ಕಬ್ಬನ್‌ಪಾರ್ಕ್‌ನಲ್ಲಿ ಸಭೆ, ಸಮಾರಂಭ ಆಯೋಜನೆಗೆ ಅನುಮತಿ ಕಡ್ಡಾಯ : ತೋಟಗಾರಿಕೆ ಇಲಾಖೆ ಎಚ್ಚರಿಕೆ

KannadaprabhaNewsNetwork |  
Published : Dec 24, 2024, 01:32 AM ISTUpdated : Dec 24, 2024, 07:55 AM IST
Cubbon Park 3 | Kannada Prabha

ಸಾರಾಂಶ

ಅನುಮತಿ ಇಲ್ಲದೇ ಕಬ್ಬನ್‌ ಉದ್ಯಾನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ‘ಕಬ್ಬನ್‌ ರೀಡ್ಸ್‌’ ತಂಡದ ವಿರುದ್ಧ ಕ್ರಮಕೈಗೊಳ್ಳುವುದಾಗಿ ತೋಟಗಾರಿಕೆ ಇಲಾಖೆ ಎಚ್ಚರಿಕೆ ನೀಡಿದೆ. 

 ಬೆಂಗಳೂರು : ಅನುಮತಿ ಇಲ್ಲದೇ ಕಬ್ಬನ್‌ ಉದ್ಯಾನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ‘ಕಬ್ಬನ್‌ ರೀಡ್ಸ್‌’ ತಂಡದ ವಿರುದ್ಧ ಕ್ರಮಕೈಗೊಳ್ಳುವುದಾಗಿ ತೋಟಗಾರಿಕೆ ಇಲಾಖೆ ಎಚ್ಚರಿಕೆ ನೀಡಿದೆ. ಕಬ್ಬನ್ ಉದ್ಯಾನದಲ್ಲಿ 20ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವ ಯಾವುದೇ ಸಭೆ, ಸಮಾರಂಭಗಳನ್ನು ಆಯೋಜಿಸಲು ತೋಟಗಾರಿಕೆ ಇಲಾಖೆ ಅನುಮತಿ ಕಡ್ಡಾಯವಾಗಿದೆ. ಆದರೆ, ಕಬ್ಬನ್‌ ರೀಡ್ಸ್‌ ತಂಡದ ಸುಮಾರು 600ಕ್ಕೂ ಹೆಚ್ಚು ಮಂದಿ ಡಿ.21ರಂದು ಉದ್ಯಾನದಲ್ಲಿ ಜಮಾಯಿಸಿ ‘ಸೀಕ್ರೇಟ್‌ ಸಾಂತ’ ಆಟವಾಡಿದ್ದಾರೆ. ಅಲ್ಲದೇ ಸಾಕಷ್ಟು ಉಡುಗೊರೆಗಳ ಪ್ಯಾಕ್‌ಗಳು, ಪ್ಲಾಸ್ಟಿಕ್‌ ಕವರ್‌ಗಳನ್ನು ಎಲ್ಲೆಂದರಲ್ಲಿ ಎಸೆದಿದ್ದರು.

ಇನ್ನು ಹಲವರು ಉದ್ಯಾನದ ಹುಲ್ಲುಹಾಸಿನ ಮೇಲೆ ಮಲಗಿ ಪುಸ್ತಕಗಳನ್ನು ಓದುತ್ತಾ ಉದ್ಯಾನದ ಪರಿಸರ ಹಾಳು ಮಾಡುತ್ತಿದ್ದ ಬಗ್ಗೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಉದ್ಯಾನದ ಭದ್ರತಾ ಸಿಬ್ಬಂದಿ ಉಡುಗೊರೆಗಳನ್ನು ಕಸಿದುಕೊಂಡು ತೋಟಗಾರಿಕೆ ಅಧಿಕಾರಿಗಳಿಗೆ ಒಪ್ಪಿಸಿದ್ದರು. ಅಧಿಕಾರಿಗಳು ಕಬ್ಬನ್‌ ರೀಡ್ಸ್‌ ತಂಡದವರನ್ನು ಕರೆಯಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದು ಮತ್ತೊಮ್ಮೆ ಇಂತಹ ಘಟನೆ ಪುನರಾವರ್ತನೆ ಮಾಡದಂತೆ ಎಚ್ಚರಿಕೆ ನೀಡಿರುವುದಾಗಿ ಇಲಾಖೆ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.

ಉದ್ಯಾನದಲ್ಲಿ 20ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವ ಯಾವುದೇ ಸಭೆ, ಸಮಾರಂಭಗಳನ್ನು ಆಯೋಜಿಸಲು ತೋಟಗಾರಿಕೆ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಕಾರ್ಯಕ್ರಮ ಆಯೋಜನೆಗೂ ಮುನ್ನ ಅದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಒದಗಿಸಿ, ಅನುಮತಿ ಪಡೆಯಬೇಕು. ಒಂದು ವೇಳೆ ಅನುಮತಿ ಪಡೆಯದಿದ್ದರೆ ಕಾರ್ಯಕ್ರಮ ಆಯೋಜಕರ ವಿರುದ್ಧ ಕ್ರಮಕೈಗೊಂಡು ದಂಡ ವಿಧಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ(ಕಬ್ಬನ್‌ಪಾರ್ಕ್‌) ಜಿ.ಕುಸುಮಾ ತಿಳಿಸಿದರು.

ಕಬ್ಬನ್‌ಪಾರ್ಕ್‌ನಲ್ಲಿ ಕಾರ್ಯಕ್ರಮಗಳ ನಡೆಯುವ ಸ್ಥಳಗಳ ಮೇಲೆ ನಿಗಾ ವಹಿಸಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದವರಿಗೆ ಮೊದಲಿಗೆ ಎಚ್ಚರಿಕೆ ನೀಡಲಾಗುವುದು. ಪುನಃ ನಿಯಮ ಉಲ್ಲಂಘಿಸಿದರೆ ₹500 ದಂಡ ವಿಧಿಸಲಾಗುವುದು ಎಂದು ತಿಳಿಸಿದರು. 

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ