ಪುರಸಭೆ ಕುರಿತು ಮಿಥ್ಯಾರೋಪ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸದಸ್ಯರ ಆಗ್ರಹ

KannadaprabhaNewsNetwork | Published : Aug 24, 2024 1:31 AM

ಸಾರಾಂಶ

ತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಬಗ್ಗೆ ಮಾಡುತ್ತಿರುವ ತೇಜೋವಧೆ ನೋಡಿ ನೋವಾಗುತ್ತಿದ್ದು, ಇದೊಂದು ಹಳಿಯಾಳ ಪಟ್ಟಣವಾಸಿಗಳ ಹೆಸರಿಗೆ ಮಸಿ ಬಳಿಯು ಪ್ರಯತ್ನವಾಗಿದೆ. ಇದನ್ನು ತಡೆಯಬೇಕು ಎಂದು ಪುರಸಭೆ ಸದಸ್ಯರು ಆಗ್ರಹಿಸಿದರು.

ಹಳಿಯಾಳ: ಪುರಸಭೆಯ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಬಗ್ಗೆ ಸುಳ್ಳು ಆರೋಪಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ನಿಂದನೆ ಮಾಡಿ ಕಿರುಕುಳ ನೀಡುತ್ತಿರುವ ಪ್ರಕಾಶಗೌಡ ನಾಗನಗೌಡ ಪಾಟೀಲ ಅವರ ಕೃತ್ಯವನ್ನು ಪುರಸಭೆಯ ಸದಸ್ಯರು ಪಕ್ಷಾತೀತವಾಗಿ ಖಂಡಿಸಿದರು.ಶುಕ್ರವಾರ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರ ಮುಂದಾಳತ್ವದಲ್ಲಿ ಮೊದಲ ಸಾಮಾನ್ಯ ಸಭೆಯು ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಪರವಾಗಿ ಮಾತನಾಡಿದ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ ಅವರು, ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಬಗ್ಗೆ ಮಾಡುತ್ತಿರುವ ತೇಜೋವಧೆ ನೋಡಿ ನೋವಾಗುತ್ತಿದ್ದು, ಇದೊಂದು ಹಳಿಯಾಳ ಪಟ್ಟಣವಾಸಿಗಳ ಹೆಸರಿಗೆ ಮಸಿ ಬಳಿಯು ಪ್ರಯತ್ನವಾಗಿದೆ. ಇದನ್ನು ತಡೆಯಬೇಕು. ಅದಕ್ಕಾಗಿ ಮುಖ್ಯಾಧಿಕಾರಿಗಳು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಅದಕ್ಕೆ ಸರ್ವ ಸದಸ್ಯರ ಬೆಂಬಲವಿದೆ ಎಂದರು.

ಬಿಜೆಪಿ ಸದಸ್ಯರ ಪರವಾಗಿ ಮಾತನಾಡಿದ ಉದಯ ಹೂಲಿ ಅವರು, ಹಳಿಯಾಳ ಪುರಸಭೆಯಲ್ಲಿ ನಡೆಯುತ್ತಿರುವ ಪ್ರತಿ ಹಂತದ ಮಾಹಿತಿಯು ಪ್ರಕಾಶಗೌಡ ಪಾಟೀಲ ಅವರಿಗೆ ತಲುಪತ್ತದೇ ಎಂದರೆ ಪುರಸಭೆಯಲ್ಲಿ ಕೆಲವರು ಇದರಲ್ಲಿ ಶಾಮೀಲಾದಂತಿದೆ. ಅಂಥವರನ್ನು ಮೊದಲು ಹುಡುಕಿ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಿ ಎಂದರು.

ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಮಾತನಾಡಿ, ಕಳೆದ ಹಲವಾರು ತಿಂಗಳಿಂದ ನನಗೆ ಮಾಹಿತಿ ಹಕ್ಕಿನಡಿಯಲ್ಲಿ ಪ್ರಕಾಶಗೌಡ ಪಾಟೀಲ ಅವರು ಮಾಹಿತಿ ಕೇಳಿ ಶೋಷಣೆ ನಡೆಸಿದ್ದಾರೆ. ಮಾಹಿತಿ ನೀಡಿದ್ದರೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ. ಅದಕ್ಕಾಗಿ ನಾನು ನೊಂದು ವರ್ಗಾವಣೆ ಬಯಸಿದ್ದೆ. ಆದರೆ ನಮ್ಮ ಹಿರಿಯ ಶಾಸಕ ಆರ್.ವಿ. ದೇಶಪಾಂಡೆಯವರು ಹಳಿಯಾಳದಲ್ಲಿ ಸೇವೆ ಮುಂದುವರಿಸುವಂತೆ ನನಗೆ ಧೈರ್ಯ ತುಂಬಿದರು. ನಾನು ಶಾಸಕ ದೇಶಪಾಂಡೆ ಮತ್ತು ಪುರಸಭೆಯ ಸರ್ವ ಸದಸ್ಯರ ಹಾಗೂ ಇಲ್ಲಿನ ಮುಖಂಡರ ಮತ್ತು ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ತರದಂತೆ ಸೇವೆ ಸಲ್ಲಿಸಲಿದ್ದು, ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದರು.

ಆಶ್ರಯ ಮನೆ ಚರ್ಚೆ: ಸಭೆಯಲ್ಲಿ ಆಶ್ರಯ ನಿವೇಶನಗಳಿಗಾಗಿ ಮಂಜೂರಾದ 6 ಎಕರೆ ಜಮೀನುಗಳ ಬಗ್ಗೆ ಚರ್ಚೆ ನಡೆಯಿತು. ಹೊಸ ಆಶ್ರಯ ಮನೆಗಳನ್ನು ಮಂಜೂರು ಮಾಡುವಾಗ ಪ್ರತಿ ಸದಸ್ಯರಿಗೆ ಎರಡೂ ಅರ್ಹ ಫಲಾನುಭವಿಗಳ ಹೆಸರನ್ನು ಸೂಚಿಸಲು ಅವಕಾಶ ನೀಡಬೇಕೆಂದು ಉದಯ ಹೂಲಿ ಆಗ್ರಹಿಸಿದರು.

ಅಭಿವೃದ್ಧಿ ಕಾಮಗಾರಿ ಟೆಂಡರನ್ನು ಕಡಿಮೆ ದರದಲ್ಲಿ ಪಡೆಯುತ್ತಿರುವುದರಿಂದ ಗುಣಮಟ್ಟದ ಕೆಲಸ ನಡೆಯುತ್ತಿಲ್ಲ ಎಂದು ಹಲವು ಸದಸ್ಯರು ಆಕ್ಷೇಪಿಸಿದರು. ಸಭೆಯಲ್ಲಿ ನೂತನವಾಗಿ ನಾಮನಿರ್ದೇಶಿತರಾಗಿ ಬಂದ ಸತ್ಯಜಿತ ಗಿರಿ, ರವಿ ತೋರಣಗಟ್ಟಿ ಮತ್ತು ಶಿವಳ್ಳಿ ಅವರನ್ನು ಸ್ವಾಗತಿಸಲಾಯಿತು. ಸಭೆಯಲ್ಲಿ ನೂತನ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ ಇದ್ದರು.

Share this article