ಕನ್ನಡಪ್ರಭ ವಾರ್ತೆ ತುಮಕೂರು
ಹೆಚ್ಚಾಗಿರುವ ಪ್ಲಾಸ್ಟಿಕ್ ಬಳಕೆಯಿಂದಾಗಿ ತಾಯಿಯ ಎದೆ ಹಾಲಿನಲ್ಲೂ ಮೈಕ್ರೋಪ್ಲಾಸ್ಟಿಕ್ ಅಂಶ ಪತ್ತೆಯಾಗುತ್ತಿದೆ ಎಂದು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತೆ ಬಿ. ವಿ. ಅಶ್ವಿಜಾ ಆತಂಕ ವ್ಯಕ್ತಪಡಿಸಿದರು.ತುಮಕೂರು ವಿವಿಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ ಸ್ನಾತಕೋತ್ತರ ಪ.ಜಾತಿ, ಪ.ಪಂಗಡ ಪುರುಷ ವಿದ್ಯಾರ್ಥಿನಿಲಯದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಗಿನ್ನೆಸ್ ವರ್ಲ್ಡ್ ಕಾರ್ಡ್’ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ನದಿ, ಸಮುದ್ರಗಳಲ್ಲಿರುವ ಜಲಚರಗಳಲ್ಲೂ ಪ್ಲಾಸ್ಟಿಕ್‌ನಿಂದ ಬರುವ ಅಪಾಯಕಾರಿ ಅಂಶವಾದ ಮೈಕ್ರೋಪ್ಲಾಸ್ಟಿಕ್ ಪತ್ತೆಯಾಗಿದೆ. ಅದನ್ನು ಸೇವಿಸುವ ಮಂದಿ ಅನಾರೋಗ್ಯಕ್ಕೆ ತುತ್ತಾಗಬಹುದು. ಇದು ಮುಂದಿನ ಪೀಳಿಗೆಯವರಿಗೆ ಆನುವಂಶಿಕ ಅಸ್ವಸ್ಥತೆಯಾಗಿ ಬದಲಾಗುವ ಸಾಧ್ಯತೆ ಹೆಚ್ಚು ಎಂದು ಕಳವಳ ವ್ಯಕ್ತಪಡಿಸಿದರು.2022 ರಲ್ಲಿ ಕತಾರ್ ದೇಶದಲ್ಲಿ 14500 ಪ್ಲಾಸ್ಟಿಕ್ ಬಳಕೆ ಮಾಡಿ ಕತಾರ್ ಎನ್ನುವ ಇಂಗ್ಲಿಷ್ ಪದ ಕಲಾಕೃತಿ ನಿರ್ಮಿಸಿದ್ದು ಈವರೆಗಿನ ಗಿನ್ನಿಸ್ ದಾಖಲೆಯಾಗಿತ್ತು. ಆದರೆ ಈಗ ತುಮಕೂರು ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ತುಮಕೂರು ಆ ದಾಖಲೆಯನ್ನು ಅಳಿಸಿ, ಇದೇ ಜನವರಿ 28 ರಂದು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ 1.7 ಲಕ್ಷ ಪ್ಲಾಸ್ಟಿಕ್ ಬಾಟಲಿ ಬಳಸಿ ‘ತುಮಕೂರು’ ಪದದ ಕಲಾಕೃತಿ ನಿರ್ಮಿಸಿ ಹೊಸ ಗಿನ್ನೆಸ್ ದಾಖಲೆ ನಿರ್ಮಿಸಿದ್ದೇವೆ ಎಂದು ತಿಳಿಸಿದರು.
ಜನವರಿ ತಿಂಗಳ 20 ದಿನಗಳಲ್ಲಿ ಮಹಾನಗರ ಪಾಲಿಕೆಯು ಸಂಗ್ರಹಿಸಿದ ಪ್ಲಾಸ್ಟಿಕ್ ಬಾಟಲಿಯ ಸಂಖ್ಯೆ 2 ಲಕ್ಷ. ಇದರಲ್ಲಿ 30 ಸಾವಿರ ಬಾಟಲಿಗಳು ಮರುಬಳಸುವ, ನಿರ್ವಹಣೆಯ ಕಡೆಯ ಹಂತವನ್ನೂ ಮೀರಿದ್ದವು. ಹೆಚ್ಚುವರಿ 10 ಸಾವಿರ ಪ್ಲಾಸ್ಟಿಕ್ ಬಾಟಲಿಗಳನ್ನು ಮದುವೆ, ಸಭೆ-ಸಮಾರಂಭಗಳಲ್ಲಿ ಸಂಗ್ರಹಿಸಿ ತಂದು‘ತುಮಕೂರು’ ಪದದಕಲಾಕೃತಿ ನಿರ್ಮಿಸಿಲಾಯಿತು. ಇದನ್ನು ಇಂಗ್ಲೆಂಡ್‌ನ ಗಿನ್ನಿಸ್ ರೆಕಾರ್ಡ್ ತೀರ್ಪು ಸಮಿತಿ ಖುದ್ದು ಪರಿಶೀಲಿಸಿತು ಎಂದು ತಿಳಿಸಿದರು.ಮನೆಗಳಿಂದ ಸಂಗ್ರಹಿಸುವ ತ್ಯಾಜ್ಯವನ್ನು ಕಸದ ಗಾಡಿಯಲ್ಲಿ ಹಾಕುವ ಮುನ್ನವೇ ಒಣ ಕಸ, ಹಸಿ ಕಸವಾಗಿ ವಿಂಗಡಿಸಬೇಕು. ವಿಭಜಿಸಿ ಕೊಡದಿದ್ದಲ್ಲಿ ತ್ಯಾಜ್ಯವನ್ನು ನಿರ್ವಹಣೆ ಮಾಡವುದು ಅಸಾಧ್ಯವಾಗುತ್ತದೆ. ಇದರಿಂದ ಪರಿಸರ ನಾಶವಾಗುತ್ತದೆ. ಪ್ಲಾಸ್ಟಿಕ್ ಬಳಕೆ ಮನುಷ್ಯನ ಬದುಕನ್ನು ದುರ್ಬರ ಸ್ಥಿತಿಗೆ ಕೊಂಡೊಯ್ಯುವಲ್ಲಿ ಮುನ್ನುಗ್ಗುತ್ತಿದೆ ಎಂದರು.
ತುಮಕೂರು ಮಹಾನಗರ ಪಾಲಿಕೆಯೊಂದಿಗೆ ಒಪ್ಪಂದದಲ್ಲಿ ಪಠ್ಯೇತರ ವಿಷಯಗಳ ಕೋರ್ಸ್‌ಗಳನ್ನು ಆರಂಭಿಸಲು ಕುಲಪತಿ ಅವರಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.ಕುಲಪತಿ ಪ್ರೊ.ಎಂ. ವೆಂಟೇಶ್ವರಲು ಮಾತನಾಡಿ, ಪರಿಸರ ಮೇಲಿನ ಕಾಳಜಿ ಮಾನವನಿಗೆ ಇಲ್ಲ. ವರದಿಗಳ ಪ್ರಕಾರ ಒಬ್ಬ ಮನುಷ್ಯ ದಿನಕ್ಕೆ 750 ಗ್ರಾಮ್ ಪ್ಲಾಸ್ಟಿಕ್ ಅನ್ನು ಪರಿಸರಕ್ಕೆ ಸೇರಿಸುತ್ತಾನೆ. ಪರಿಸರ ನಮ್ಮನ್ನು ಸತ್ಕರಿಸುತ್ತದೆ. ಪರಿಸರ ನಾಶ ಮಾಡಲು ಹೊರಟಿರುವ ನಮಗೆ ಭವಿಷ್ಯವು ಕಷ್ಟವಾಗಲಿದೆ ಎಂದರು.
ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಮಾಡುವ ಕೆಲಸವನ್ನು ವಿಭಿನ್ನವಾಗಿ ನಿರ್ವಹಿಸಿದರೆ ಗಿನ್ನೆಸ್ ದಾಖಲೆ ನಿರ್ಮಿಸಬಹುದು ಎಂದರು.ವಿವಿಯ ವಿದ್ಯಾರ್ಥಿಕ್ಷೇಮಾಭಿವೃದ್ಧಿ ಘಟಕದ ನಿರ್ದೇಶಕ ಪ್ರೊ.ಜಿ. ಬಸವರಾಜ, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ವಿಜ್ಞಾನಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ.ಶೇಠ್, ಪ್ರಾಧ್ಯಾಪಕ ಪ್ರೊ. ಬಿ. ರಮೇಶ್, ನಿಲಯ ಪಾಲಕ ಡಾ.ಬಿ. ಕುಮಾರ್, ನೋಡಲ್ ಅಧಿಕಾರಿ ಡಾ.ಕೆ.ಎನ್. ಲಕ್ಷ್ಮೀರಂಗಯ್ಯ ಉಪಸ್ಥಿತರಿದ್ದರು.