ಕಳಪೆ ಗುಣಮಟ್ಟದ ಔಷಧ ಬಳಕೆಯಿಂದಾಗಿಯೇ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದ್ದು, ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು. ಮೃತ ಬಾಣಂತಿಯರ ಕುಟುಂಬಕ್ಕೆ ಸರ್ಕಾರ ₹25 ಲಕ್ಷ ಪರಿಹಾರ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಬಳ್ಳಾರಿ: ಕಳಪೆ ಗುಣಮಟ್ಟದ ಔಷಧ ಬಳಕೆಯಿಂದಾಗಿಯೇ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದ್ದು, ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು. ಮೃತ ಬಾಣಂತಿಯರ ಕುಟುಂಬಕ್ಕೆ ಸರ್ಕಾರ ₹25 ಲಕ್ಷ ಪರಿಹಾರ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ನಗರದ ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್‌ಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರ ಪೂರೈಸುತ್ತಿರುವ ಔಷಧಗಳು ಬಳಕೆಗೆ ಅರ್ಹವಿಲ್ಲ. ಔಷಧಿಯಲ್ಲಿ ಗುಣಮಟ್ಟವಿಲ್ಲ ಎಂದು ಆರು ತಿಂಗಳ ಹಿಂದೆಯೇ ಡ್ರಗ್ ಕಂಟ್ರೋಲರ್ ಸರ್ಕಾರಕ್ಕೆ ವಿನಂತಿ ಮಾಡಿದ್ದಾರೆ. 97 ಬ್ಯಾಚ್‌ಗಳಲ್ಲಿ 23 ಬ್ಯಾಚ್ ಕಳಪೆಯಿಂದ ಕೂಡಿವೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ವರದಿ ನೀಡಿದ ಬಳಿಕವೂ ಕಳಪೆ ಗುಣಮಟ್ಟದ ಔಷಧಿಯನ್ನು ಖರೀದಿಸಿದ್ದು ಏಕೆ? ಈ ವೈದ್ಯಕೀಯ ಮಾಫಿಯಾ ಹಿಂದೆ ಯಾರು ಕೆಲಸ ಮಾಡುತ್ತಿದ್ದಾರೆ? ಆ ಕಾಣದ ಕೈಗಳು ಯಾವವು ಎಂದು ಆರ್. ಅಶೋಕ್ ಪ್ರಶ್ನಿಸಿದರಲ್ಲದೆ, ಕೂಡಲೇ ಈ ಕೃತ್ಯಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಬೇಕು. ಲೋಕಾಯುಕ್ತ ತನಿಖೆಗೆ ಪ್ರಕರಣ ನೀಡಬೇಕು ಎಂದು ಒತ್ತಾಯಿಸಿದರು.ಮಹಿಳೆಯರು-ಶಿಶುಗಳ ಸಾವು ಪ್ರಕರಣ ಹೆಚ್ಚಳ:
ರೈತರು, ನಿಷ್ಠಾವಂತ ಅಧಿಕಾರಿಗಳಿಗೆ ಸಾವಿನ ಭಾಗ್ಯ ಕರುಣಿಸಿರುವ ರಾಜ್ಯ ಸರ್ಕಾರ, ನವಜಾತ ಶಿಶುಗಳಿಗೆ ಮತ್ತು ಬಾಣಂತಿಯರಿಗೆ ಸಾವಿನ ಭಾಗ್ಯ ನೀಡಿದೆ. ಯಾವ ಪುರುಷಾರ್ಥಕ್ಕಾಗಿ ಹಾಸನದಲ್ಲಿ ಸಮಾವೇಶ ಮಾಡಲು ಹೊರಟಿದೆ ಎಂದು ಪ್ರಶ್ನಿಸಿದರು.
ಬಳ್ಳಾರಿ ಬಾಣಂತಿಯರ ಸರಣಿ ಸಾವಿನ ಕಂಡು ರಾಜ್ಯದ ಜನರು ಬೆಚ್ಚಿ ಬಿದ್ದಿದ್ದಾರೆ. ರಾಜ್ಯದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ 111 ನವಜಾತ ಶಿಶುಗಳು ಅಸು ನೀಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಸರ್ಕಾರ ಆರೋಗ್ಯ ವಲಯವನ್ನು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ರಾಜ್ಯದ ನಾನಾ ಕಡೆ ಮಕ್ಕಳು ಹಾಗೂ ಬಾಣಂತಿಯರ ಸಾವು ಪ್ರಕರಣಗಳು ಘಟಿಸುತ್ತಿವೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ಸಾವಿನ ಪ್ರಕರಣಗಳ ದಿನದಿನಕ್ಕೆ ಹೆಚ್ಚುತ್ತಿವೆ ಎಂದು ದೂರಿದರು.ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ. ಯಾರೊಬ್ಬರೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿಲ್ಲ. ಮಂತ್ರಿಗಳು ರಾಜೀನಾಮೆ ಕೊಡಬೇಕು. ರಾಜ್ಯದ ಎಲ್ಲ ಆಸ್ಪತ್ರೆಗಳಿಗೆ ಗುಣಮಟ್ಟದ ಆಸ್ಪತ್ರೆಗಳು ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಗಾಲಿ ಜನಾರ್ದನ ರೆಡ್ಡಿ, ಸಂಡೂರು ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಂಗಾರು ಹನುಮಂತು, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲಕುಮಾರ್ ಮೋಕಾ, ಮುಖಂಡರಾದ ದಮ್ಮೂರು ಶೇಖರ್, ಡಾ. ಮಹಿಪಾಲ್ ಇದ್ದರು.ಬಳ್ಳಾರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಬಳ್ಳಾರಿಯ ಬಾಣಂತಿಯರ ಸಾವು ಪ್ರಕರಣ ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.