ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ತಾಲೂಕು ಕಚೇರಿ ಪಕ್ಕದ ಜವರೇಗೌಡ ಕಾಂಪ್ಲೆಕ್ಸ್ ನಲ್ಲಿರುವ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಗಜೇಂದ್ರ ಅಲಿಯಾಸ್ ಕುಮಾರ್ ತಾಲೂಕಿನ 28 ಗ್ರಾಹಕರ ಸಾಲದ ಹಣ ಮತ್ತು ಸಾಲ ಮರುಪಾವತಿ ಹಣವನ್ನು ದುರ್ಬಳಕೆ ಮಾಡಿಕೊಂಡು ಪರಾರಿಯಾಗಿದ್ದಾರೆ.
ಈ ಹಗರಣ ಸಂಬಂಧ ಸೂರ್ಯ ಫೈನಾನ್ಸ್ ಕಂಪನಿ ಈಗಿನ ಶಾಖಾ ವ್ಯವಸ್ಥಾಪಕ ಪಿ.ಎಂ.ಪವನ್ ಕುಮಾರ್ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿ ಗಜೇಂದ್ರ ಅಲಿಯಾಸ್ ಕುಮಾರ್ ವಿರುದ್ಧ ಐಪಿಸಿ 420ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡ ನಂತರ ತಲೆಮರಸಿಕೊಂಡಿರುವ ಗಜೇಂದ್ರನ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಬನ್ನಿ ಸಾರಿಗೆ ಗ್ರಾಮದ ನಿವಾಸಿ ಗಜೇಂದ್ರ ಟಿ.ನರಸೀಪುರದ ಬೆನಕನಹಳ್ಳಿ ಸೂರ್ಯೋದಯ ಫೈನಾನ್ಸ್ ಕಂಪನಿಯಲಿ ಕೆಲಸ ಮಾಡಿದ್ದು, ನಂತರ ನಂಜನಗೂಡು ಶಾಖೆಯಲ್ಲಿ ಆಡಿಟ್ ಆಫೀಸರ್ ಆಗಿ ಬಡ್ತಿ ಪಡೆದಿದ್ದರು.
ಈ ಬಗ್ಗೆ ಕಂಪನಿಯಿಂದ ಸಾಲ ಪಡೆದಿದ್ದ ಹಾಗೂ ಮರು ಪಾವತಿ ಮಾಡಿದ್ದ ಗ್ರಾಹಕರು ಪ್ರಶ್ನೆ ಮಾಡಿದಾಗ ತಾಂತ್ರಿಕ ದೋಷದಿಂದ ಹಣ ನಿಮ್ಮ ಖಾತೆಗೆ ವರ್ಗಾವಣೆಯಾಗಿಲ್ಲ. ಮುಂದಿನ 10 ದಿನಗಳಲ್ಲಿ ಹಣ ವರ್ಗಾವಣೆ ಯಾಗುತ್ತದೆ ಎಂದು ಸಬೂಬು ಹೇಳಿ ಎಲ್ಲ 28 ಗ್ರಾಹಕರ 14 ಲಕ್ಷದ 76, ಸಾವಿರದ 788 ರು. ಅನ್ನು ಗಜೇಂದ್ರ ದುರುಪಯೋಗ ಪಡಿಸಿಕೊಂಡು ಪರಾರಿಯಾಗಿದ್ದಾರೆ.
ಪೊಲೀಸರು ಸೂರ್ಯೋದಯ ಸ್ಮಾಲ್ ಫೈನಾನ್ಸ್ ನಲ್ಲಿನ ಹಗರಣದ ಸಂಪೂರ್ಣ ದಾಖಲೆ ಮತ್ತು ಆರೋಪಿ ಗಜೇಂದ್ರ ಭಾವಚಿತ್ರವನ್ನು ನೀಡುವಂತೆ ಫೈನಾನ್ಸ್ ಕಂಪನಿ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದಾರೆ.