ಹೆಬ್ಬಾಳ-ಜೆಪಿನಗರ, ಹೊಸಹಳ್ಳಿ - ಕಡಬಗೆರೆಗೆ ಮೆಟ್ರೋ

KannadaprabhaNewsNetwork | Updated : Mar 15 2024, 03:00 PM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಬೆಂಗಳೂರಿನ ಸಂಚಾರ ಸಮಸ್ಯೆ ಪರಿಹಾರಕ್ಕಾಗಿ ಮೆಟ್ರೋ ಸೂಕ್ತ ಪರಿಹಾರ. ಭವಿಷ್ಯದ ಅವಶ್ಯಕತೆಗೆ ಅನುಗುಣವಾಗಿ ಮೆಟ್ರೋ ಮೂರನೇ ಹಂತಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ನಗರಕ್ಕೆ ₹15,611 ಕೋಟಿ ವೆಚ್ಚದಲ್ಲಿ 44.65 ಕಿ.ಮೀ. ಉದ್ದದ ಮೂರನೇ ಹಂತದ ಮೆಟ್ರೋ ಯೋಜನೆ ಸೇರಿದಂತೆ ಸಾಲುಸಾಲು ಯೋಜನೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರಿನ ಸಂಚಾರ ಸಮಸ್ಯೆ ಪರಿಹಾರಕ್ಕಾಗಿ ಮೆಟ್ರೋ ಸೂಕ್ತ ಪರಿಹಾರ. 

ಭವಿಷ್ಯದ ಅವಶ್ಯಕತೆಗೆ ಅನುಗುಣವಾಗಿ ಮೆಟ್ರೋ ಮೂರನೇ ಹಂತಕ್ಕೆ ಒಪ್ಪಿಗೆ ನೀಡಲಾಗಿದೆ. ಇದರಡಿ ಹೊರ ವರ್ತುಲ ರಸ್ತೆಯಲ್ಲಿ (ಹೆಬ್ಬಾಳದಿಂದ ಜೆ.ಪಿ‌ನಗರ) 32.15 ಕಿ.ಮೀ. ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ 12.5 ಕಿ.ಮೀ. ಉದ್ದದ ಮೆಟ್ರೋ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. 

ಇದಕ್ಕಾಗಿ ₹15,611 ಕೋಟಿ ವೆಚ್ಚವಾಗಲಿದ್ದು, ಶೇ.80ರಿಂದ 85ರಷ್ಟು ಹಣವನ್ನು ರಾಜ್ಯ ಸರ್ಕಾರ ಹೊಂದಿಸಲಿದೆ. ಈಗಾಗಲೇ ಕಾರ್ಯ ಸಾಧ್ಯತಾ ವರದಿ ಸಿದ್ಧಪಡಿಸಿ ಕೇಂದ್ರದ ಅನುಮೋದನೆಯನ್ನೂ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಮೆಟ್ರೋ ಮೂರನೇ ಹಂತದ ಯೋಜನೆಯನ್ನು 2028ರ ವೇಳೆಗೆ ಪೂರ್ಣಗೊಳಿಸುವುದಾಗಿ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಭೂಸ್ವಾಧೀನ ಮತ್ತಿತರ ಕಾರಣಗಳಿಗೆ ಹೆಚ್ಚು ಕಡಿಮೆ ಆಗಬಹುದು.ಮೆಟ್ರೋ ಮೂರನೇ ಹಂತದ ಯೋಜನೆಯಿಂದ ಹೊರ ವರ್ತುಲ ರಸ್ತೆ ಸಂಪೂರ್ಣ ಮೆಟ್ರೋ ಸೇವೆ ವಿಸ್ತರಣೆಯಾಗಲಿದೆ.

ಹೆಬ್ಬಾಳದಿಂದ ಗೊರಗುಂಟೆ ಪಾಳ್ಯ ವೃತ್ತ, ಸುಮ್ಮನಹಳ್ಳಿ ವೃತ್ತ, ಮೈಸೂರು ರಸ್ತೆ, ಕನಕಪುರ ರಸ್ತೆ ಮಾರ್ಗವಾಗಿ ಜೆ.ಪಿ.ನಗರವರೆಗೆ 32.15 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣ ಮಾಡಲಾಗುತ್ತದೆ ಎಂದು ವಿವರಣೆ ನೀಡಿದರು.

ಬರೋಬ್ಬರಿ 65 ಎಕರೆ ಟ್ರೀ ಪಾರ್ಕ್ ನಿರ್ಮಾಣಕ್ಕೆ ಒಪ್ಪಿಗೆ
ಪೂರ್ವ ಬೆಂಗಳೂರಿಗರಿಗೆ ಮೂಲಸೌಕರ್ಯ ಒದಗಿಸಲು ಎನ್‌ಜಿಇಎಫ್‌ನ 100 ಎಕರೆ ಜಾಗದಲ್ಲಿ 65 ಎಕರೆಯಲ್ಲಿ ₹11 ಕೋಟಿ ವೆಚ್ಚದಲ್ಲಿ ಬೃಹತ್‌ ಟ್ರೀ ಪಾರ್ಕ್ ನಿರ್ಮಾಣಕ್ಕೆ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ.

1,500 ಕೋಟಿಗೂ ಹೆಚ್ಚು ಬೆಲೆ ಬಾಳುವ ಜಮೀನನ್ನು ಸಾರ್ಜನಿಕರ ಬಳಕೆಗೆ ಮೀಸಲಿಡಲು ಸರ್ಕಾರ ನಿರ್ಧರಿಸಿದೆ. ಈ ಜಾಗದಲ್ಲಿ ವಾಕಿಂಗ್ ಟ್ರ್ಯಾಕ್‌, ಸೈಕಲ್‌ ಟ್ರ್ಯಾಕ್‌, ಆಟದ ಮೈದಾನ ಸೇರಿದಂತೆ ಟ್ರೀ ಪಾರ್ಕ್ ನಿರ್ಮಾಣ ಮಾಡಲಾಗುವುದು. ತನ್ಮೂಲಕ ಪೂರ್ವ ಭಾಗಕ್ಕೆ ಬೃಹತ್‌ ಉದ್ಯಾನವನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಕೃಷ್ಣಬೈರೇಗೌಡ ಹೇಳಿದರು.

ಇನ್ನೂ 40 ಎಕರೆ ಜಾಗ ಅಲ್ಲೇ ಉಳಿಯಲಿದ್ದು, ಅಲ್ಲಿ ಬೇರೆ ಬೇರೆ ನಿರ್ಮಾಣಗಳಿಗೆ ಉದ್ದೇಶಿಸಲಾಗುತ್ತಿದೆ. ಸ್ಕೈ ಡೆಕ್‌ ನಿರ್ಮಾಣ ಸೇರಿದಂತೆ ಬೇರೆ ಯಾವುದೇ ಪ್ರಸ್ತಾವನೆ ಗುರುವಾರ ಚರ್ಚೆಗೆ ಬರಲಿಲ್ಲ ಎಂದರು.

ಬಿಡಿಎ ಸೈಟ್‌ ಖರೀದಿಗೆ ಮತ್ತೆ ಅವಕಾಶ
ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಕೆಂಪೇಗೌಡ ಸೇರಿದಂತೆ ಇತರೆ ಬಡಾವಣೆಗಳಲ್ಲಿ 2016-18ರ ಅವಧಿಯಲ್ಲಿ ಲೀಸ್‌ ಕಮ್‌ ಸೇಲ್‌ ಆಧಾರದ ಮೇಲೆ ನಿವೇಶನ ಹಂಚಿಕೆಯಾಗಿದ್ದು, ಹಣದ ಕೊರತೆಯಿಂದಾಗಿ ಕಂತುಗಳನ್ನು ಪಾವತಿಸಲು ವಿಫಲವಾದವರಿಗೆ ಪೂರ್ಣ ಹಣ ಪಾವತಿಸಿ ನಿವೇಶನ ಪಡೆದುಕೊಳ್ಳಲು ಅವಕಾಶ ಕಲ್ಪಿಸಿ ಸಚಿವ ಸಂಪುಟ ನಿರ್ಧಾರ ಮಾಡಿದೆ.

ನಿವೇಶನ ಹಂಚಿಕೆಯಾದವರಲ್ಲಿ ಕೆಲವರು ಕಂತುಗಳನ್ನು ಪಾವತಿಸಿಲ್ಲ. ಕೆಲವರು ಅರ್ಧ ಪಾವತಿಸಿ ಸುಮ್ಮನಾಗಿದ್ದಾರೆ. ಆರ್ಥಿಕ ಶಕ್ತಿ ಇಲ್ಲದೆ ಹಂಚಿಕೆಯಾದ ನಿವೇಶನ ಕಳೆದುಕೊಂಡಿದ್ದಾರೆ. ಇದಕ್ಕೆ ಅವರಲ್ಲಿ ಆರ್ಥಿಕ ಶಕ್ತಿ ಇಲ್ಲದಿರುವುದು ಕಾರಣ. ಹೀಗಾಗಿ ಅಂತಹವರಿಗೆ ಶೇ.12ರಷ್ಟು ಬಡ್ಡಿದರದಲ್ಲಿ ದಂಡ ವಿಧಿಸಿ ನಿವೇಶನ ಪಡೆಯಲು ಮತ್ತೊಮ್ಮೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಮೆಟ್ರೋ 3ನೇ ಹಂತಕ್ಕೆ ಡಬಲ್‌ ಡೆಕ್ಕರ್‌: ವರದಿಗಾಗಿ ಟೆಂಡರ್‌
ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಅನುಸರಿಸಲಾದ ಡಬಲ್‌ ಡೆಕ್ಕರ್‌ (ಫ್ಲೈಓವರ್ ಕಂ ಮೆಟ್ರೋ) ಮಾದರಿಯನ್ನು ನಗರದ ಇತರ ಕಡೆಗಳಲ್ಲೂ ಅನುಷ್ಠಾನಕ್ಕೆ ಚಿಂತನೆ ನಡೆಸಿದ್ದ ರಾಜ್ಯ ಸರ್ಕಾರದ ಆಶಯದಂತೆ ಇದೀಗ ಬೆಂಗಳೂರು ಮೆಟ್ರೋ ನಿಗಮ ಮುಂದಿನ ಮೂರನೇ ಹಂತದ ಮೂರು ಕಾರಿಡಾರ್‌ನಲ್ಲಿ ಡಬ್ಬಲ್‌ ಡೆಕ್ಕರ್‌ ನಿರ್ಮಾಣಕ್ಕಾಗಿ ಕಾರ್ಯಸಾಧ್ಯತೆ ವರದಿ ರೂಪಿಸಿಕೊಳ್ಳಲು ಮುಂದಾಗಿದೆ.

ಮೆಟ್ರೋದ 3ನೇ ಹಂತದ ಯೋಜನೆಯ ಮೊದಲ ಕಾರಿಡಾರ್‌ ಜೆ.ಪಿ.ನಗರ ನಾಲ್ಕನೇ ಹಂತದಿಂದ ಹೆಬ್ಬಾಳ (29.20 ಕಿಮೀ), ಎರಡನೇ ಕಾರಿಡಾರ್‌ ಹೊಸಹಳ್ಳಿ-ಕಡಬಗೆರೆ (11.45 ಕಿ.ಮೀ.) ಮತ್ತು ಸರ್ಜಾಪುರ-ಇಬ್ಬಲೂರು (ಹೊರವರ್ತುಲ ರಸ್ತೆ 14 ಕಿ.ಮೀ.) ಮತ್ತು ‘3 ಎ’ ಹಂತದಲ್ಲಿನ ಮೂರನೇ ಕಾರಿಡಾರ್‌ ಆಗರ-ಕೋರಮಂಗಲ 3ನೇ ಬ್ಲಾಕ್‌ವರೆಗೆ (2.4 ಕಿ.ಮೀ.) ನಡುವೆ ಡಬಲ್‌ ಡೆಕ್ಕರ್‌ ನಿರ್ಮಾಣಕ್ಕೆ ಯೋಚಿಸಿದೆ.

ಫ್ಲೈಓವರ್ ಕಂ ಮೆಟ್ರೋ ಅಂದರೆ ಮೇಲಿನ ಹಂತದಲ್ಲಿ ಮೆಟ್ರೋ, ಕೆಳಗಿನ ಹಂತದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಕಾರ್ಯಸಾಧ್ಯತೆ ಅಧ್ಯಯನಕ್ಕಾಗಿ ಗುರುವಾರ (ಮಾ.14) ಟೆಂಡರ್‌ ಕರೆಯಲಾಗಿದೆ. ಏ.17 ಟೆಂಡರ್‌ನ ಕೊನೆಯ ದಿನವಾಗಿದೆ.

ನಮ್ಮ ಮೆಟ್ರೋ ಪ್ರತ್ಯೇಕವಾಗಿ 3ಎ ಹಂತದಲ್ಲಿ ಸರ್ಜಾಪುರದಿಂದ ಆಗರ, ಕೋರಮಂಗಲ ಡೇರಿ ಸರ್ಕಲ್‌ ಮತ್ತು ಮೇಖ್ರಿ ಸರ್ಕಲ್‌ ಮೂಲಕ ಹೆಬ್ಬಾಳ ಸಂಪರ್ಕಿಸುವ ಮೆಟ್ರೋ ಮಾರ್ಗ ರೂಪಿಸಿಕೊಳ್ಳಲು ಡಿಪಿಆರ್‌ ತಯಾರಿಕೆಗೆ ಯೋಚಿಸಿದ್ದು, ಸರ್ಕಾರದ ಒಪ್ಪಿಗೆ ಬಾಕಿ ಇದೆ.

ಪ್ರಸ್ತುತ, ನಮ್ಮ ಮೆಟ್ರೋ ಹಳದಿ ಲೈನ್‌ ಅಂದರೆ ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ರಾಗಿಗುಡ್ಡ-ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನಡುವಣ 3.35 ಕಿ.ಮೀ. ಮರೇನಹಳ್ಳಿ ಮಾರ್ಗ ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್‌ ಎಂದು ಕರೆಸಿಕೊಂಡಿದೆ. ಮುಂದಿನ ಕೆಲ ತಿಂಗಳುಗಳಲ್ಲಿ ಇದರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಉಪ ಮುಖ್ಯಮಂತ್ರಿ, ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಈಚೆಗೆ ಮೆಟ್ರೋ ಕಾಮಗಾರಿ ಪರಿಶೀಲಿಸಿದ್ದ ವೇಳೆ, ವಿಮಾನ ನಿಲ್ದಾಣ ಮಾರ್ಗದಲ್ಲಿ ಪಿಲ್ಲರ್‌ಗಳನ್ನು ಹಾಕದೆ ಇರುವ ಕಡೆ ಎರಡು ಹಂತಗಳನ್ನು ನಿರ್ಮಿಸಬೇಕು ಎಂದು ಸೂಚಿಸಿದ್ದರು. ಮೇಲಿನ ಹಂತದಲ್ಲಿ ಮೆಟ್ರೋ ಕೆಳಗಿನ ಹಂತದಲ್ಲಿ ರಸ್ತೆ ಮಾಡುವಂತೆ ಸೂಚಿಸಿದ್ದರು. ಜೊತೆಗೆ ಭವಿಷ್ಯದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಈ ಆಲೋಚನೆಯನ್ನು ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದ್ದರು. ಅದರಂತೆ ಇದೀಗ ಹೊಸ ಮೂರು ಮಾರ್ಗಗಳಲ್ಲಿ ಡಬಲ್‌ ಡೆಕ್ಕರ್‌ ಮಾದರಿ ಅನುಸರಿಸಲು ಮುಂದಾಗಿದೆ.

ಬೊಮ್ಮಸಂದ್ರ ಮೆಟ್ರೋ ನಿಲ್ದಾಣಕ್ಕೆ ಡೆಲ್ಟಾ ಹೆಸರು

ಬೆಂಗಳೂರು: ಬೊಮ್ಮಸಂದ್ರ ಮೆಟ್ರೋ ರೈಲು ನಿಲ್ದಾಣ ನಿರ್ಮಾಣ ವೆಚ್ಚದ ₹65 ಕೋಟಿ ಮೊತ್ತವನ್ನು ಭರಿಸಲು ಡೆಲ್ಟಾ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಮುಂದೆ ಬಂದಿದೆ. ಈ ಮೊತ್ತವನ್ನು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಪಾವತಿಸುವ ಮೂಲಕ 30 ವರ್ಷ ‘ಡೆಲ್ಟಾ ಎಲೆಕ್ಟ್ರಾನಿಕ್‌ ಬೊಮ್ಮಸಂದ್ರ ಮೆಟ್ರೋ ನಿಲ್ದಾಣ’ ನಾಮಕರಣ ಹಕ್ಕನ್ನು ಪಡೆಯಲಿದೆ.

ಈ ಕುರಿತ ಒಪ್ಪಂದಕ್ಕೆ ಬಿಎಂಆರ್‌ಸಿಎಲ್‌ ಹಾಗೂ ಡೆಲ್ಟಾ ಗುರುವಾರ ಒಡಂಬಡಿಕೆ ಮಾಡಿಕೊಂಡಿದ್ದು, ಮೊದಲ ಕಂತಾಗಿ ₹10 ಕೋಟಿಯನ್ನು ನಮ್ಮ ಮೆಟ್ರೋಗೆ ನೀಡಿತು. ಡೆಲ್ಟಾ ಎಲೆಕ್ಟ್ರಾನಿಕ್ಸ್ ತ್ರೈವಾನ್ ದೇಶದ ಉತ್ಪಾದನಾ ಕಂಪನಿಯಾಗಿದ್ದು, ಪರಿಸರ ಸುಸ್ಥಿರತೆಗೆ ಬದ್ಧತೆ ಹೊಂದಿದೆ.

ಒಪ್ಪಂದದ ವೇಳೆ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ ರಾವ್, ಡೆಲ್ಟಾ ಎಲೆಕ್ಟ್ರಾನಿಕ್ಸ್ ಅಧ್ಯಕ್ಷ ಬೆಂಜಮಿನ್ ಲಿನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ನಿರಂಜನ್ ನಾಯಕ್ ಉಪಸ್ಥಿತರಿದ್ದರು.

ಈ ಒಪ್ಪಂದದ ಮೂಲಕ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ಕಂಪನಿಗಳ ಜೊತೆ ಮಾಡಿಕೊಂಡ ಮೂರನೇ ಒಡಂಬಡಿಕೆ ಇದಾಗಿದೆ. ಈ ಹಿಂದೆ ಕೋನಪ್ಪನ ಅಗ್ರಹಾರ ಮತ್ತು ಹೆಬ್ಬಗೋಡಿ ಮೆಟ್ರೋ ನಿಲ್ದಾಣಗಳ ಕುರಿತು ಕ್ರಮವಾಗಿ ಇನ್ಫೋಸಿಸ್ ಫೌಂಡೇಶನ್ ಮತ್ತು ಬಯೋಕಾನ್ ಫೌಂಡೇಶನ್ ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

Share this article