ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಹಲವು ಸದಸ್ಯರ ವಿರುದ್ಧ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಸೇಡಿನ ಸಮರ ಸಾರಿದ್ದಾರೆ. ವಾರಕ್ಕೊಬ್ಬರಿಗೆ ಷೋಕಾಸ್ ನೋಟಿಸ್ ನೀಡಿ ಅವರ ಸದಸ್ಯತ್ವವನ್ನು ರದ್ದುಗೊಳಿಸಲಾರಂಭಿಸಿದ್ದಾರೆ. ಈಗಾಗಲೇ ಹಲವರ ಸದಸ್ಯತ್ವವನ್ನು ಅಮಾನತುಗೊಳಿಸಿದ್ದು, ಇನ್ನೂ ಹಲವರಿಗೆ ನೋಟಿಸ್ ಜಾರಿಗೊಳಿಸಿ ಸದಸ್ಯತ್ವ ರದ್ದುಪಡಿಸುವ ಮುನ್ಸೂಚನೆ ನೀಡಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ-ಗೌರವಗಳಿಗೆ ಧಕ್ಕೆ ತಂದು ಧ್ಯೇಯೋದ್ದೇಶಗಳಿಗೆ ವಿರುದ್ಧವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಪರಿಷತ್ತಿನ ನಿಬಂಧನೆಯಡಿ ಬರುವ ನಿಯಮ ೭ (೮)ರ ಅಡಿಯಲ್ಲಿ ಸದಸ್ಯತ್ವ ರದ್ದುಗೊಳಿಸುವ ಕ್ರಮ ಅನುಸರಿಸುತ್ತಿದ್ದಾರೆ.
ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಅವರ ಏಕ ಪಕ್ಷೀಯ ಕ್ರಮದ ವಿರುದ್ಧ ಸಿಡಿದೆದ್ದಿರುವ ಪರಿಷತ್ ಸದಸ್ಯರೂ ಕೂಡ ಜೋಶಿ ಕಾನೂನು ಸಮರ ನಡೆಸುವುದಕ್ಕೆ ಟೊಂಕಕಟ್ಟಿ ನಿಂತಿದ್ದಾರೆ.ಶುಕ್ರವಾರ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ವಿವಿಧ ರೈತ, ಪ್ರಗತಿಪರ ಸಂಘಟನೆಗಳು, ಸಾಹಿತ್ಯ ಪರಿಷತ್ತಿನ ಸದಸ್ಯರ ಸಭೆಯಲ್ಲಿ ಕೇಂದ್ರ ಕಸಾಪ ಬೈಲಾ ತಿದ್ದುಪಡಿ, ಜಿಲ್ಲಾ ಕಸಾಪ ಸದಸ್ಯರ ಸದಸ್ಯತ್ವ ರದ್ದು, ಮುಂದೆ ಅನುಸರಿಸಬೇಕಾದ ಕಾನೂನು ಕ್ರಮಗಳ ಕುರಿತಂತೆ ವಿಸ್ತೃತ ಚರ್ಚೆ ನಡೆಸಿದರು.
ಕ್ರಮಕ್ಕೆ ಡಾ.ಎಚ್.ಎಸ್.ಮುದ್ದೇಗೌಡ ಪತ್ರ:ಕೇಂದ್ರ ಕಸಾಪ ಸಂಘ-ಸಂಸ್ಥೆಗಳ ಪ್ರತಿನಿಧಿ ಡಾ.ಎಚ್.ಎಸ್.ಮುದ್ದೇಗೌಡ ಅವರು, ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಅಹಿತಕರ ಘಟನೆಗಳು, ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಲವರ ಅತಿಕ್ರಮ ಪ್ರವೇಶ, ಆತಂಕದ ವಾತಾವರಣ ಸೃಷ್ಟಿಸಲು ಕಾರಣರಾದ ರಂಗಸ್ವಾಮಿ, ಹರ್ಷ ಪಣ್ಣೇದೊಡ್ಡಿ, ನಾಗಮಂಗಲ ಧನಂಜಯ, ಮದ್ದೂರಿನ ಶಿವ ಹಾಗೂ ಇವರಿಗೆ ಕುಮ್ಮಕ್ಕು ನೀಡಿ ಗಲಾಟೆ ಎಬ್ಬಿಸುವುದಕ್ಕೆ ಕಾರಣರಾದ ಸಮ್ಮೇಳನದ ಸಂಚಾಲಕಿಯಾಗಿದ್ದ ಮೀರಾ ಶಿವಲಿಂಗಯ್ಯ ಸೇರಿದಂತೆ ಎಲ್ಲರ ಸದಸ್ಯತ್ವವನ್ನು ಅಮಾನತಿನಲ್ಲಿಡಬೇಕು. ಇದು ಸಾಧ್ಯವಾಗದಿದ್ದರೆ ಈ ಪತ್ರವನ್ನು ರಾಜೀನಾಮೆ ಪತ್ರವೆಂದು ಪರಿಗಣಿಸಿ ಅಂಗೀಕರಿಸುವಂತೆ ಬರೆದಿರುವ ಪತ್ರದ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿ ಕಾಲೆಳೆಯುವ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷರ ಸರ್ವಾಧಿಕಾರಿ ಧೋರಣೆಗಳನ್ನೆಲ್ಲಾ ಸಮರ್ಥಿಸಿಕೊಂಡು ಸ್ಥಳೀಯರ ವಿರುದ್ಧವೇ ದನಿ ಎತ್ತಿದ್ದಾರೆ. ಇವರ ರಾಜೀನಾಮೆಯನ್ನು ಮೊದಲು ಅಂಗೀಕರಿಸುವುದೇ ಸೂಕ್ತ ಎಂಬ ನಿಲುವನ್ನು ಅನೇಕರು ವ್ಯಕ್ತಪಡಿಸಿದರು.ಬೈಲಾ ತಿದ್ದುಪಡಿಗೆ ವಿರೋಧ:
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ೨೦೧೯, ೨೦೨೨ ಹಾಗೂ ೨೦೨೩ನೇ ನಿಬಂಧನೆಗಳಿಗೆ ರಾಜ್ಯಾಧ್ಯಕ್ಷರು ತಿದ್ದುಪಡಿ ತರುವುದಕ್ಕೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಮಂಡ್ಯ ಕಸಾಪ ಪ್ರಕರಣವನ್ನು ಮುಂದಿಟ್ಟುಕೊಂಡು ಇನ್ನು ಮುಂದೆ ಅಧ್ಯಕ್ಷರ ಸ್ಥಾನ ತೆರವಾದಲ್ಲಿ ಆ ಸ್ಥಾನಕ್ಕೆ ಅರ್ಹರಾದ ಬೇರೊಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಕಾರ್ಯಕಾರಿ ಸಮಿತಿಯಿಂದ ಹಿಂಪಡೆದಿರುವುದು.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಇನ್ನು ಮುಂದೆ ಕೇಂದ್ರ ಸಾಹಿತ್ಯ ಪರಿಷತ್ತಿನ ಮಾರ್ಗಸೂಚಿಯಲ್ಲೇ ನಡೆಸುವುದು. ಸಮ್ಮೇಳನ ನಡೆಯುವ ಜಿಲ್ಲೆಯ ಜಿಲ್ಲಾಡಳಿತ, ಇಲಾಖೆಗಳು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಸಮ್ಮೇಳನ ಮುಗಿದ ಬಳಿಕ ಉಳಿಕೆ ಹಣವನ್ನು ಕೇಂದ್ರ ಕಸಾಪ ಲೆಕ್ಕಕ್ಕೆ ಜಮೆ ಮಾಡುವುದು.
ಜಮೆ ಮಾಡದ ಜಿಲ್ಲಾಧಿಕಾರಿಗಳ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದು ಸೇರಿದಂತೆ ವಿವಿಧ ತಿದ್ದುಪಡಿಗಳಿಗೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಅಧ್ಯಕ್ಷರು ಇಡೀ ಪರಿಷತ್ತನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದವು.ಸಭೆಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಎಂ.ವಿ.ಧರಣೇಂದ್ರಯ್ಯ, ಮೀರಾ ಶಿವಲಿಂಗಯ್ಯ, ಸಾಹಿತ್ಯ ಪರಿಷತ್ತಿನ ತಾಲೂಕು ಘಟಕಗಳ ಅಧ್ಯಕ್ಷರು, ಮುಖಂಡರಾದ ಕಾರಸವಾಡಿ ಮಹದೇವು, ಕೃಷ್ಣಪ್ರಸಾದ್, ಯುವ ಪ್ರಶಸ್ತಿ ಪುರಸ್ಕೃತ ಎಂ.ಸಿ.ಲಂಕೇಶ್, ನಿವೃತ್ತ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಂಕರೇಗೌಡ, ವಿ.ಡಿ.ಸುವರ್ಣ, ಚಂದ್ರಲಿಂಗು ಇತರರಿದ್ದರು.ನಿರ್ಣಯಗಳೇನು?
೧.ಕೇಂದ್ರ ಕಸಾಪ ಬೈಲಾ ತಿದ್ದುಪಡಿ, ಸದಸ್ಯರ ಸದಸ್ಯತ್ವ ರದ್ದು ಕುರಿತಂತೆ ಕಾನೂನಾತ್ಮಕ ಹೋರಾಟ ನಡೆಸುವುದು.೨. ಈ ಸಂಬಂಧ ಮುಖ್ಯಮಂತ್ರಿಯನ್ನು ಜಿಲ್ಲೆಯ ಹಿರಿಯ ಸಾಹಿತಿಗಳು, ಸಂಘಟನೆಗಳ ಮುಖಂಡರನ್ನೊಳಗೊಂಡ ನಿಯೋಗ ಭೇಟಿ ಮಾಡಿ ಕಸಾಪ ರಾಜ್ಯಾಧ್ಯಕ್ಷರ ಏಕಪಕ್ಷೀಯ ಧೋರಣೆಗಳನ್ನು ಮನವರಿಕೆ ಮಾಡಿಕೊಡುವುದು.
೩. ಜಿಲ್ಲಾದ್ಯಂತ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ವಿರುದ್ಧ ಹೋರಾಟ ನಡೆಸುವುದು.೪. ಮಹೇಶ್ ಜೋಶಿ ಅವರು ಸಮ್ಮೇಳನಕ್ಕೆ ಖರ್ಚು ಮಾಡಿದ ೨.೫೦ ಕೋಟಿ ರು. ಲೆಕ್ಕ ಕೊಡುವುದು
೫. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡರ ಕೇಂದ್ರ ಕಸಾಪ ಅಧ್ಯಕ್ಷರ ವಿಶ್ವಾಸ ಗಳಿಸಿಕೊಳ್ಳಲು ಜಿಲ್ಲೆ ಕಸಾಪ ಸದಸ್ಯರ ವಿರುದ್ಧ ಪತ್ರ ಬರೆದಿರುವುದಕ್ಕೆ ಖಂಡನಾ ನಿರ್ಣಯರಾಜ್ಯಾಧ್ಯಕ್ಷ ಏನು ಪಾಳೇಗಾರನಾ. ಜಿಲ್ಲಾಡಳಿತ, ಉಸ್ತುವಾರಿ ಸಚಿವರೇ ಸಮ್ಮೇಳನದ ಖರ್ಚು-ವೆಚ್ಚಗಳ ಮಾಹಿತಿ ನೀಡಿದ್ದಾರೆ. ಅಂದ ಮೇಲೆ ರಾಜ್ಯಾಧ್ಯಕ್ಷ ೨.೫೦ ಕೋಟಿ ರು. ಲೆಕ್ಕವನ್ನು ಕೊಡದಿರುವುದು ಸರ್ವಾಧಿಕಾರಿ ಧೋರಣೆ. ಸಾರ್ವಜನಿಕರ ಹಣಕ್ಕೆ ಕೂಡಲೇ ಲೆಕ್ಕ ಕೊಡಬೇಕು.- ಪ್ರೊ.ಬಿ.ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ
ಈಗಾಗಲೇ ಕೇಂದ್ರ ಕಸಾಪದ ಒಂದು ತಿದ್ದುಪಡಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದರ ನಡುವೆ ಇನ್ನಷ್ಟು ತಿದ್ದುಪಡಿಗಳನ್ನು ತರುವುದಕ್ಕೆ ಮುಂದಾಗಿರುವ ಅಧ್ಯಕ್ಷರ ಧೋರಣೆ ಸರಿಯಲ್ಲ. ಯಾರನ್ನೂ ದ್ವೇಷಿಸದೆ ತಾಳ್ಮೆ, ಸಹನೆಯಿಂದ ಮುನ್ನಡೆಯುವುದು ಒಳ್ಳೆಯದು.- ಕೆ.ಟಿ.ಶ್ರೀಕಂಠೇಗೌಡ, ಮಾಜಿ ಸದಸ್ಯರು, ವಿಧಾನಪರಿಷತ್ತು
ರಾಜ್ಯಾಧ್ಯಕ್ಷರ ವರ್ತನೆ ದಿನೇ ದಿನೇ ಅತಿರೇಕದ ಹಂತ ತಲುಪುತ್ತಿದೆ. ಅವರ ನಿಲುವುಗಳ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಶಿವಮೊಗ್ಗದಲ್ಲಿ ಅವರ ವಿರುದ್ಧ ಹೋರಾಟ ಶುರುವಾಗಿದೆ. ಅದು ಎಲ್ಲೆಡೆ ಹರಡಬೇಕು. ಅಧ್ಯಕ್ಷರ ಕುಚೋದ್ಯಗಳಿಗೆ ಅಂತ್ಯವಾಡಬೇಕು.- ಪ್ರೊ.ಜಿ.ಟಿ.ವೀರಪ್ಪ, ಮಾಜಿ ಅಧ್ಯಕ್ಷರು, ಜಿಲ್ಲಾ ಕಸಾಪರಾಜ್ಯಾಧ್ಯಕ್ಷರ ನಡೆ, ನಿಲುವುಗಳು ಸಮ್ಮೇಳನದ ಆರಂಭದಿಂದ ಕೊನೆಯವರೆಗೂ ವಿರುದ್ಧವಾಗಿಯೇ ಇದ್ದವು. ಮಹಿಳೆಯರನ್ನೂ ಗೌರವದಿಂದ ನಡೆಸಿಕೊಳ್ಳಲಿಲ್ಲ. ಹಲವಾರು ಹಿರಿಯ ಸಾಹಿತಿಗಳಿಗೆ ಮುಖ್ಯ ವೇದಿಕೆಯಲ್ಲಿ ವಿಚಾರಮಂಡನೆಗೆ ಅವಕಾಶ ನೀಡಲಿಲ್ಲ. ದ್ವೇಷ ಸಾಧಿಸುತ್ತಲೇ ಬಂದದ್ದು ವಿಪರ್ಯಾಸ.- ಸುನಂದಾ ಜಯರಾಂ, ರೈತ ನಾಯಕಿ