ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಜಾವಗಲ್ ಹೋಬಳಿಯು ಆಡಳಿತಾತ್ಮಕವಾಗಿ ಅರಸೀಕೆರೆ ತಾಲೂಕಿನ ವ್ಯಾಪ್ತಿಗೆ ಒಳಪಟ್ಟಿದೆ, ಆದರೆ ವಿಧಾನಸಭಾ ಚುನಾವಣಾ ಮತ ಕ್ಷೇತ್ರ ಬೇಲೂರಿಗೆ ಸೇರುತ್ತದೆ, ಜಾವಗಲ್ ಹೋಬಳಿಯ ಜನತೆ ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ, ಬೇಲೂರು ಶಾಸಕರೂ ಸಮಸ್ಯೆ ಆಲಿಸುವುದಿಲ್ಲ, ಅರಸೀಕೆರೆ ಶಾಸಕರೂ ಜಾವಗಲ್ ಹೋಬಳಿಗೂ ನನಗೂ ಸಂಬಂಧವಿಲ್ಲ ಎನ್ನುತ್ತಾರೆ, ಹಾಗಾದರೆ ಜಾವಗಲ್ ಹೋಬಳಿಯವರು ಯಾರ ಬಳಿ ಕಷ್ಟಗಳನ್ನು ಹೇಳಿಕೊಳ್ಳಬೇಕು?, ಇಂದಿನ ಸಭೆಗೆ ಬೇಲೂರು ಶಾಸಕರು ಏಕೆ ಹಾಜರಾಗಿಲ್ಲ?, ನಮಗೆ ನ್ಯಾಯ ಒದಗಿಸಿ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಸಭೆಯಲ್ಲಿ ಹಾಜರಿದ್ದ ಜಾವಗಲ್ ಹೋಬಳಿಯ ಪರಿಶಿಷ್ಟರು ಆಕ್ಷೇಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಸಂತೋಷ್ ಕುಮಾರ್, ಇದೇ ತಿಂಗಳಲ್ಲಿ ಜಾವಗಲ್ ಹೋಬಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಸಭೆ ಕರೆಯಲು ನಿರ್ಧರಿಸಲಾಗಿದೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್. ಕೆ. ಸುರೇಶ್ ಫೋನ್ ಕರೆಯ ಮೂಲಕ ಮಾಹಿತಿ ನೀಡಿದ್ದಾರೆ, ಜಾವಗಲ್ ಹೋಬಳಿಯವರು ಆ ಸಭೆಯಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಕೊಂಡುಕೊಳ್ಳಬಹುದು ಎಂದರು.
ಈ ಮಧ್ಯೆ ತಾಲೂಕಿನ ಸರ್ಕಾರಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಸ್ಯೆಗಳು ಮತ್ತು ಅಹವಾಲುಗಳಿಗೆ ಉತ್ತರಿಸಲು ಪೂರ್ವ ಸಿದ್ಧತೆ ಮಾಡಿಕೊಂಡು ಬರಬೇಕು, ಜತೆಗೆ ಸರ್ಕಾರಿ ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಮುಂದಿನ ಸಭೆಯಲ್ಲಿ ಹಾಜರಿರಬೇಕು ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ಶಾಸಕ ಕೆ. ಎಂ. ಶಿವಲಿಂಗೇಗೌಡ ಅವರು ತಾಕೀತು ಮಾಡಿದರು, ಈ ಹಿನ್ನೆಲೆಯಲ್ಲಿ ಸಭೆಯನ್ನು ಜುಲೈ 30ಕ್ಕೆ ಮುಂದೂಡಲಾಯಿತು.ಜಿಲ್ಲಾ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ವೆಂಕಟೇಶ್ ಮಾತನಾಡಿ, ಇತ್ತೀಚಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಮಿತಿ ಕಾಲಕಾಲಕ್ಕೆ ಸರಿಯಾಗಿ ಜರುಗುತ್ತಿಲ್ಲ, ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಿ ಪರಿಶಿಷ್ಟರ ಸಮಸ್ಯೆಗಳನ್ನು ಬಗೆಹರಿಸಬೇಕು, ಎಲ್ಲಕ್ಕಿಂತ ಮುಖ್ಯವಾಗಿ ತಾಲ್ಲೂಕಿನಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣಗಳ ದೂರು ಪರಿಣಾಮಕಾರಿಯಾಗಿ ದೂರು ದಾಖಲಾಗುತ್ತಿಲ್ಲ ಇದರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಸಭೆಯ ಗಮನ ಸೆಳೆದರು.
ಕಣಕಟ್ಟೆ ಹೋಬಳಿಯ ಪಡುವನಹಳ್ಳಿ ಗೊಲ್ಲರಹಟ್ಟಿ ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿ ತೆರೆಯುವ ಬಗ್ಗೆ ಹಿಂದಿನ ಸಭೆಯಲ್ಲಿ ತೀರ್ಮಾನಿಸಿದ್ದರೂ ಇಲ್ಲಿಯವರೆಗೂ ನ್ಯಾಯಬೆಲೆ ಅಂಗಡಿಯನ್ನು ತೆರೆದಿಲ್ಲ, ಇದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ಪಡುವನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ನಿವಾಸಿ ಶಿವಣ್ಣ ಸಭೆಯಲ್ಲಿ ಧ್ವನಿ ಎತ್ತಿದರು, ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಸಭೆಯಲ್ಲೇ ಹಾಜರಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಶಿರಸ್ತೇದಾರ್ ಬಾಲಚಂದ್ರ ಅವರಿಗೆ ಶೀಘ್ರವೇ ಆ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಬೇಕು ಎಂದು ಸೂಚಿಸಿದರು. ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಎ. ಪಿ. ಚಂದ್ರಯ್ಯ ಮಾತನಾಡಿ, ನಗರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಮುದಾಯ ಭವನವನ್ನು ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಆ ಜಾಗದಲ್ಲಿ ಸ್ವಚ್ಛತೆ ಇಲ್ಲ, ನಾನೇ ಜಾಗವನ್ನು ವ್ಯವಸ್ಥೆ ಮಾಡಿಕೊಡುತ್ತೇನೆ, ಆ ಜಾಗದಲ್ಲೇ ಅಂಬೇಡ್ಕರ್ ಭವನ ನಿರ್ಮಾಣ ಮಾಡೋಣ ಎಂದು ಭರವಸೆ ನೀಡಿದರು. ಹಬ್ಬನಘಟ್ಟ ಗ್ರಾಮದ ನಿವಾಸಿ ರುದ್ರಮುನಿ ಮಾತನಾಡಿ, ತಾಲೂಕಿನಲ್ಲಿ ಬಗರಹುಕುಂ ಅಡಿ ಅರ್ಜಿ ನಮೂನೆ 53 ಸಮರ್ಪಕವಾಗಿ ವಿಲೇವಾರಿ ಆಗುತ್ತಿಲ್ಲ ಹಾಗೆಯೇ ದಲಿತರಿಗೆ ವಸತಿ ಯೋಜನೆಯಡಿ ಮನೆಗಳು ಮಂಜೂರಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು, ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ಸುಮಾರು 1.10 ಲಕ್ಷ ಮನೆಗಳನ್ನು ಮಂಜೂರು ಮಾಡಿದರು, ಆದರೆ ಹಣ ಬಿಡುಗಡೆ ಮಾಡಲಿಲ್ಲ, ಈ ಹಿಂದೆ ಮಂಜೂರಾಗಿರುವ ಮನೆಗಳು ಪೂರ್ಣಗೊಳ್ಳದೇ ಹೊಸ ಮನೆಗಳ ಮಂಜೂರಾತಿ ಆಗುವುದಿಲ್ಲ, ಮುಖ್ಯಮಂತ್ರಿ ಬಳಿ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.ದಲಿತ ಮುಖಂಡ ರೇಣುಕಪ್ಪ ಮಾತನಾಡಿ, ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಜತೆಗೆ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲ ಹಾಗೂ ವಿದ್ಯುತ್ ದೀಪಗಳು ಇಲ್ಲದೆ ಕತ್ತಲೆಯಲ್ಲಿ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಸಮಸ್ಯೆ ಬಗೆಹರಿಸಿಕೊಡಿ ಎಂದು ಅಳಲು ತೋಡಿಕೊಂಡರು. ತಹಸೀಲ್ದಾರ್ ಸಂತೋಷ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುರೇಶ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಶಿವಮೂರ್ತಿ, ತಾಲೂಕು ಗ್ರಾಮಾಂತರ ವೃತ್ತ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರಾಘವೇಂದ್ರ ಪ್ರಕಾಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಲತಾ ಸರಸ್ವತಿ, ತಾಲೂಕಿನ ಸರ್ಕಾರಿ ಕೆಲವು ಇಲಾಖೆಗಳ ಅಧಿಕಾರಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿವಿಧ ಸಮುದಾಯಗಳ ಮುಖಂಡರು ಹಾಗೂ ಬಾಂಧವರು, ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.