ಕನ್ನಡಪ್ರಭ ವಾರ್ತೆ ಹೊಸಪೇಟೆ
ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಮೇಘಾಲಯದ ವಿವಿಧ ಇಲಾಖೆಗಳ ತಂಡಕ್ಕೆ ತಮ್ಮ ರಾಜ್ಯದಲ್ಲಿ ಮಕ್ಕಳ ಬಾಲ್ಯಾರಂಭಿಕ ಶಿಕ್ಷಣ, ಕಲಿಕಾವಸ್ಥೆಯನ್ನು ಜಾರಿಗಾಗಿ ವಿಜಯನಗರ ಜಿಲ್ಲೆಯಿಂದ ಪ್ರೇರಣೆ ದೊರೆತಿದೆ.ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಬುನಾದಿ ಶಿಕ್ಷಣವು ತುಂಬಾ ಮಹತ್ವವಾದದ್ದು, ಈ ನಿಟ್ಟಿನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿಯೇ ವಿಜಯನಗರ ಜಿಲ್ಲೆ ಹೆಸರಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲಿಕೆ- ಟಾಟಾ ಟ್ರಸ್ಟ್
ಸಹಯೋಗದಲ್ಲಿ ೨೦೧೭- ೧೮ನೇ ಸಾಲಿನಿಂದ ಜಿಲ್ಲೆಯ ೫ ಯೋಜನೆಗಳಲ್ಲಿ ೧೫೯೦ ಅಂಗನವಾಡಿ ಕೇಂದ್ರಗಳಿಗೆ ಬರುವ ೩ರಿಂದ ೬ ವರ್ಷದ ಮಕ್ಕಳ ಕಲಿಕೆಯು ಸಮೃದ್ಧವಾಗಿಸುವ ಹಾಗೂ ಗುಣಾತ್ಮಕ ಬಾಲ್ಯಾರಂಭಿಕ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಶಾಲಾಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ.ಜಿಲ್ಲೆಯ ಅಂಗನವಾಡಿಗಳಲ್ಲಿ ನಡೆಯುತ್ತಿರುವ ಶಾಲಾಪೂರ್ವ ಶಿಕ್ಷಣವನ್ನು ಅಧ್ಯಯನ ನಡೆಸಲು ಕಳೆದ ೮ ತಿಂಗಳಲ್ಲಿ, ಛತ್ತಿಸಗಢ, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲದೆ ಹಲವು ರಾಜ್ಯಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ನೀತಿ ಆಯೋಗದ ಅಧಿಕಾರಿಗಳು ಹಾಗೂ ಶಾಲಾಪೂರ್ವ ಶಿಕ್ಷಣ ಮತ್ತು ಶಾಲಾ ಶಿಕ್ಷಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಸಂಘ- ಸಂಸ್ಥೆಗಳು ಶಿಕ್ಷಣ ಆಸಕ್ತರು ಭೇಟಿ ನೀಡಿ ಶಾಲಾಪೂರ್ವ ಶಿಕ್ಷಣವನ್ನು ಅಧ್ಯಯನ ಮಾಡಿದ್ದಾರೆ.
ಜಿಲ್ಲೆಯ ಹೊಸಪೇಟೆ ಶಿಶು ಅಭಿವೃದ್ಧಿ ಯೋಜನೆಯ ಗಾದಿಗನೂರು ವಲಯದ ಗಾದಿಗನೂರು ೪ನೇ ಅಂಗನವಾಡಿ ಕೇಂದ್ರಕ್ಕೆ ಹಾಗೂ ಬೈಲುವದ್ದೀಗೇರಿ ೩ನೇ ಅಂಗನವಾಡಿ ಕೇಂದ್ರಗಳಿಗೆ ಮೇಘಾಲಯ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಅಂಗನವಾಡಿಯ ಕಲಿಕಾ ಕೊಠಡಿಯ ಆಯೋಜನೆ, ಮಕ್ಕಳ ಕಲಿಕಾ ಪೂರಕ ಸಾಮಗ್ರಿಗಳನ್ನು(ಇಲಾಖೆಯಿಂದ ನೀಡಿದ ಹಾಗೂ ಕಾರ್ಯಕರ್ತೆಯರು ಸಂಗ್ರಹಿಸಿ, ತಯಾರಿಸಿದ ಕಲಿಕಾ, ಆಟಿಕೆ ಸಾಮಗ್ರಿಗಳು), ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯವರು ಮಕ್ಕಳಿಗೆ ಕೈಗೊಳ್ಳುವ ಚಟುವಟಿಕೆಗಳನ್ನು ಅವಲೋಕಿಸಿ ವರದಿ ಸಂಗ್ರಹಿಸಿದರು.ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ವೇತಾ ಎಸ್., ಜಿಲ್ಲಾ ನಿರೂಪಣಾಧಿಕಾರಿ ಸುಭದ್ರಾದೇವಿ, ಶಾಲಾಪೂರ್ವ ಶಿಕ್ಷಣದ ಹಿರಿಯ ಅಧಿಕಾರಿ ಡಾ. ಚಿತ್ಕಲಾಂಬ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಯಲಿಗಾರ, ಹಿರಿಯ ಮೇಲ್ವಿಚಾರಕಿ ಅಂಬುಜಾ, ವಲಯದ ಮೇಲ್ವಿಚಾರಕಿಯರಾದ ಲಕ್ಷ್ಮೀದೇವಿ, ಎಲ್.ಡಿ. ನದಾಫ್, ನಸೀಮ ಬೇಗಮ್, ಸುಜಾತಾ, ಕಾರ್ಯಕ್ರಮದ ಜಿಲ್ಲಾ ವ್ಯವಸ್ಥಾಪಕ ಕೊಟ್ರೇಶ ಎ.ವೈ., ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ನಂತರ ಮೇಘಾಲಯದ ವಿವಿಧ ಇಲಾಖೆಗಳ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ, ಜಿಲ್ಲೆಯಲ್ಲಿನ ಮಕ್ಕಳ ಶಾಲಾ ಪೂರ್ವ ಶಿಕ್ಷಣ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಹತ್ತರ ಸ್ಥಾನ: ಜಿಲ್ಲೆಯ ಶಾಲಾಪೂರ್ವ ಶಿಕ್ಷಣವು ದೇಶದಲ್ಲಿ ಮುಂಚೂಣಿಯಲ್ಲಿರುವುದು ತುಂಬಾ ಖುಷಿಯಿದೆ. ಮಕ್ಕಳ ಕಲಿಕೆಗೆ ಶಾಲಾಪೂರ್ವ ಶಿಕ್ಷಣವು ಮಹತ್ತರವಾದ ಸ್ಥಾನ ಪಡೆದುಕೊಂಡಿದೆ ಎಂದರು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ.ಪ್ರೇರಣೆ:
ಮೇಘಾಲಯದಲ್ಲಿ ಈ ರೀತಿಯಾದ ಮಕ್ಕಳಿಗೆ ಕಲಿಕಾವ್ಯವಸ್ಥೆ ಇಲ್ಲ. ಕರ್ನಾಟಕದಲ್ಲಿ ತುಂಬಾ ಚೆನ್ನಾಗಿ ೩ರಿಂದ ೬ ವರ್ಷದ ಮಕ್ಕಳಿಗೆ ಬಾಲ್ಯಾರಂಭಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ನಮ್ಮಲ್ಲಿಯು ಸಹ ಇದೇ ರೀತಿಯ ವ್ಯವಸ್ಥೆ ಮಾಡಿಕೊಳ್ಳಲು ಈ ಕ್ಷೇತ್ರ ಭೇಟಿಯು ಪ್ರೇರಣೆ ನೀಡಿದೆ ಎಂದರು ಮೇಘಾಲಯ ತಂಡದ ಸದಸ್ಯರು.