ಮೆಟ್ರೋ ಹಳದಿ ಮಾರ್ಗ ಪೂರ್ಣ ಸಂಚಾರ ಈ ವರ್ಷವೂ ಇಲ್ಲ!

KannadaprabhaNewsNetwork |  
Published : Jul 08, 2025, 01:48 AM ISTUpdated : Jul 08, 2025, 07:30 AM IST
yellow line metro | Kannada Prabha

ಸಾರಾಂಶ

ನಮ್ಮ ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ಗೆ ಪ್ರಾರಂಭವಾದರೂ ಇಲ್ಲಿ ರೈಲುಗಳ ತ್ವರಿತ ಸಂಚಾರವಾಗಲು, ಪ್ರಯಾಣಿಕರಿಗೆ ಈ ಮಾರ್ಗದ ಪೂರ್ಣ ಪ್ರಯೋಜನ ಸಿಗಬೇಕಾದರೆ 2026ರ ಮಾರ್ಚ್‌ವರೆಗೆ ಕಾಯುವುದು ಅನಿವಾರ್ಯವಾಗಿದೆ.

ಮಯೂರ್‌ ಹೆಗಡೆ 

 ಬೆಂಗಳೂರು :  ನಮ್ಮ ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ಗೆ ಪ್ರಾರಂಭವಾದರೂ ಇಲ್ಲಿ ರೈಲುಗಳ ತ್ವರಿತ ಸಂಚಾರವಾಗಲು, ಪ್ರಯಾಣಿಕರಿಗೆ ಈ ಮಾರ್ಗದ ಪೂರ್ಣ ಪ್ರಯೋಜನ ಸಿಗಬೇಕಾದರೆ 2026ರ ಮಾರ್ಚ್‌ವರೆಗೆ ಕಾಯುವುದು ಅನಿವಾರ್ಯವಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ತಿಳಿಸಿದಂತೆ ಜುಲೈ ಅಂತ್ಯದೊಳಗೆ ಹಳದಿ ಮಾರ್ಗವನ್ನು ದಕ್ಷಿಣ ವಲಯದ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ತಪಾಸಣೆ ನಡೆಸಲಿದ್ದಾರೆ. ಹಾಗೂ ಆಗಸ್ಟ್‌ ಮಧ್ಯದಿಂದ ವಾಣಿಜ್ಯ ಸಂಚಾರ ಆರಂಭವಾಗುವ ಸಾಧ್ಯತೆಯಿದೆ.

ಈ ಮಾರ್ಗಕ್ಕೆ ಒಟ್ಟಾರೆ 15 ರೈಲುಗಳು ಬರಬೇಕು. ಚೀನಾದ ಸಿಆರ್‌ಆರ್‌ಸಿಯಿಂದ ಬಂದ ಪ್ರೊಟೊಟೈಪ್‌ ರೈಲು, ಕಲ್ಕತ್ತಾದ ತೀತಾಘರ್‌ ರೈಲ್ವೆ ಸಿಸ್ಟಂ ಪೂರೈಸಿರುವ ಎರಡು ರೈಲು ಸೇರಿ ಒಟ್ಟೂ ಮೂರು ರೈಲುಗಳು ಬಿಎಂಆರ್‌ಸಿಎಲ್‌ ಬಳಿಯಿವೆ. ಮುಂದೆ ಒಂದೆರಡು ತಿಂಗಳಿಗೆ ಎರಡು ರೈಲುಗಳಂತೆ ತೀತಾಘರ್‌ ರೈಲು ಫ್ಯಾಕ್ಟರಿ ಉಳಿದ 12 ರೈಲುಗಳನ್ನು ಪೂರೈಸಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.

ಎಲ್ಲ ರೈಲುಗಳು ಬಂದು ಸೇರಲು ಸುಮಾರು 10 ತಿಂಗಳ ಕಾಲಾವಧಿ ಬೇಕಾಗಬಹುದು. ರೈಲುಗಳು ಸೇರ್ಪಡೆ ಆಗುತ್ತಿದ್ದಂತೆ ಸಂಚಾರದ ಆವರ್ತನ ಅವಧಿ ಹಂತ ಹಂತವಾಗಿ ತಗ್ಗಲಿದೆ. 18.82ಕಿಮೀ ಉದ್ದದ ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಸದ್ಯಕ್ಕೆ ರೈಲುಗಳ ಸಂಚಾರದ ನಡುವೆ 25 ನಿಮಿಷದ ಅಂತರ ಇರಲಿದ್ದು, ನಿಲ್ದಾಣಗಳಲ್ಲಿ ಪ್ರಯಾಣಿಕರು ಕಾಯುವುದು ಅನಿವಾರ್ಯ.

ಸದ್ಯಕ್ಕೆ ಹಳದಿ ಮಾರ್ಗಕ್ಕಾಗಿ ಕೇವಲ 3 ರೈಲುಗಳು ಮಾತ್ರ ಲಭ್ಯವಿದೆ. ಈ ಮೊದಲು ಹಳದಿ ಮಾರ್ಗದ ಎಲ್ಲ 16 ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ಮಾಡುವ ಬದಲು ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸಲು ಯೋಜಿಸಲಾಗಿತ್ತು. ಈ ಮೂಲಕ ರೈಲುಗಳ ಆವರ್ತನದ ಅವಧಿ ಕಡಿಮೆಗೊಳಿಸಿ ಪ್ರಯಾಣಿಕರ ಕಾಯುವಿಕೆ ತಪ್ಪಿಸಲು ಯೋಚನೆ ಇತ್ತು. ಆದರೆ, ಇದರಿಂದ ಸಂಪರ್ಕ ತೊಂದರೆ, ಆದಾಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಎಲ್ಲ ನಿಲ್ದಾಣಗಳಲ್ಲಿ ನಿಲ್ಲಿಸಲು ತೀರ್ಮಾನವಾಗಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಸಿಬಿಟಿಸಿ ತಂತ್ರಜ್ಞಾನ ಆಧಾರಿತ ಸಿಗ್ನಲಿಂಗ್‌ ಅಳವಡಿಕೆ ಆದ ಹಿನ್ನೆಲೆಯಲ್ಲಿ ಹಳದಿ ಮಾರ್ಗದ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನವನ್ನು (ಐಎಸ್‌ಎ) ಸಿಗ್ನಲಿಂಗ್‌ ಗುತ್ತಿಗೆ ಪಡೆದ ಸೈಮನ್ಸ್‌ ಇಂಡಿಯಾ ಲಿ. ಕಂಪನಿ ಬಿಎಂಆರ್‌ಸಿಎಲ್‌ಗೆ ಸಲ್ಲಿಸಲಿದೆ. ಬಹುತೇಕ ಇದೇ ವಾರ ಸಿಎಂಆರ್‌ಎಸ್‌ ತಂಡವನ್ನು ಬಿಎಂಆರ್‌ಸಿಎಲ್‌ ತಪಾಸಣೆಗೆ ಆಹ್ವಾನಿಸಲಿದೆ. ಹೊಸ ಮಾರ್ಗ, ಹೊಸ ಮಾದರಿಯ ರೈಲು ಬಳಕೆ ಆಗುತ್ತಿರುವ ಕಾರಣ ಮೂರು-ನಾಲ್ಕು ದಿನಗಳ ಕಾಲ ಈ ಮಾರ್ಗದ ಪರಿಶೀಲನೆಯನ್ನು ಸಿಎಂಆರ್‌ಎಸ್‌ ನಡೆಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಐಎಸ್‌ಎ ವರದಿ ಕುರಿತು ಬಿಎಂಆರ್‌ಸಿಎಲ್‌ ಈಗಾಗಲೇ ಸಿಎಂಆರ್‌ಎಸ್‌ ತಂಡಕ್ಕೆ ವಿವರಿಸಲಾಗಿದೆ. ಸುರಕ್ಷತಾ ಆಯುಕ್ತರ ತಂಡ ಎಲ್ಲ ಹದಿನಾರು ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಜತೆಗೆ ಸಂಪೂರ್ಣ ಟ್ರ್ಯಾಕ್‌ ಪರಿಶೀಲನೆ ರೈಲಿನ ಕಾರ್ಯಾಚರಣೆ ತಪಾಸಣೆ ಆಗಲಿದೆ. ಬೈಯಪ್ಪನಹಳ್ಳಿಯಲ್ಲಿನ ಕಾರ್ಯಾಚರಣೆ ನಿಯಂತ್ರಣ ಕೇಂದ್ರದಲ್ಲೂ ಒಂದು ದಿನ ತಪಾಸಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

90ಸೆಕೆಂಡ್‌ಗೊಮ್ಮೆ ರೈಲು ಓಡಾಟ ನಿರೀಕ್ಷೆ: 

ಯೋಜನೆ ಪ್ರಕಾರ ಈ ಮಾರ್ಗದಲ್ಲಿ 90 ಸೆಕೆಂಡ್‌ಗೊಮ್ಮೆ ರೈಲುಗಳು ಓಡಾಡಬೇಕು. ಸದ್ಯ ನೇರಳೆ, ಹಸಿರು ಮಾರ್ಗದಲ್ಲಿ ಡಿಟಿಜಿ (ಡಿಸ್ಟೆನ್ಸ್‌ ಟು ಗೋ) ತಂತ್ರಜ್ಞಾನದಲ್ಲಿ ರೈಲುಗಳು 3 ನಿಮಿಷಕ್ಕೊಮ್ಮೆ ಸಂಚರಿಸುತ್ತಿವೆ. ಇದೀಗ ಹಳದಿ ಮಾರ್ಗದ ರೈಲುಗಳು ಸಿಬಿಟಿಸಿ (ಕಮ್ಯೂನಿಕೇಶನ್‌ ಬೇಸ್ಡ್‌ ಟ್ರೈನ್‌ ಕಂಟ್ರೋಲ್‌) ತಂತ್ರಜ್ಞಾನ ಆಧಾರಿತವಾಗಿ ಸಂಚರಿಸಲಿವೆ. ಈ ತಂತ್ರಜ್ಞಾನ ರೈಲುಗಳ ಸಂಚಾರದ ನಡುವಿನ ಅಂತರ ಎರಡೂವರೆ ನಿಮಿಷಗಳಿಂದ 90 ಸೆಕೆಂಡುಗಳಿಗೆ ಇಳಿಯುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳುತ್ತಾರೆ.

PREV
Read more Articles on