ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜಧಾನಿ ಬೆಂಗಳೂರಿನ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡುವ ಟೆಂಡರ್ ಪಡೆದ ಗುತ್ತಿಗೆದಾರ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮೈಕ್ರೋ ಚಿಪ್ ಅಳವಡಿಕೆ ವಿಳಂಬದೊಂದಿಗೆ ಚಿಪ್ ಖರೀದಿ ದರವೂ ಮತ್ತಷ್ಟು ದುಬಾರಿ ಆಗಲಿದೆ.
ಕಳೆದ ಸೆಪ್ಟಂಬರ್‌ನಲ್ಲಿ ನಗರದ ಮಲ್ಲೇಶ್ವರ ಹಾಗೂ ಮತ್ತಿಕೆರೆ ವಾರ್ಡ್‌ನಲ್ಲಿ ಬೀದಿ ನಾಯಿಗಳಿಗೆ ಪ್ರಾಯೋಗಿಕವಾಗಿ ನಡೆಸಿದ ಮೈಕ್ರೋ ಚಿಪ್ ಅಳವಡಿಕೆ ಯಶಸ್ವಿಯಾದ ನಗರದ ಎಲ್ಲಾ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆಗೆ ಟೆಂಡರ್ ಆಹ್ವಾನಿಸಿತ್ತು. ಎರಡು ಸಂಸ್ಥೆಗಳು ಭಾಗವಹಿಸಿದ್ದವು. ಅಂತಿಮವಾಗಿ 170 ರು.ಗೆ ಪ್ರತಿ ಮೈಕ್ರೋ ಚಿಪ್ ಪೂರೈಕೆಗೆ ಬಾಲಾಜಿ ಎಂಬ ಸಂಸ್ಥೆಯು ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿತ್ತು.ಆದರೆ, ಮೈಕ್ರೋ ಚಿಪ್ ಸಾಫ್ಟ್‌ವೇರ್ ಬಿಬಿಎಂಪಿಗೆ ಹಸ್ತಾಂತರ ಮಾಡುವಲ್ಲಿ ವಿಫಲವಾಗಿತ್ತು. ಜತೆಗೆ, ಗುತ್ತಿಗೆ ಸಂಸ್ಥೆಯ ಮೈಕ್ರೋ ಚಿಪ್ ಮತ್ತು ರೀಡರ್ ಯಂತ್ರದಲ್ಲಿಯೂ ಸಾಕಷ್ಟು ತಾಂತ್ರಿಕ ಸಮಸ್ಯೆ ಎದುರಾಗಿದ್ದವು. ಈ ಹಿನ್ನೆಲೆಯಲ್ಲಿ ಟೆಂಡರ್ ರದ್ದು ಪಡಿಸಿರುವ ಬಿಬಿಎಂಪಿಯು ಇದೀಗ ಹೊಸದಾಗಿ ಟೆಂಡರ್ ಆಹ್ವಾನಿಸುವುದಕ್ಕೆ ಮುಂದಾಗಿದೆ. ಹೀಗಾಗಿ, ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ವಿಳಂಬವಾಗಲಿದೆ.
ಮೈಕ್ರೋ ಚಿಪ್ ದುಬಾರಿನಗರದಲ್ಲಿ 2.79 ಲಕ್ಷ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಮೊದಲ ಹಂತದಲ್ಲಿ 50 ರಿಂದ 60 ಸಾವಿರ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆಗೆ ಮುಂದಾಗಿದೆ. ಕಳೆದ ವರ್ಷ ಬಿಬಿಎಂಪಿಯು ನಡೆಸಿದ ಟೆಂಡರ್‌ನಲ್ಲಿ ಭಾಗವಹಿಸಿದ ಎರಡು ಸಂಸ್ಥೆಗೆಳು ತಲಾ 170 ರು.ಗೆ ಮೈಕ್ರೋ ಚಿಪ್ ಪೂರೈಕೆ ಮಾಡುವುದಾಗಿ ಟೆಂಡರ್‌ನಲ್ಲಿ ತಿಳಿಸಿದ್ದವು. ಇದೀಗ ಟೆಂಡರ್ ರದ್ದಾಗಿರುವುದರಿಂದ ಹೊಸದಾಗಿ ಮೈಕ್ರೋ ಚಿಪ್ ದರಪಟ್ಟಿ ಪಡೆದಿರುವ ಬಿಬಿಎಂಪಿಗೆ ಖಾಸಗಿ ಸಂಸ್ಥೆಗಳು ಪ್ರತಿ ಮೈಕ್ರೋ ಚಿಪ್‌ಗೆ ಸುಮಾರು 250 ರು. ಮೊತ್ತಕ್ಕೆ ಪೂರೈಕೆ ಮಾಡುವುದಾಗಿ ತಿಳಿಸಿವೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಮೈಕ್ರೋ ಚಿಪ್ ದುಬಾರಿ ಆಗಿದೆ.
ಠೇವಣಿ ಇಲ್ಲದೇ ಟೆಂಡರ್ ಪಡೆದು ಇದೀಗ ಪರಾರಿಈ ಹಿಂದೆ ಗುತ್ತಿಗೆ ಪಡೆದ ಬಾಲಾಜಿ ಸಂಸ್ಥೆಯು ಟೆಂಡರ್‌ನಲ್ಲಿ ಭಾಗವಹಿಸುವಾಗ ಠೇವಣಿ ಪಾವತಿ ಮಾಡದೇ ‘ಎನ್‌ಎಸ್‌ಸಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿತ್ತು. ಇದೀಗ ಗುತ್ತಿಗೆ ಪೂರ್ಣಗೊಳಿಸದೇ ಪರಾರಿಯಾಗಿದೆ. ಹೀಗಾಗಿ, ಬಿಬಿಎಂಪಿಗೆ ಗುತ್ತಿಗೆ ಸಂಸ್ಥೆಯ ವಿರುದ್ಧ ಮುಂದಿನ ದಿನಗಳಲ್ಲಿ ಪಾಲಿಕೆಯ ಯಾವುದೇ ಗುತ್ತಿಗೆ ಪಡೆಯುವುದನ್ನು ನಿಷೇಧಿಸುವುದು ಹೊರತು ಪಡಿಸಿ ಬೇರೆ ಯಾವುದೇ ದಾರಿ ಇಲ್ಲ. ಆ ಪ್ರಕ್ರಿಯೆ ನಡೆಸಿರುವ ಬಿಬಿಎಂಪಿಗೆ ದುಬಾರಿ ಮೊತ್ತ ಪಾವತಿಸಿ ಚಿಪ್ ಖರೀದಿ ಮಾಡುವುದು ತಪ್ಪಿಲ್ಲ.ಚಿಪ್‌ನಲ್ಲಿ ಹಲವು ಮಾಹಿತಿ ಸಂಗ್ರಹ
ಮೈಕ್ರೋ ಚಿಪ್ ಅಕ್ಕಿಯ ಕಾಳಿನಷ್ಟು ಗಾತ್ರದಲ್ಲಿ ಇರಲಿದೆ. ಅದನ್ನು ನಾಯಿಯ ಭುಜದ ಭಾಗದ ಚರ್ಮದ ಒಳಗೆ ಇಂಜಕ್ಷನ್ ಮೂಲಕ ಅಳವಡಿಕೆ ಮಾಡಲಾಗುತ್ತದೆ. ಚಿಪ್ ಅಳವಡಿಕೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಈಗಾಗಲೇ ದೇಶದ ವಿವಿಧ ನಗರಗಳಾದ ಗೋವಾ, ರಾಜ್ ಕೋಟ್, ಅಹಮದಾಬಾದ್ ಸೇರಿದಂತೆ ಮೊದಲಾದ ಕಡೆ ಅಳವಡಿಕೆ ಮಾಡಲಾಗಿದೆ. ಚಿಪ್‌ನಲ್ಲಿ ಸಂತಾನಹರಣ ಚಿಕಿತ್ಸೆ, ಆ್ಯಂಟಿ ರೇಬಿಸ್ ಲಸಿಕೆ ನೀಡಿದ ವಿವರ ಸೇರಿದಂತೆ ನಾಯಿ ಗಂಡು ಅಥವಾ ಹೆಣ್ಣು, ನಾಯಿಯ ವಯಸ್ಸು, ನಾಯಿಯ ಫೋಟೋ ಸೇರಿದಂತೆ ಮೊದಲಾದ ಮಾಹಿತಿಯನ್ನು ದಾಖಲು ಮಾಡಲಾಗುತ್ತದೆ. ನಾಯಿಯನ್ನು ಹಿಡಿದು ಮೈಕ್ರೋ ಚಿಪ್ ಅನ್ನು ಮೊಬೈಲ್‌ನಲ್ಲಿ ಸ್ಕ್ಯಾನ್ ಮಾಡಿದರೆ, ಎಲ್ಲ ಮಾಹಿತಿ ಮೊಬೈಲ್‌ಗೆ ಲಭ್ಯವಾಗಲಿದೆ. ಇದರಿಂದ ಯಾವ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂಬುದನ್ನು ಸುಲಭವಾಗಿ ಪತ್ತೆ ಮಾಡಬಹುದು. ಆಗ ಲಸಿಕೆ ಮತ್ತು ಶಸ್ತ್ರ ಚಿಕಿತ್ಸೆ ಆಗುವ ವೆಚ್ಚ ಇಳಿಕೆಯಾಗಲಿದೆ ಎಂಬುದು ಪಾಲಿಕೆ ಅಧಿಕಾರಿಗಳ ಲೆಕ್ಕಾಚಾರವಾಗಿದೆ.ಕಳೆದ ವರ್ಷ ಗುತ್ತಿಗೆ ಪಡೆದ ಸಂಸ್ಥೆಯು ಮೈಕ್ರೋ ಚಿಪ್‌ಗೆ ಸಂಬಂಧಿಸಿದ ಸಾಫ್ಟ್‌ವೇರ್ ನೀಡುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಟೆಂಡರ್ ರದ್ದು ಪಡಿಸಲಾಗಿತ್ತು. ಇದೀಗ ಮಾರುಕಟ್ಟೆಯಿಂದ ಹೊಸ ದರ ಪಡೆದ ಟೆಂಡರ್ ಆಹ್ವಾನಿಸಲಾಗುತ್ತಿದೆ.
-ಸುರಳ್ಕರ್ ವಿಕಾಸ್ ಕಿಶೋರ್, ವಿಶೇಷ ಆಯುಕ್ತ, ಬಿಬಿಎಂಪಿ ಪಶುಪಾಲನೆ ವಿಭಾಗ