ರೈಲುಗಳ ಸುಗಮ ಸಂಚಾರಕ್ಕಾಗಿ ವೈಟ್‌ಫೀಲ್ಡ್‌ ಬಳಿ ಮೆಟ್ರೋ ವಿಸ್ತರಣೆ

KannadaprabhaNewsNetwork | Updated : Mar 04 2024, 01:42 PM IST

ಸಾರಾಂಶ

ನೇರಳೆ ಮಾರ್ಗದ ಮೆಟ್ರೋ ಸುಗಮ ಸಂಚಾರಕ್ಕಾಗಿ 588 ಮೀ. ವಿಸ್ತರಿಸಲು ನಿರ್ಧರಿಸಿ ಟೆಂಡರ್‌ ಕರೆಯಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸುಗಮ ಸಂಚಾರದ ಉದ್ದೇಶದಿಂದ ಈಗಿನ ವೈಟ್‌ಫೀಲ್ಡ್‌ ನಿಲ್ದಾಣದಿಂದ ಮೆಟ್ರೋ ಮಾರ್ಗವನ್ನು 588 ಮೀ.ನಷ್ಟು ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಮುಂದಾಗಿದೆ.

ಈ ಸಂಬಂಧ ಕಾಮಗಾರಿ ನಡೆಸಲು ಈಚೆಗಷ್ಟೇ ₹48.62 ಕೋಟಿ ಟೆಂಡರನ್ನು ಎಂ.ವೆಂಕಟರಾವ್‌ ಇನ್ಫ್ರಾ ಪ್ರೊಜೆಕ್ಟ್‌ ಪ್ರೈ.ಲಿ. ಕಂಪನಿಗೆ ನೀಡಲಾಗಿದ್ದು, ಶೀಘ್ರವೇ ಕಾರ್ಯಾದೇಶ ನೀಡುವ ಸಾಧ್ಯತೆಯಿದೆ. 

ಇದರಿಂದ ಸದ್ಯ ಪೂರ್ವದ ವೈಟ್‌ಫೀಲ್ಡ್‌ -ಪಶ್ಚಿಮದ ಚಲ್ಲಘಟ್ಟದವರೆಗೆ 43.49 ಕಿ.ಮೀ. ಇರುವ ನೇರಳೆ ಮಾರ್ಗ ವೈಟ್‌ಫೀಲ್ಡ್‌ನ ಬೆಳತ್ತೂರು ಕಾಲೋನಿವರೆಗೆ ಕೊಂಚ ವಿಸ್ತರಣೆ ಆಗಲಿದೆ. 

ಮಾರ್ಗ ವಿಸ್ತರಣೆ ಆಗುತ್ತಿದೆ ವಿನಃ ಹೊಸದಾಗಿ ಕೊನೆಯ ಹಂತದಲ್ಲಿ ಯಾವುದೇ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತಿಲ್ಲ. ಪ್ರಯಾಣಿಕರಿಗೆ ಇದರಿಂದ ನೇರವಾಗಿ ಯಾವುದೇ ಪ್ರಯೋಜನವಿಲ್ಲ.

ಆದರೆ, ರೈಲುಗಳು ನಿಲ್ದಾಣದಿಂದ ಮುಂದಕ್ಕೆ ಹೋಗಿ ಹಿಂದಿರುಗಿ ಬರಲು (ರಿವರ್ಸ್‌ ಬರಲು) ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಮತ್ತು ವೈಟ್‌ಫೀಲ್ಡ್‌ ಡಿಪೋದ 3ನೇ ಲೈನನ್ನು 28 ಮೀ. ವಿಸ್ತರಣೆ ಮಾಡುವ ಉದ್ದೇಶದಿಂದ ಒಟ್ಟಾರೆ ಮಾರ್ಗವನ್ನು ವಿಸ್ತರಣೆ ಮಾಡಲಾಗುತ್ತಿದೆ. 

ಕಳೆದ ಅಕ್ಟೋಬರ್‌ನಲ್ಲಿ ಬಿಎಂಆರ್‌ಸಿಎಲ್ ಈ ಟೆಂಡರ್‌ ಕರೆದಿತ್ತು. ಮುಂದಿನ ಒಂದೂವರೆ ವರ್ಷದಲ್ಲಿ ವಿಸ್ತರಣಾ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.

Share this article