ಕನ್ನಡಪ್ರಭ ವಾರ್ತೆ ರಾಮನಗರರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಸ್ಥಳೀಯ ಯೋಜನಾ ಪ್ರದೇಶಕ್ಕೆ ಸಂಬಂಧಿಸಿದಂತೆ 2041ನೇ ಸಾಲಿಗೆ ಮಹಾಯೋಜನೆ ತಯಾರಿಸುವ ಹಿನ್ನೆಲೆ ಗ್ರಾಪಂ ಹಾಗೂ ನಗರಸಭೆ ಪ್ರತಿನಿಧಿ, ಅಧಿಕಾರಿಗಳ ಸಭೆ ನಡೆಯಿತು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ 12 ಗ್ರಾಪಂ ಹಾಗೂ ನಗರಸಭೆ ಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.ಪ್ರಾಧಿಕಾರದ ವ್ಯಾಪ್ತಿಗೆ 37 ಗ್ರಾಮಗಳು ಒಳಪಡಲಿದ್ದು, ಆ ಗ್ರಾಮಗಳ ಪ್ರಸ್ತುತವಿರುವ ವಲಯ ನಿಯಮಾವಳಿಯಂತೆ ಮಹಾಯೋಜನೆಯ ನಕ್ಷೆಗಳನ್ನು ತಯಾರಿಸಲಾಗಿದೆ. ಪಿಡಿಒ, ಪೌರಾಯುಕ್ತರು, ಮತ್ತು ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರಸ್ತುತ ವಲಯ ನಿಯಮಾವಳಿಯ ನಕ್ಷೆಗಳನ್ನು ಪ್ರತಿಯೊಬ್ಬರಿಗೂ ನೀಡಿ ಚರ್ಚಿಸಲಾಯಿತು.ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಯೋಜನಾ ಪ್ರದೇಶದಲ್ಲಿ ಬಂದಿರುವ ಬೆಳವಳಿ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ ನಕ್ಷೆಗಳಲ್ಲಿ ಬದಲಾವಣೆ, ವಸತಿ, ವಾಣಿಜ್ಯ, ಕೈಗಾರಿಕೆ ಮತ್ತು ಗ್ರಾಮ ಠಾಣಾ ವಿಸ್ತರಣೆಗೆ ಸಂಬಂಧಿಸಿದ ಮಾಹಿತಿ, ಸಲಹೆ ಸೂಚನೆ ನೀಡಿದರು. ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಯೋಜನ ಪ್ರದೇಶದಲ್ಲಿ ಮುಂಬರುವ ಬೆಳವಳಿಗೆಗಳಾದ ವಸತಿ, ವಾಣಿಜ್ಯ, ಕೈಗಾರಿಕೆ ಮತ್ತು ಗ್ರಾಮ ಠಾಣೆಗೆ ಸಂಬಂಧಿಸಿದಂತೆ ಚರ್ಚೆ ನಡಸಿ ಅಗತ್ಯ ಕ್ರಮ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪ್ರಾಧಿಕಾರ ಆಯುಕ್ತ ಶಿವನಂಕಾರಿಗೌಡ, ನಿರ್ದೇಶಕ ಪರ್ವೀಜ್ ಪಾಷಾ, ಕೆ.ನಿಸರ್ಗ, ವಿ.ಕೆ.ಶ್ರೀದೇವಿ, ಎಸ್.ಪ್ರವೀಣ್, ಶ್ರೀನಿವಾಸ್ ,ಮುತ್ತುರಾಜು, ತಾಪಂ ಇಒ ಪ್ರದೀಪ್, ನಗರಸಭೆ ಆಯುಕ್ತ ಡಾ.ಜಯಣ್ಣ, ವಿಭೂತಿಕೆರೆ ಗ್ರಾಪಂ ಅಧ್ಯಕ್ಷೆ ಸುನೀತ್, ಹುಲಿಕೆರೆ ಗುನ್ನೂರು ಗ್ರಾಪಂ ಅಧ್ಯಕ್ಷ ಗಿರೀಶ್ , ಕೈಲಾಂಚ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಶ್ಯಾನುಭೋಗನಹಳ್ಳಿ ಗ್ರಾಪಂ ಅಧ್ಯಕ್ಷೆ ಕೆ.ಎನ್ .ನಂದಿನಿ, ದೊಡ್ಡಗಂಗವಾಡಿ ಗ್ರಾಪಂ ಅಧ್ಯಕ್ಷ ಸಿ.ಎಸ್ .ಕೆಂಪಯ್ಯ, ಅಕ್ಕೂರು ಗ್ರಾಪಂ ಅಧ್ಯಕ್ಷೆ ಮಂಜುಳಾ ಉಪಸ್ಥಿತರಿದ್ದರು.