ಗಣಿ ಸ್ಫೋಟ: ತಾಂತ್ರಿಕ ಸಲಹೆಗಾರ ಶಿವಪ್ರಸಾದ್‌ ಹೇಳಿಕೆಗೆ ರೈತರ ಆಕ್ರೋಶ

KannadaprabhaNewsNetwork | Published : Jul 7, 2024 1:29 AM

ಸಾರಾಂಶ

2011ರಲ್ಲಿ ಕೆಆರ್‌ಎಸ್‌ ಅಣೆಕಟ್ಟು ಬಳಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತೆರೆಯಲಾಗಿದೆ. ಅದು ಭೂಮಿಯೊಳಗೆ ಸಂಭವಿಸುವ ಕಂಪನವನ್ನು ದಾಖಲು ಮಾಡುತ್ತದೆ. 2018ರಲ್ಲಿ ಕೆಆರ್‌ಎಸ್ ಅಣೆಕಟ್ಟು ವ್ಯಾಪ್ತಿಯಲ್ಲಿ ಭಾರೀ ಶಬ್ಧ ಕೇಳಿ ಬಂದಿತ್ತು. ಅದು 10.5 ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಕಂಪನದ ಅಲೆ ಬಂದಿತ್ತು ಎಂದು ಗೊತ್ತಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಟ್ರಯಲ್‌ ಬ್ಲಾಸ್ಟ್‌ ಸಂಬಂಧ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ನೀರಾವರಿ ನಿಗಮದ ತಾಂತ್ರಿಕ ಸಲಹೆಗಾರ ಶಿವಪ್ರಸಾದ್ ಹೇಳಿಕೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

2011ರಲ್ಲಿ ಕೆಆರ್‌ಎಸ್‌ ಅಣೆಕಟ್ಟು ಬಳಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತೆರೆಯಲಾಗಿದೆ. ಅದು ಭೂಮಿಯೊಳಗೆ ಸಂಭವಿಸುವ ಕಂಪನವನ್ನು ದಾಖಲು ಮಾಡುತ್ತದೆ. 2018ರಲ್ಲಿ ಕೆಆರ್‌ಎಸ್ ಅಣೆಕಟ್ಟು ವ್ಯಾಪ್ತಿಯಲ್ಲಿ ಭಾರೀ ಶಬ್ಧ ಕೇಳಿ ಬಂದಿತ್ತು. ಅದು 10.5 ಕಿ.ಮೀ. ವ್ಯಾಪ್ತಿಯಲ್ಲಿ ಒಂದು ಕಂಪನದ ಅಲೆ ಬಂದಿತ್ತು ಎಂದು ಗೊತ್ತಾಗಿದೆ. ಆದರೆ ಇದು ಗಣಿ ಸ್ಫೋಟದಿಂದ ಉಂಟಾಗಿರುವುದಾಗಿ ತಿಳಿದು ಬಂದಿಲ್ಲ. ಏರ್ ಬ್ಲಾಸ್ಟ್‌ನಿಂದ ಈ ರೀತಿ ಕಂಪನದ ಅಲೆ ಬಂದಿರಬಹುದು ಎಂದು ವರದಿಯನ್ನು ಮರೆಮಾಚುವ ಪ್ರಯತ್ನ ನಡೆಸಿದರು.

ಅಧಿಕಾರಿ ಶಿವಪ್ರಸಾದ್‌ ಹೇಳಿದ ಮಾತಿನಿಂದ ಆಕ್ರೋಶಗೊಂಡ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಈ ಅಧಿಕಾರಿ ಸುಳ್ಳು ಹೇಳುತ್ತಿದ್ದಾರೆ. ಕೇಂದ್ರದ ವರದಿಯಲ್ಲಿ ಸ್ಫೋಟ ಸಂಭವಿಸಿದ ಸ್ಥಳ, 6 ಸೆಕೆಂಡ್‌ ಅಂತರದಲ್ಲಿ ಎರಡುಬಾರಿ ಸ್ಫೋಟ ಸಂಭವಿಸಿರುವುದು, ಕಂಪನದ ಅಲೆ ಹಾದುಹೋಗಿರುವುದನ್ನು ನಿಖರವಾಗಿ ಚಿತ್ರ ಸಹಿತ ಗುರುತಿಸಿ ವರದಿ ನೀಡಿದ್ದರೂ ಮರೆಮಾಚುತ್ತಿದ್ದಾರೆ. ಪರೋಕ್ಷವಾಗಿ ಟ್ರಯಲ್ ಬ್ಲಾಸ್ಟ್ ಗೆ ಬೆಂಬಲ ನೀಡುತ್ತಿದ್ದಾರೆಂದು ಕಿಡಿಕಾರಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಚಲುವರಾಯಸ್ವಾಮಿ ಅವರು ರೈತರನ್ನ ಸಮಾಧಾನಪಡಿಸಿದರು. ಟ್ರಯಲ್ ಬ್ಲಾಸ್ಟ್ ಮಾಡೋಕೆ ಅವರಿಗೆ ಅಧಿಕಾರವಿಲ್ಲ ಎಂದು ಸಮಜಾಯಿಷಿ ನೀಡಿದರು.ಜು.15ರವರೆಗೆ ಟ್ರಯಲ್‌ ಬ್ಲಾಸ್ಟ್‌ ಇಲ್ಲ: ಎನ್‌.ಚಲುವರಾಯಸ್ವಾಮಿ

ಟ್ರಯಲ್‌ ಬ್ಲಾಸ್ಟ್‌ ಪ್ರಕರಣದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಜು.15ರವರೆಗೆ ಮುಂದೂಡಿದೆ. ಆ ವೇಳೆಗೆ ಒಂದು ತೀರ್ಮಾನ ಕೈಗೊಳ್ಳುತ್ತೇವೆ. ನ್ಯಾಯಾಲಯಕ್ಕೆ ಸರ್ಕಾರದಿಂದ ಮೇಲ್ಮನವಿ ಸಲ್ಲಿಸುತ್ತೇವೆ. ಜು.15ರವರೆಗೆ ಯಾವುದೇ ಟ್ರಯಲ್ ಬ್ಲಾಸ್ಟ್ ಮಾಡುವುದಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಟ್ರಯಲ್ ಬ್ಲಾಸ್ಟ್ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜು.15ರೊಳಗೆ ಕೋರ್ಟ್‌ಗೆ ಸಮಗ್ರ ಮಾಹಿತಿ ಕೊಡಲಿದ್ದೇವೆ. ಗೊಂದಲ ಬಗೆಹರಿಯದಿದ್ದರೆ ಸಮಯಾವಕಾಶ ಕೇಳಲಿದ್ದೇವೆ. ಟ್ರಯಲ್ ಬ್ಲಾಸ್ಟ್‌ಗೆ ಕೋರ್ಟ್ 4 ತಿಂಗಳ ಕಾಲ ಸಮಯ ನಿಗದಿ ಮಾಡಿದೆ. ಗಣಿಗಾರಿಕೆ ಬಗ್ಗೆ ಯಾವುದೇ ನಿರ್ಧಾರ ಮಾಡಿದರೂ ಟ್ರಯಲ್ ಬ್ಲಾಸ್ಟ್ ನಡೆಸಿ ನಿರ್ಧಾರ ಮಾಡಲು ಕೋರ್ಟ್ ಸೂಚನೆ ನೀಡಿದೆ. ತಾಂತ್ರಿಕ ಸಮಿತಿ ಅಭಿಪ್ರಾಯ ಬೇರೆ, ಕೋರ್ಟ್ ತೀರ್ಮಾನ ಬೇರೆ. ಜು.15ರೊಳಗೆ ಎಲ್ಲಾ ಸಿದ್ಧತೆ ಮಾಡಿಕೊಂಡು ಕೋರ್ಟ್ ಮುಂದೆ ಹೋಗುತ್ತೇವೆ ಎಂದು ನುಡಿದರು.

Share this article