ಕುಟುಂಬ ಕಲ್ಯಾಣದಲ್ಲಿ ಪುರುಷರ ಸಹಭಾಗಿತ್ವ ಪ್ರಮುಖ: ಡಾ.ಚೇತನ್‌

KannadaprabhaNewsNetwork | Published : Jul 13, 2024 1:30 AM

ಸಾರಾಂಶ

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಡಿಕೇರಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಶ್ವ ಜನಸಂಖ್ಯೆ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಎಲ್ಲಾ ಅರ್ಹ ದಂಪತಿಗಳೂ ಕುಟುಂಬ ಕಲ್ಯಾಣ ವಿಧಾನ ಅನುಸರಿಸಿ ಚಿಕ್ಕ ಕುಟುಂಬ ರೂಪಿಸಿಕೊಳ್ಳಬೇಕು. ಪೋಷಕರು ತಮ್ಮ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಉತ್ತೇಜನ ಕೊಡಬೇಕು. ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಪುರುಷರ ಸಹಭಾಗಿತ್ವ ಬಹಳ ಪ್ರಮುಖ ಎಂದು ಮಡಿಕೇರಿ ತಾಲೂಕು ಆರೋಗ್ಯಾಧಿಕಾರಿ ಡಾ.ಚೇತನ್‌ ಎಂ.ಯು. ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಜನಸಂಖ್ಯೆ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಡಾ. ಚೇತನ್ ಎಂ.ಯು ಹಾಗೂ ವಿರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ದಯಾನಂದ ಕಾರ್ಯಕ್ರಮ ಉದ್ಘಾಟಿಸಿದರು.

1987ರ ಜು.11 ರಂದು ವಿಶ್ವ ಜನಸಂಖ್ಯೆ 500 ಕೋಟಿ ತಲುಪಿದ ಕಾರಣ ಈ ದಿನ ವಿಶ್ವ ಜನಸಂಖ್ಯಾ ದಿನವಾಗಿ ಆಚರಿಸಲಾಗುತ್ತಿದೆ ಎಂದು ಡಾ.ಚೇತನ್‌ ಮಾಹಿತಿ ನೀಡಿದರು.

ಮದುವೆಯಾಗಲು ಗಂಡಿಗೆ 21 ವರ್ಷ ಮತ್ತು ಹೆಣ್ಣಿಗೆ ಕನಿಷ್ಠ 18 ವರ್ಷಗಳು ತುಂಬಿರಬೇಕು. ಮದುವೆಯ ನಂತರ ಕನಿಷ್ಠ 2 ವರ್ಷಗಳವರೆಗೂ ಮೊದಲನೇ ಮಗು ಪಡೆಯಬಾರದು. ಎರಡು ಮಕ್ಕಳ ನಡುವೆ ಕನಿಷ್ಠ 3 ವರ್ಷಗಳ ಅಂತರವಿರಬೇಕು. 2 ಮಕ್ಕಳನ್ನು ಹೊಂದಿರುವ ದಂಪತಿಗಳು ಶಾಶ್ವತ ಕುಟುಂಬ ಕಲ್ಯಾಣ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ವಿರಾಜಪೇಟೆ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ದಯಾನಂದ ಮಾತನಾಡಿ, ವಿಶ್ವ ಜನಸಂಖ್ಯಾ ದಿನಾಚರಣೆಯ ಉದ್ದೇಶ, ಇತಿಹಾಸ, ಜನಸಂಖ್ಯಾ ಸ್ಫೋಟದಿಂದ ಉಂಟಾಗುವ ಪರಿಣಾಮಗಳು, ವಸತಿ ಮತ್ತು ಆಹಾರ ಸಮಸ್ಯೆ, ನಿರುದ್ಯೋಗ, ಬಡತನ, ಹಸಿವು, ಆರ್ಥಿಕ ಅಸಮಾನತೆ, ಅನಕ್ಷರತೆ, ನೈಸರ್ಗಿಕ ಸಂಪನ್ಮೂಲಗಳ ಕೊರತೆ, ಅನೈರ್ಮಲ್ಯತೆಗೆ ಕಾರಣವಾಗುತ್ತದೆ ಎಂದು ವಿವರಿಸಿದರು. ಜನಸಂಖ್ಯಾ ಹೆಚ್ಚಳದಿಂದ ಆರ್ಥಿಕ ಅಭಿವೃದ್ಧಿ, ಉದ್ಯೋಗ, ಆದಾಯದ ಹಂಚಿಕೆ, ಬಡತನ ಸಾಮಾಜಿಕ ರಕ್ಷಣೆಯ ಮೇಲೆ ಪರಿಣಾಮ ಬೀರುತ್ತದೆ. ಗ್ರಾಮೀಣ ಭಾಗದಲ್ಲಿ ಗಂಡು ಮಗುವೇ ವಂಶೋದ್ಧಾರಕ, ಗಂಡು ಮಗು ಇಲ್ಲದಿದ್ದರೆ ಮೋಕ್ಷ ಸಿಗುವುದಿಲ್ಲ, ಗಂಡು ಮಗು ಜನಿಸುವವರೆಗೂ ಮಕ್ಕಳನ್ನು ಪಡೆಯಬೇಕು ಎಂಬ ಮೂಢ ನಂಬಿಕೆಯಿಂದ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ತಿಳಿಸಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ ಮಾತನಾಡಿ, ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರ, ಎನ್‌ಜಿಒ ಹಾಗೂ ಸಮುದಾಯ ಸಂಸ್ಥೆಗಳ ವತಿಯಿಂದ ಜಾಗೃತಿ ಅಭಿಯಾನಗಳು, ವಿಶ್ವ ವಿದ್ಯಾನಿಲಯಗಳ ಸಹಕಾರದಿಂದ ಸಾರ್ವಜನಿಕ ಉಪನ್ಯಾಸಗಳು, ಚರ್ಚೆಗಳು, ಆರೋಗ್ಯ ಶಿಬಿರಗಳು, ಸಮುದಾಯದ ಸಜ್ಜುಗೊಳಿಸುವಿಕೆ ಸಹಕಾರದಿಂದ ಸಾರ್ವಜನಿಕರಿಗೆ ಕುಟುಂಬ ಕಲ್ಯಾಣ ಯೋಜನೆಗಳು, ಸಂತಾನೋತ್ಪತ್ತಿ, ಆರೋಗ್ಯ ಸಂಬಂಧಿತ ಸುಸ್ಥಿರ ಅಭಿವೃದ್ದಿ ಗುರಿಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಿ ಜನಸಂಖ್ಯಾ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಾಥ್ ನಿರೂಪಿಸಿ, ವಂದಿಸಿದರು. ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ದೇಚಮ್ಮ ಹಾಗೂ ನಗರ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಮಟ್ಟದ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಮತ್ತು ತಾಲೂಕು ಆಶಾ ಮೆಂಟರ್ ಹಾಗೂ ತಾಲೂಕು ಮಟ್ಟದ ಆಶಾಕಾರ್ಯಕರ್ತೆಯರು ಭಾಗವಹಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ, ಸ್ವಾಗತಿಸಿದರು.

Share this article