ಬೇಡಿಕೆ ಈಡೇರಿಕೆಗಾಗಿ ಬಿಸಿಯೂಟ ನೌಕರರ ಪ್ರತಿಭಟನೆ

KannadaprabhaNewsNetwork | Published : Dec 17, 2024 12:46 AM

ಸಾರಾಂಶ

ದೇಶದ ಬಿಸಿಯೂಟ ಕಾರ್ಮಿಕರಿಗೆ ಕನಿಷ್ಠ ವೇತನ ನಿಗಧಿ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಸೋಮವಾರ ನಗರದಲ್ಲಿರುವ ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ೧೧.೨೦ ಲಕ್ಷಕ್ಕೂ ಹೆಚ್ಚು ಶಾಲೆಗಳಲ್ಲಿ ೧೧.೮೦ ಕೋಟಿ ಮಕ್ಕಳಿಗೆ ಈ ಬಿಸಿಯೂಟ ಸೇವೆ ನೀಡಲಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ದೇಶದ ಬಿಸಿಯೂಟ ಕಾರ್ಮಿಕರಿಗೆ ಕನಿಷ್ಠ ವೇತನ ನಿಗಧಿ ಮತ್ತು ಸಾಮಾಜಿಕ ಭದ್ರತೆ ಸೇರಿದಂತೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಸೋಮವಾರ ನಗರದಲ್ಲಿರುವ ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಇದೇ ವೇಳೆ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷೆ ಎಂ.ಬಿ. ಪುಷ್ಪ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ದೇಶದಲ್ಲಿ ಅಪೌಷ್ಟಿಕತೆ ವ್ಯಾಪಕವಾಗಿ ಹರಡಿದೆ. ಭಾರತದ ಅರ್ಧದಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆಯು ಮಗುವನ್ನು ಸಂಪೂರ್ಣವಾಗಿ ಕ್ರಿಯಾತ್ಮಕ ವಯಸ್ಕನಾಗಿ ಅಭಿವೃದ್ಧಿಪಡಿಸುವುದನ್ನು ತಡೆಯುತ್ತದೆ ಮತ್ತು ಇದು ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ನಮ್ಮ ರಾಷ್ಟ್ರದ ಭವಿಷ್ಯದ ಮೇಲೆ ಪರಿಣಾಮ ಬೀರುವ ದೊಡ್ಡ ಸವಾಲಾಗಿದೆ, ಇಂದು ಭಾರತದ ಜನಸಂಖ್ಯೆಯಲ್ಲಿ ಶೇಕಡ ೩೯ರಷ್ಟು ಮಕ್ಕಳಲ್ಲಿ ಹೊಂದಿದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಕಾರ್ಯಕ್ರಮವಾಗಿದ್ದು, ೧೧.೨೦ ಲಕ್ಷಕ್ಕೂ ಹೆಚ್ಚು ಶಾಲೆಗಳಲ್ಲಿ ೧೧.೮೦ ಕೋಟಿ ಮಕ್ಕಳಿಗೆ ಈ ಬಿಸಿಯೂಟ ಸೇವೆ ನೀಡಲಾಗುತ್ತಿದೆ ಎಂದರು.

ಶಾಲೆಗಳಲ್ಲಿ ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸಲು, ಹಸಿವನ್ನು ತಡೆಗಟ್ಟಲು, ಶಾಲಾ ಭಾಗವಹಿಸುವಿಕೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವಲ್ಲಿ ಮತ್ತು ಲಿಂಗ ಸಮಾನತೆಯನ್ನು ಹೆಚ್ಚಿಸುವಲ್ಲಿ ಒಆಒ ಯೋಜನೆಗಳು ಸಹಾಯ ಮಾಡಿದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಇತ್ತೀಚಿನ ಅಧ್ಯಯನವು ಗ್ರಾಮೀಣ ಕುಟುಂಬಗಳ ಕ್ಯಾಲರಿ ಸೇವನೆಯ ೧೫% ರಷ್ಟು ಈ ಯೋಜನೆಯಿಂದ ಬಂದಿದೆ ಎಂದು ತೋರಿಸಿದೆ. ೨೦೦೧ರಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರಾಥಮಿಕ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೆ ಬೇಯಿಸಿದ ಊಟವನ್ನು ನೀಡುವುದನ್ನು ಸರ್ಕಾರಕ್ಕೆ ಕಡ್ಡಾಯಗೊಳಿಸಿತು ಎಂದು ಹೇಳಿದರು. ಎಲ್ಲಾ ಸಾಧನೆಗಳು ತಳಮಟ್ಟದಲ್ಲಿ ಸುಮಾರು ೨೬ ಲಕ್ಷ ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರ (ಅಡುಗೆ ಸಹಾಯಕರು) ಶ್ರಮದಿಂದ ಮಾತ್ರ ಸಾಧ್ಯವಾಗಿದೆ. ಅವರಲ್ಲಿ ಶೇಕಡ ೯೮ ಮಹಿಳೆಯರು ಸಾಮಾಜಿಕವಾಗಿ ಹಿಂದುಳಿದ, ಅತಿ ಕಡುಬಡತನ ಕುಟುಂಬದ, ವಿಧವೆ, ವಿಚ್ಛೇದಿತ ಮಹಿಳೆಯರಾಗಿದ್ದಾರೆ. ಮತ್ತು ತಮ್ಮ ದಿನನಿತ್ಯದ ಬದುಕಿಗೆ ಕಷ್ಟ ಪಡುತ್ತಿದ್ದಾರೆ. ಬಡ, ರೈತ, ಕೃಷಿಕೂಲಿಕಾರರ, ಮಕ್ಕಳಿಗೆ ಬಿಸಿ ಆಹಾರ ಬೇಯಿಸಿ, ಹಾಲು ನೀಡಿ, ಶಾಲಾ ಸ್ವಚ್ಛತೆ ಮಾಡಿ, ಶಾಲೆಯಲ್ಲಿ ನೀಡುವ ಎಲ್ಲಾ ಕೆಲಸ ನಿರ್ವಹಿಸಿ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ತಾಯ್ತತನದ ಪರಿಶ್ರಮವಿದೆ. ದಿನಕ್ಕೆ ಸುಮಾರು ೬-೮ ಗಂಟೆಗಳ ಕಾಲ ಕೆಲಸ ಮಾಡುವ ಇವರನ್ನು ಕಾರ್ಮಿಕರೆಂದು ಗುರುತಿಸಲಾಗಿಲ್ಲ ಮತ್ತು ಕನಿಷ್ಠ ವೇತನವನ್ನು ಸಹ ನೀಡಲಾಗುವುದಿಲ್ಲ. ಅವರು ಯಾವುದೇ ಮೂಲಭೂತ ಸೌಲಭ್ಯವಾಗಲಿ, ಸಾಮಾಜಿಕ ಭದ್ರತೆ ಪ್ರಯೋಜನಗಳಾಗಲಿ ಪಡೆಯುತ್ತಿಲ್ಲ. ಮತ್ತು ವರ್ಷದಲ್ಲಿ ಕೇವಲ ಹತ್ತು ತಿಂಗಳು ಮಾತ್ರ ಕೆಲಸಕ್ಕೆ ಗೌರವಧನ ಪಡೆಯುತ್ತಿದ್ದಾರೆ. ೨೦೦೯ರಿಂದ ಬಿಸಿಯೂಟ ಕಾರ್ಮಿಕರಿಗೆ ತಿಂಗಳಿಗೆ ಕೇವಲ ೧೦೦೦ ರು. ವೇತನ ನೀಡುತ್ತಿರುವುದು ದೇಶದಲ್ಲಿ ನಾಚಿಕೆಗೇಡಿನ ಸಂಗತಿಯಾಗಿದೆ. ಈ ವೇತನ ಸಹ ಪ್ರತಿ ತಿಂಗಳು ನೀಡಲಾಗುವುದಿಲ್ಲ ಎಂದರು.

ಮೇ ೨೦೧೩ರಲ್ಲಿ ನಡೆದ ಭಾರತೀಯ ಕಾರ್ಮಿಕ ಸಮ್ಮೇಳನದ ೪೫ನೇ ಅಧಿವೇಶನವು, ಭಾರತ ಸರ್ಕಾರದ ಇತರ ಯೋಜನೆಗಳ ಕಾರ್ಮಿಕರೊಂದಿಗೆ ಮಧ್ಯಾಹ್ನದ ಬಿಸಿಯೂಟದ ಕೆಲಸಗಾರರನ್ನು ಕಾರ್ಮಿಕರೆಂದು ಗುರುತಿಸಲು, ಕನಿಷ್ಠ ವೇತನವನ್ನು ಪಾವತಿಸಲು ಮತ್ತು ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ನೀಡಲು ಶಿಫಾರಸು ಮಾಡಿದೆ. ೨೦೧೩-೧೪ನೇ ಹಣಕಾಸು ವರ್ಷದಲ್ಲಿಯೇ ಮಧ್ಯಾಹ್ನದ ಊಟದ ಕಾರ್ಮಿಕರ ಸಂಭಾವನೆಯನ್ನು ಹೆಚ್ಚಿಸಲಾಗುವುದು ಎಂದು ಸರ್ಕಾರದ ಪ್ರತಿನಿಧಿಯು ಐಎಲ್‌ಸಿಯಲ್ಲಿ ಭರವಸೆ ನೀಡಿದರು. ಆಗಿನ ಸಚಿವರು ಪದೇ ಪದೆ ಭರವಸೆ ನೀಡಿದರೂ ತಿಂಗಳಿಗೆ ೧೦೦೦ ರು.ಗಳ ಹೆಚ್ಚಳ ಪ್ರಸ್ತಾವನೆ ಇನ್ನೂ ಜಾರಿಯಾಗಿರುವುದಿಲ್ಲ್ಲಎಂದು ದೂರಿದರು.

ಮಧ್ಯಾಹ್ನದ ಊಟ ಯೋಜನೆಯನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರವು ಇತರ ಸಾಮಾಜಿಕ ಭದ್ರತಾ ಯೋಜನೆಗಳೊಂದಿಗೆ ಎಂಡಿಎಂಎಸ್‌ಗೆ ಬಜೆಟ್‌ನಲ್ಲಿ ಕಡಿತಗೊಳಿಸುತ್ತಿರುವುದು ಆಶ್ಚರ್ಯಕರವಾಗಿದೆ. ಈ ಯೋಜನೆಯನ್ನು ಅನೇಕ ರಾಜ್ಯಗಳಲ್ಲಿ ವೇದಾಂತದಂತಹ ಕಾರ್ಪೋರೇಟ್ ಸಂಸ್ಥೆಗಳಿಗೆ ಮತ್ತು ಇಸ್ಕಾನ್ ಅಕ್ಷಯಪಾತ್ರ ಮತ್ತು ನಾಂದಿ ಫೌಂಡೇಶನ್‌ನಂತಹ ಕಾರ್ಪೊರೇಟ್ ಎನ್‌ಜಿಒಗಳಿಗೆ ಹಸ್ತಾಂತರಿಸುವ ಮೂಲಕ ಖಾಸಗೀಕರಣಗೊಳಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದ ಬಿಸಿಯೂಟ ಕಾರ್ಮಿಕರು ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗಾಗಿ ಮತ್ತು ಎಂಡಿಎಂಎಸ್ ಯೋಜನೆಯನ್ನು ಬಲಪಡಿಸಲು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಆದರೆ ಸರ್ಕಾರವು ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ. ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರ ವೇತನ ಹೆಚ್ಚಳ ಅನುಷ್ಠಾನವನ್ನು ಜಾರಿಗೊಳಿಸಲು ಮತ್ತು ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರ ಕುಂದುಕೊರತೆಗಳನ್ನು ಪರಿಹರಿಸಲು ನೀವು ವೈಯಕ್ತಿಕವಾಗಿ ಮಧ್ಯಪ್ರವೇಶಿಸಬೇಕೆಂದು ಎಂದು ಹೇಳಿದರು. ಪ್ರತಿಭಟನೆಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಅರವಿಂದ್, ಇತರರು ಇದ್ದರು.

Share this article