ಭೀಮಶಿ ಭರಮಣ್ಣವರ
ಕನ್ನಡಪ್ರಭ ವಾರ್ತೆ ಗೋಕಾಕಗೋಕಾಕ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯ ಅವ್ಯವಸ್ಥೆಯ ಆಗರವಾಗಿದ್ದು, ವಾಹನ ಚಾಲನಾ ಪರವಾನಗಿ ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು ಮಧ್ಯವರ್ತಿಗಳ ಹಾವಳಿಯಿಂದ ನಲುಗಿ ಹೋಗಿದ್ದಾರೆ.
ನಗರದ ಹೊರವಲಯದಲ್ಲಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ನಿತ್ಯ ನೂರಾರು ಜನ ತಮ್ಮ ವಾಹನ ನೋಂದಣಿ, ಚಾಲನಾ ಪರವಾನಗಿ ಪತ್ರದ ನವೀಕರಣ ಸೇರಿದಂತೆ ಇನ್ನಿತರೆ ಕೆಲಸಕ್ಕೆ ಬರುವ ಸಾರ್ವಜನಿಕರಿಗೆ ಮಧ್ಯವರ್ತಿಗಳಿಲ್ಲದೇ ಯಾವುದೇ ಕೆಲಸವಾಗದಂತಾಗಿದೆ. ಪ್ರತಿಯೊಂದಕ್ಕೂ ಮಧ್ಯವರ್ತಿಗಳ ಮೂಲಕವೇ ಸಾರ್ವಜನಿಕರು ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕಾದ ದುಸ್ಥಿತಿ ಎದುರಾಗಿದೆ.ಮಧ್ಯವರ್ತಿಗಳು ಅನಿವಾರ್ಯ:
ಕೇಂದ್ರ ಸರಕಾರ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆನ್‌ಲೈನ್ ಮೂಲಕ ವಾಹನ ಚಾಲನಾ ಪರವಾನಗಿ ಇನ್ನಿತರೆ ಸೇವೆಗಳನ್ನು ಕಲ್ಪಿಸಿದ್ದು, ಗೋಕಾಕ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೂ ಮಧ್ಯವರ್ತಿಗಳ ಮೂಲಕವೇ ತಮ್ಮ ಕೆಲಸ ಮಾಡಿಕೊಳ್ಳಬೇಕಾಗಿದೆ. ನೇರವಾಗಿ ಮಧ್ಯವರ್ತಿಗಳನ್ನು ಭೇಟಿ ಮಾಡಿದ್ದಲ್ಲಿ ಮಧ್ಯವರ್ತಿಗಳು ನಿಗದಿಪಡಿಸಿದ ಹಣವನ್ನು ನೀಡಿ ಸೇವೆ ಪಡೆಯಬಹುದು. ಆನ್‌ಲೈನ್ ಹಾಕಿ ನೇರವಾಗಿ ಸೇವೆ ಪಡೆಯಲು ಬರುವವರ ಕೆಲಸವು ಸಾಧ್ಯವಾಗದೇ ಮತ್ತೆ ಮಧ್ಯವರ್ತಿಗಳ ಬಳಿ ಹೋದಲ್ಲಿ ಹೆಚ್ಚಿನ ಹಣ ನೀಡಿ ಸೇವೆ ಪಡೆಯುವುದು ಅನಿವಾರ್ಯವಾಗಿದೆ.ಮಧ್ಯವರ್ತಿಗಳೇ ಸುಪ್ರೀಂ:
ಮಧ್ಯವರ್ತಿಗಳು ತಾವು ಒಂದು ಗುಂಪು ಮಾಡಿಕೊಂಡಿದ್ದು ಅಧಿಕಾರಿಗಳಿಂದ ಹಿಡಿದು ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಇಲ್ಲಿ ಸರ್ಕಾರದ ಭಾಗವಾಗಿ ಸೇವೆ ಸಲ್ಲಿಸುವವರಿಗಿಂತ ಮಧ್ಯವರ್ತಿಗಳು ಸುಪ್ರೀಂ ಎಂಬಂತಾಗಿದೆ. ಕೆಲವರು ನೇರವಾಗಿ ಸಾರ್ವಜನಿಕರ ಸಣ್ಣ ಪುಟ್ಟ ಕೆಲಸ ಮಾಡಲು ಮುಂದಾದಲ್ಲಿ ಅವರನ್ನು ಮಧ್ಯವರ್ತಿಗಳ ಗುಂಪು ಸಂಜೆ ಸಭೆ ಸೇರಿ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಅಧಿಕಾರಿಗಳೇ ಸುಮ್ಮನಿರುವಾಗ ನಾವ್ಯಾಕೇ ಎಂದು ಸಿಬ್ಬಂದಿ ಸುಮ್ಮನಾಗಿ ಮಧ್ಯವರ್ತಿಗಳಿಂದ ಬನ್ನಿ ಎನ್ನುತ್ತಿರುವುದಾಗಿ ಚಾಲನಾ ಪರವಾನಗಿ ಪಡೆಯಲು ಬರುವ ಗ್ರಾಮೀಣ ಭಾಗದ ಯುವಕರ ಅಳಲಾಗಿದೆ.ಗೂಡಂಗಡಿಗಳಂತಿರುವ ಮಧ್ಯವರ್ತಿಗಳ ಅಂಗಡಿಗಳು:
ಇಲ್ಲಿಯ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಎದುರು ಹಾಗೂ ಮೈದಾನ ಪಕ್ಕದಲ್ಲಿ ಮಧ್ಯವರ್ತಿಗಳು (ಆರ್‌ಟಿಒ ಏಜೆಂಟ್) ತಮ್ಮ ಕಚೇರಿಗಳನ್ನು ತೆರೆದಿದ್ದು ಸುಮಾರು 50ಕ್ಕೂ ಹೆಚ್ಚು ಜನ ಮಧ್ಯವರ್ತಿಗಳಿದ್ದು, ಅವರಲ್ಲಿ 30ಕ್ಕೂ ಅಧಿಕ ಕಚೇರಿಗಳನ್ನು ತೆರೆದುಕೊಂಡಿದ್ದಾರೆ. ಸಾರ್ವಜನಿಕರು ದೇವರ ದರ್ಶನಕ್ಕೂ ಮೊದಲು ಪೂಜಾರಿಯ ಕಚೇರಿಗೆ ಹೋಗುವಂತಾಗಿದೆ. ದಿನ ನಿತ್ಯ ನೂರಾರು ಜನ ಬರುವ ಈ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿರುವ ಬಗ್ಗೆ ಎಲ್ಲ ಸಂಘ-ಸಂಸ್ಥೆಗಳು, ಪ್ರಜ್ಞಾವಂತ ನಾಗರಿಕರು ಮೇಲಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಇತ್ತ ಗಮನಹರಿಸಿ ಇಲ್ಲಿಯ ಅಧಿಕಾರಿಗಳ ಮೇಲೆ ಹಾಗೂ ಮಧ್ಯವರ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಿದೆ.---
ಬಾಕ್ಸ್ಮಧ್ಯವರ್ತಿಗಳ ಮೂಲಕ ಬಂದರೆ ಪಾಸ್!
ಎಆರ್‌ಟಿಒ ಕಾರ್ಯಾಲಯದ ಆವರಣದಲ್ಲಿರುವ ವಾಹನ ಚಾಲನಾ ಪರವಾನಗಿ ಪರೀಕ್ಷೆಯ ಮೈದಾನದ ಸ್ಥಿತಿಯಂತು ಹೇಳತಿರದು. ಇಲ್ಲಿ ದಿನ ನಿತ್ಯ ನೂರಕ್ಕೂ ಹೆಚ್ಚು ದ್ವಿಚಕ್ರ, ನಾಲ್ಕು ಚಕ್ರ ಸೇರಿದಂತೆ ಬೃಹತ್ ವಾಹನಗಳ ಪರವಾನಗಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ನಾಲ್ಕುಚಕ್ರ ಸೇರಿದಂತೆ ಬೃಹತ್ ವಾಹನಗಳನ್ನು ಮುಂದೆ ಡ್ರೈವ್ ಮಾಡಿ ಹಿಂದೆ ಪಡೆಯಬಹುದು. ಆದರೆ ದ್ವಿಚಕ್ರ ವಾಹನ ಪರವಾನಗಿ ಬರುವ ಜನರು ಈ ಮೈದಾನದಲ್ಲಿ ವಾಹನ ಓಡಿಸುವುದು ಎಂದು ದೊಡ್ಡ ಸಾವಾಲಾಗಿದೆ. ಏಕೆಂದರೆ ಈ ಮೈದಾನ ತುಂಬೆಲ್ಲಾ ತೆಗ್ಗು ಗುಂಡಿಗಳು ಬಿದ್ದಿದ್ದು, ಸಮನಾದ ನೆಲ ಇಲ್ಲ. ಇದರಿಂದಾಗಿ ದ್ವಿಚಕ್ರ ವಾಹನ ಸವಾರಿ ಮಾಡುವಾಗ ಕಾಲು ನೆಲಕ್ಕೆ ಹತ್ತುವುದಂತು ಖಚಿತ. ಮಧ್ಯವರ್ತಿಗಳ ಮೂಲಕ ಬಂದಿದ್ದರೆ ಆರ್‌ಟಿಒ ಆ ಮೇಲೆ ಸಹಿ ಹಾಕಿ ಪಾಸ್ ಮಾಡುತ್ತಾರೆ. ಮಧ್ಯವರ್ತಿಗಳಿಲ್ಲದೇ ನೇರವಾಗಿ ಬರುವ ಸಾರ್ವಜನಿಕರಿಗೆ ಅಲ್ಲೇ ಸಹಿ ಹಾಕುವ ಅಧಿಕಾರಿ ಫೇಲ್ ಮಾಡಿ ಬಿಡುತ್ತಾರೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.--
ಕೋಟ್ಮಧ್ಯವರ್ತಿಗಳ ಹಾವಳಿ ನನ್ನ ಗಮನಕ್ಕಿಲ್ಲ. ವಾಹನ ಚಾಲನೆ ಪರೀಕ್ಷೆ ನಡೆದಲು ಇನ್ನೊರ್ವ ಆರ್.ಟಿ.ಒ ಇದ್ದಾರೆ. ವಾಹನ ಪರೀಕ್ಷೆ ನಡೆಸುವ ಮೈದಾನದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮವಹಿಸಲಾಗುವುದು.-ರವಿ ಭೀಸೆ, ಆರ್.ಟಿ.ಒ ಗೋಕಾಕ
---ಆರ್‌ಟಿಒ ಕಚೇರಿಯಲ್ಲಿ ಹಣ ಇದ್ದರೇ ಮಾತ್ರ ಕೆಲಸ. ಏಜೆಂಟರ್ ಹಾವಳಿ ಮಾತ್ರ ಹೆಚ್ಚಾಗಿದ್ದು ಸಾರ್ವಜನಿಕರು ನೇರವಾಗಿ ಕೆಲಸ ಮಾಡಿಕೊಳ್ಳಲು ಆಗುವುದಿಲ್ಲ. ಮಾತು ಎತ್ತಿದರೇ ಏಜೆಂಟರು ಮೂರು ಸಾವಿರ ಕೊಡು, ನಾಲ್ಕು ಸಾವಿರ ಕೊಡು ಎಂದು ಸಾರ್ವಜನಿಕರನ್ನು ಪೀಡಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮವಾಗಬೇಕಿದೆ.
-ಐ.ಎಂ.ಬೇಟಗೇರಿ, ಗೋಕಾಕ ನಿವಾಸಿ.