ. ರೈತರ ಬೆಳೆ ಪರಿಹಾರ ಹಣ ಬೇರೆ ಬೇರೆ ಖಾತೆಗಳಿಗೆ ಹೋಗಿದೆ. ಸಬ್ಸಿಡಿಯಲ್ಲಿ ಮೋಸ, ಇನ್ನು ಇಂತಹ ಪಕ್ಷಗಳ ಹಿಂದೆ ರೈತರು ಹೋಗುವುದರಲ್ಲಿ ಅರ್ಥವಿಲ್ಲ. ಪರ್ಯಾಯ ರಾಜಕೀಯ ಪಕ್ಷ ತರಬೇಕೆಂಬುದು ನಮ್ಮ ಉದ್ದೇಶ. ಅದಕ್ಕಾಗಿ ಸರ್ವೋದಯ ಪಕ್ಷವನ್ನು ರಾಜ್ಯದಲ್ಲಿ ಪ್ರಭಲವಾಗಿ ಕಟ್ಟಬೇಕಾಗಿರುವುದರಿಂದ ಈಗಾಗಲೆ ಹದಿನೈದು ಜಿಲ್ಲೆಗಳಲ್ಲಿ ಘಟಕ ಆರಂಭಗೊಂಡಿದೆ. ಇನ್ನು ಹದಿನೈದು ಜಿಲ್ಲೆಗಳಲ್ಲಿ ಘಟಕ ರಚಿಸಿ ಗ್ರಾ.ಪಂ, ತಾಪಂ, ಜಿ.ಪಂ., ವಿಧಾನಸಭೆ, ಪಾರ್ಲಿಮೆಂಟ್ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಪ್ರಗತಿಪರ ಚಿಂತಕರನ್ನು ಒಟ್ಟಿಗೆ ಸೇರಿಸಿ ಗುಣಾತ್ಮಕ ರಾಜಕಾರಣ ಮಾಡಲಾಗುವುದು ಎಂದು ಹೇಳಿದರು.

ಕರ್ನಾಟಕ ಸರ್ವೋದಯ ಪಕ್ಷದ ಖಜಾಂಚಿ ಅಂಜದ್ ಪಾಷ, ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ, ಖಜಾಂಚಿ ಶಿವರಾಜ್ ರೇವಣಸಿದ್ದಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಹಂಪಯ್ಯನಮಾಳಿಗೆ ಧನಂಜಯ, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಗೋಪಾಲ್, ಹೊರಕೇರಪ್ಪ, ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

--------------

ಪೋಟೋ....6 ಸಿಟಿಡಿ 1

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

------ಫೋಟೋ ಫೈಲ್ ನೇಮ್-6 ಸಿಟಿಡಿ 1-.

Share this article