ಅರಮನೆಯ ಸ್ವಚ್ಛತೆ, ಸೌಂದರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ:ಡಾ.ಕೆ.ವಿ. ರಾಜೇಂದ್ರ

KannadaprabhaNewsNetwork | Published : Jun 28, 2024 12:49 AM

ಸಾರಾಂಶ

ಮೈಸೂರು ಅರಮನೆ ನೋಡಲು ಬರುವ ಪ್ರವಾಸಿಗರಿಗೆ, ಪಾರಿವಾಳಗಳ ಹಿಂಡು ಸೆಲ್ಫೀಗೆ ಬಂದು ಖುಷಿ ಕೊಡುತ್ತಿವೆಯಾದರೂ ಅರಮನೆ ಕಟ್ಟಡಕ್ಕೆ ಅಪಾಯಕಾರಿಯಾಗಿವೆ ಎಂಬ ಸಾರ್ವಜನಿಕರಿಂದ ಅಭಿಪ್ರಾಯ

ಕನ್ನಡಪ್ರಭ ವಾರ್ತೆ ಮೈಸೂರು

ಪಾರಿವಾಳಗಳ ಹಿಕ್ಕೆ ಹಾಗೂ ಪ್ರವಾಸಿಗರು, ಸಾರ್ವಜನಿಕರು ಪಾರಿವಾಳಗಳಿಗೆ ಹಾಕುವ ಅತಿಯಾದ ಆಹಾರ ಧಾನ್ಯಗಳ ವ್ಯರ್ಥದಿಂದ ಅರಮನೆಯ ಸ್ವಚ್ಛತೆ ಹಾಗೂ ಸೌಂದರ್ಯ ಹಾಳಾಗುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚಿಸಿದರು.

ಮೈಸೂರು ಅರಮನೆ ನೋಡಲು ಬರುವ ಪ್ರವಾಸಿಗರಿಗೆ, ಪಾರಿವಾಳಗಳ ಹಿಂಡು ಸೆಲ್ಫೀಗೆ ಬಂದು ಖುಷಿ ಕೊಡುತ್ತಿವೆಯಾದರೂ ಅರಮನೆ ಕಟ್ಟಡಕ್ಕೆ ಅಪಾಯಕಾರಿಯಾಗಿವೆ ಎಂಬ ಸಾರ್ವಜನಿಕರಿಂದ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ‌ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಜೈನ್ ಸಂಸ್ಥೆಯ ವತಿಯಿಂದಲೂ ಪ್ರತಿನಿತ್ಯ ಪಾರಿವಾಳಗಳಿಗೆ 2 ಮೂಟೆ ಗೋಧಿ, ಜೋಳ, ಭತ್ತವನ್ನು ನೀಡುತ್ತಿದ್ದು, ಜೊತೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಆಹಾರ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುತ್ತಿದ್ದಾರೆ. ಇದರಿಂದ ಪಾರಿವಾಳಗಳು ಅರಮನೆಯ ಕಟ್ಟಡದ ಮೇಲೆಲ್ಲಾ ಹಿಕ್ಕೆಗಳನ್ನು ಹಾಕಿ ಅರಮನೆಗೆ ಹಾನಿಯುಂಟು ಮಾಡುತ್ತಿವೆ. ಇದು ಹೀಗೆ ಮುಂದುವರೆದರೆ ಮುಂಬರುವ ದಿನಗಳಲ್ಲಿ ಸಾಂಸ್ಕೃತಿಕ ಕಟ್ಟಡ ತನ್ನ ಸೌಂದರ್ಯವನ್ನು ಕಳೆದುಕೊಳ್ಳಲಿದೆ. ಹಾಗಾಗಿ ಈಗಲೇ ಅದನ್ನು ತಡೆಗಟ್ಟಬೇಕು ಎಂದರು.

ಅರಮನೆಯ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಿತ್ಯ ಮುಂಜಾನೆ ಮೂಟೆಗಳಲ್ಲಿ ಗೋದಿ ಕಾಳುಗಳನ್ನು ತಂದು ಸುರಿಯುತ್ತಾರೆ. ಇದನ್ನು ತಿನ್ನಲು ಸಾವಿರಾರು ಪಾರಿವಾಳಗಳು ಅಲ್ಲಿಯೇ ಬೀಡುಬಿಟ್ಟಿವೆ. ಕಾಳು ತಿನ್ನುವ ಸಂದರ್ಭ ಅವುಗಳ ಹಾರುವ ದೃಶ್ಯ ಮನೋಹರವಾಗಿರುತ್ತದೆ. ಇದನ್ನು ಶೂಟ್‌ ಮಾಡಲು ಛಾಯಾಗ್ರಾಹಕರೂ ಆಗಮಿಸುತ್ತಾರೆ. ಪಾರಿವಾಗಳಿಗೆ ಕಾಳು ಹಾಕುವುದನ್ನು ಪಾರಂಪರಿಕ ತಜ್ಞರು ಹಾಗೂ ಪರಿಸರ ಪ್ರೇಮಿಗಳು ಅಪಾಯಕಾರಿ ಎಂದು ಪರಿಗಣಿಸಿದ್ದಾರೆ. ಹೀಗಾಗಿ, ಸಾರ್ವಜನಿಕರು ತಮ್ಮ ಖುಷಿಗಾಗಿ ಪಕ್ಷಿಗಳಿಗೆ ತೊಂದರೆ ನೀಡದಂತೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.

ಅರಮನೆಯ ಅಧಿಕಾರಿಗಳು ಜೈನ್ ಸಂಸ್ಥೆಯೊಂದಿಗೆ ಮಾತನಾಡಿ, ಅವಶ್ಯಕತೆ ತಕ್ಕಷ್ಟು ಆಹಾರವನ್ನು ನೀಡುವಂತೆ ಅವರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಹಾಗೂ ಪ್ರವಾಸಿಗರು ನೀಡುವ ಆಹಾರ ಧಾನ್ಯಗಳಿಗೆ ಅನುಗುಣವಾಗಿ ಅವಶ್ಯವಿದ್ದರೆ ಜೈನ್ ಸಂಸ್ಥೆ ಅವರು ಪಾರಿವಾಳಗಳಿಗೆ ಪಕ್ಷಿಗಳಿಗೆ ಆಹಾರ ಧಾನ್ಯಗಳನ್ನು ಒದಗಿಸುವಂತೆ ಸಂಸ್ಥೆಗೆ ಮಾಹಿತಿ ನೀಡುವಂತೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಧಾನ್ಯಗಳನ್ನು ಹಾಕುತ್ತಿರುವುದರಿಂದ ಅರಮನೆಯ ಸ್ವಚ್ಛತೆಗೆ ಧಕ್ಕೆ ಉಂಟಾಗುತ್ತಿದ್ದು, ಅದರ ಬಗ್ಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಒಬ್ಬ ಸಹಾಯಕನನ್ನು ನೇಮಿಸಬೇಕು ಎಂದು ಅವರು ತಿಳಿಸಿದರು.

ಒಂದೇ ಕಡೆ ಹೆಚ್ಚು ಆಹಾರ ಧಾನ್ಯ ಹಾಕುವ ಬದಲು ಹಂತ ಹಂತವಾಗಿ ಪಾರಂಪರಿಕ ಕಟ್ಟಡಗಳಿಂದ ದೂರದಲ್ಲಿ ಪಕ್ಷಿಗಳಿಗೆ ಆಹಾರ ಧಾನ್ಯ ಹಾಕುವುದನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು. ಈ ಸಲಹೆಯನ್ನು ಒಪ್ಪಿದ ಜೈನ್ ಸಂಸ್ಧೆಯವರು ಈ ರೀತಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಈ ಕಾರ್ಯದಲ್ಲಿ ಪಕ್ಷಿಗಳು ಹಾಗೂ ಪಾರಂಪರಿಕ ಕಟ್ಟಡಗಳಿಗೆ ತೊಂದರೆಯಾಗದಂತೆ ನೋಡಿಕೊಂಡು ಎರಡನ್ನು ಉಳಿಯುವಂತೆ ನೋಡಿಕೊಳ್ಳಬೇಕು. ಅರಮನೆಯ ಆಡಳಿತ ಅಧಿಕಾರಿಗಳು ಸ್ವಚ್ಛತೆಯನ್ನು ಕಾಪಾಡುವಲ್ಲಿ ಮೈಸೂರು ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ಅವರು ಹೇಳಿದರು.

ನಗರ ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಶರೀಫ್, ಅರಮನೆ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

Share this article