ಕನ್ನಡಪ್ರಭ ವಾರ್ತೆ ವಿಜಯಪುರ
ಮನಸ್ಸು ಶುದ್ಧವಾಗದೇ ದೇವಸ್ಥಾನ ಯಾತ್ರೆ ಎಂದು ಸುತ್ತಿದರೆ ಪುಣ್ಯ ಲಭಿಸದು. ಎಲ್ಲದಕ್ಕೂ ಮನವೇ ಮೂಲ. ಹೀಗಾಗಿ ಮೊದಲು ನಾವು ನಮ್ಮ ಮನ ಪರಿಶುದ್ದ ಮಾಡುತ್ತಾ, ಪರಶಿವನನ್ನು ಪೂಜಿಸಿದರೆ ದೈವ ನಮಗೆ ಒಲಿಯುವನು. ಕಷ್ಟದ ಸಮಯದಲ್ಲಿ ದೇವರು ಏಕೆ ಸುಮ್ಮನಿದ್ದಾನೆ ಎಂದು ಚಿಂತಿಸಬೇಡಿ. ಆ ದೇವರು ಅವನ ಮೇಲಿನ ಭಕ್ತಿ, ನಂಬಿಕೆ ಮತ್ತು ಏಕಾಗ್ರತೆಯಿಂದ ಕೂಡಿದ ಪ್ರಾರ್ಥನೆಯನ್ನು ಪರೀಕ್ಷಿಸುತ್ತಾನೆ. ಎದ್ಭಾವಂ ತದ್ಭವತಿ ಎನ್ನುವಂತೆ, ನಮ್ಮ ಭಾವನೆ ಒಳ್ಳೆಯದಿದ್ದರೆ ಭಾಗ್ಯ ನಮ್ಮ ಬೆನ್ನತ್ತಿ ಬರುತ್ತದೆ. ವಿನಯ ನಿನ್ನೊಳಗಿದ್ದರೆ ವಿಜಯ ನಿನ್ನದಾಗುತ್ತದೆ. ಸಹನೆ, ತಾಳ್ಮೆಯಿದ್ದರೆ ಸಕಲವು ನಿನ್ನದಾಗುತ್ತವೆ ಎಂದು ಪರಮಪೂಜ್ಯ ಶಂಕರಾನಂದ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.ನಗರದ ಸೇನಾ ನಗರದಲ್ಲಿರುವ ಶಿವಾಲಯ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಹಮ್ಮಿಕೊಂಡ ಕುಂಭಮೇಳ, ಉಡಿ ತುಂಬುವ ಕಾರ್ಯಕ್ರಮ ಮತ್ತು ಪ್ರವಚನದ ಸಮಾರೋಪದಲ್ಲಿ ಅವರು ಮಾತನಾಡಿದರು. ಶಿವ ಶಿವ ಎಂದು ಕೇವಲ ಶಿವರಾತ್ರಿ ದಿನದಂದು ಮಾತ್ರ ಜಪಿಸಿದೇ, ಪ್ರತಿನಿತ್ಯವು ಶಿವಧ್ಯಾನ ಮಾಡಬೇಕು. ಶಿವನನ್ನು ಮನದಲ್ಲಿ ನೆನೆದರೆ ಯಾವುದೇ ಕಷ್ಟ-ನಷ್ಟಗಳು ಎದುರಾದರೂ ಅವು ದೂರಾಗಿ ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂದರು.
ನಿತ್ಯ ಭಕ್ತಿಯಿಂದ ಪೂಜೆ, ಶಿವಧ್ಯಾನ, ನಾಮಸ್ಮರಣೆ ಮಾಡಿದರೆ ಮನುಷ್ಯನಲ್ಲಿರುವ ಅಂಧಕಾರ, ಅಹಂಕಾರ ಮತ್ತು ವಿಕಾರರೂಪಗಳು ದೂರಾಗಿ ಬದುಕಿನಲ್ಲಿ ನೆಮ್ಮದಿ ದೊರೆಯುತ್ತದೆ. ಶಿವರಾತ್ರಿ ದಿನದಂದು ಉಪವಾಸ ಮಾಡುವುದು ಎಂದರೆ ಕೇವಲ ಆಹಾರ ತ್ಯಜಿಸುವುದಲ್ಲ. ದೈವಶಕ್ತಿಯನ್ನು ಒಲಿಸಿಕೊಳ್ಳಲು ಇಡೀ ದಿನ-ರಾತ್ರಿ ಜಾಗರಣೆ ಮಾಡುತ್ತಾ, ನಿರಂತರ ಭಕ್ತಿ-ಶ್ರದ್ಧೆಯಿಂದ ಪ್ರಾರ್ಥನೆ, ತಪಸ್ಸು, ಧ್ಯಾನ, ಶಿವನಾಮಸ್ಮರಣೆ, ಶಿವನಾಮ ಜಪ, ಶಿವಪೂಜೆ ಮುಖಾಂತರ ಆತ್ಮಶುದ್ಧಿ ಹಾಗೂ ಮನಶುದ್ಧಿಗೊಳಿಸಿ, ಶಿವನ ಅನುಗ್ರಹ ಪಡೆಯುವುದೇ ನಿಜವಾದ ಶಿವರಾತ್ರಿ. ಭಕ್ತಿಯು ತೋರಿಕೆಗೆ ಮಾತ್ರ ಆಗದೇ ಕೇವಲ ಶಿವರಾತ್ರಿ ದಿನಕ್ಕಷ್ಟೇ ಸೀಮಿತವಾಗಬಾರದು. ಕಾರಣ ನಿತ್ಯವೂ ನಾವು ಶಿವನನ್ನು ಭಕ್ತಿಪೂರ್ವಕವಾಗಿ ಪೂಜಿಸಿದರೆ ನಮ್ಮ ಪಾಪಗಳೆಲ್ಲವೂ ಪರಿಹಾರವಾಗಿ ಮೋಕ್ಷ ಪ್ರಾಪ್ತವಾಗುತ್ತದೆ ಎಂದು ಹೇಳಿದರು.ಲಕ್ಷ್ಮೀ ದೇವಸ್ಥಾನದಿಂದ ಹೊರಟ ಮೆರವಣಿಗೆ ನೂರಾರು ಮಹಿಳೆಯರು ಕುಂಭ ಹೊತ್ತು ಶಿವನಾಮ ಜಪಿಸುತ್ತಾ, ನವರಸಪುರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿತು. ಕೊನೆಗೆ ಶಿವಾಲಯ ದೇವಸ್ಥಾನ ತಲುಪಿತು. ನಂತರ ಈಶ್ವರನಿಗೆ ಮಹಾರುದ್ರಾಭಿಷೇಕ, ಹೋಮ-ಹವನ ಜರುಗಿದವು. ಸುತ್ತಮುತ್ತಲಿನ ಬಡಾವಣೆಗಳ ನೂರಾರು ಸುಮಂಗಲೆಯರಿಗೆ ಉಡಿ ತುಂಬಿ, ಅವರ ಇಷ್ಟಾರ್ಥಗಳು ನೆರವೇರಲೆಂದು ಶಿವನಲ್ಲಿ ಪಾರ್ಥಿಸಲಾಯಿತು. ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಗುರುಬಸಯ್ಯ ಹಿರೇಮಠ, ಪದಾಧಿಕಾರಿಗಳಾದ ಡಾ.ರಾಜಕುಮಾರ ಡೊಳ್ಳಿ, ನಿಂಗಪ್ಪ ನಿಂಬಾಳಕರ, ಭರಮಣ್ಣ ಕಡಕೋಳ, ಕಾಶಿಲಿಂಗ ಶೇಗಾವಿ, ಅಪ್ಪಾಸಾಹೇಬ ಹಂಚಿನಾಳ, ಅರವಿಂದ ಹಂಗರಗಿ, ಶ್ರೀಶೈಲ ಅವಜಿ, ಅಲ್ಲಮಪ್ರಭು ಶಿರಹಟ್ಟಿ, ವಿಶ್ವನಾಥ ತೋಟದ, ಸಾಬು ಅಗ್ರಾಣಿ, ಶಿವಯೋಗೆಪ್ಪ ಹತ್ತಿ, ರಾಜಶೇಖರ ಉಮರಾಣಿ, ಬಿ.ವ್ಹಿ.ಕುಂಬಾರ, ಪ್ರಫುಲ ನಿಂಬಾಳಕರ, ಬಿ.ಎಸ್.ಬಿರಾದಾರ, ಆರ್.ಜಿ. ಉತ್ತರಕರ ಪ್ರೊ.ಬಿ.ಎಸ್.ಬೆಳಗಲಿ, ಪ್ರೊ.ಎಂ.ಎಸ್.ಖೊದ್ನಾಪೂರ, ಸಾವಿತ್ರಿ ಹಿರೇಮಠ, ಶೋಭಾ ಚವ್ಹಾಣ, ಶಾಂತಾ ಕಪಾಳಿ ಇನ್ನಿತರರು ಉಪಸ್ಥಿತರಿದ್ದರು.