18 ತಾಲೂಕುಗಳಲ್ಲಿ ಮಿನಿ ವಿಧಾನಸೌಧ: ಅಜಯ್‌ಸಿಂಗ್‌

KannadaprabhaNewsNetwork | Published : Jul 3, 2024 12:16 AM

ಸಾರಾಂಶ

ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಕೆಆರ್‌ಡಿಬಿ ಕಂದಾಯ, ಆರ್‌ಡಿಪಿಆರ್‌, ಆರೋಗ್ಯ, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಹಿಂದುಳಿದ ನೆಲದಲ್ಲಿ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಮಂಡಳಿಯ ಅಧ್ಯಕ್ಷ, ಜೇವರ್ಗಿ ಶಾಸಕ ಡಾ. ಅಜಯ್‌ಸಿಂಗ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಕೆಆರ್‌ಡಿಬಿ ಕಂದಾಯ, ಆರ್‌ಡಿಪಿಆರ್‌, ಆರೋಗ್ಯ, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಹಿಂದುಳಿದ ನೆಲದಲ್ಲಿ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಮಂಡಳಿಯ ಅಧ್ಯಕ್ಷ, ಜೇವರ್ಗಿ ಶಾಸಕ ಡಾ. ಅಜಯ್‌ಸಿಂಗ್‌ ಹೇಳಿದ್ದಾರೆ.

ಕಲಬುರಗಿಯಲ್ಲಿರುವ ಅಭಿವೃದ್ಧಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಜೊತೆ ಕೈ ಜೋಡಿಸಿ ತಾಲೂಕು ಕಚೇರಿ ಯೋಜನೆ ರೂಪಿಸಲಾಗಿದೆ. ಆರ್‌ಡಿಪಿಆರ್‌ ಜೊತೆ ಒಂದಾಗಿ ಕಲ್ಯಾಣ ಪ್ರಗತಿ ಪಥ ಹೆಸರಲ್ಲಿ ರಸ್ತೆಗಳಿಗೆ ಕಾಯಕಲ್ಪಕ್ಕೆ ಮುಂದಾಗಿದ್ದೇವೆ. ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೆಕೆಆರ್‌ಡಿಬಿ ಹಾರ್ಟ್‌ ಲೈನ್‌, ಮಹಿಳೆಯರು, ಮಕ್ಕಳ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ, ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಅಕ್ಷರ ಅವಿಷ್ಕಾರ ಯೋಜನೆ ರೂಪಿಸಿ ಶಾಲೆಗಳಿಗೆ ಹೊಸರೂಪ, ಫಲಿತಾಂಶ ಸುಧಾರಣೆ, ಶಿಕ್ಷಣ ಗುಣಮಟ್ಟದಲ್ಲಿ ಅಮೂಲಾಗ್ರ ಬದಲಾವಣೆಗೆ ಒತ್ತು ಕೊಡಲಾಗುತ್ತಿದೆ ಎಂದರು.

18 ಕಡೆ ಮಿನಿ ವಿಧಾನಸೌಧ: ಕಳೆದ 7 ವರ್ಷಗಳ ಹಿಂದೆಯೇ ತಾಲೂಕುಗಳಾಗಿ ಹೊರಹೊಮ್ಮಿದ್ದರೂ ಮೂಲ ಸವಲತ್ತಿಲ್ಲದೆ ನರಳುತ್ತಿರುವ ಕಲ್ಯಾಣ ಭಾಗದ 18 ಹೊಸ ತಾಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕಂದಾಯ ಇಲಾಖೆ ಜೊತೆ ಕೆಕೆಆರ್‌ಡಿಬಿ ಕೈ ಜೋಡಿಸಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಘೋಷಣೆಯಾದ ನೂತನ 18 ತಾಲೂಕಿನಲ್ಲಿ ಕಂದಾಯ ಇಲಾಖೆಯ ಸಹಯೋಗದೊಂದಿಗೆ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲು ಮಂಡಳಿ ಒಪ್ಪಿಗೆ ಸೂಚಿಸಿದೆ. ಪ್ರತಿ ಸೌಧಕ್ಕೆ ತಲಾ 15 ಕೋಟಿ ರು. ಗಳಂತೆ ಒಟ್ಟು 270 ಕೋಟಿ ರು. ಹಣ ಮ್ಯಾಕ್ರೋ ನಿಧಿಯಲ್ಲಿ ನೀಡಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಡಾ. ಅಜಯ್ ಸಿಂಗ್ ಹೇಳಿದರು.

ನೂತನ ತಾಲೂಕಿನಲ್ಲಿ ಕಚೇರಿ ಇಲ್ಲದೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿರುವುದನ್ನು ಮನಗಂಡು ಒಂದೇ ಸೂರಿನಡಿ ತಾಲೂಕಾ ಕಚೇರಿಗಳನ್ನು ತರಲು ಅರ್ಥಿಕ ನೆರವು ನೀಡಲಾಗುತ್ತಿದೆ ಎಂದರು.

ಕಲಬುರಗಿ- ಕೊಪ್ಪಳದಲ್ಲಿ ಕೌಶಲ್ಯ ತರಬೇತಿ ಸಂಸ್ಥೆ: ಪ್ರಸಕ್ತ ಸಾಲಿನ ಅಯವ್ಯಯದಲ್ಲಿ ಘೋಷಿಸಲಾದ ಕಲ್ಯಾಣ ಪಥ ಯೋಜನೆಯಡಿ ಪ್ರದೇಶದ ಹಳ್ಳಿಗಳಲ್ಲಿ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ 665 ಕೋಟಿ ರು. ಒದಗಿಸುತ್ತಿದ್ದು, ಮಂಡಳಿ ಇದಕ್ಕೆ ಯೋಜನೆಯ ಒಂದು ಮೂರರಷ್ಟು ಪಾಲು ಅಂದರೆ 335 ಕೋಟಿ ರು., ಅದೇ ರೀತಿಯಲ್ಲಿ ಪ್ರದೇಶದಲ್ಲಿ 221 ಕೋಟಿ ರು. ವೆಚ್ಚದಲ್ಲಿ 46 ಪ್ರಾಥಮಿಕ ಅರೋಗ್ಯ ಕೇಂದ್ರ ನಿರ್ಮಿಸಲಾಗುತ್ತಿದ್ದು, ಪ್ರತಿ ಪಿ.ಎಚ್.ಸಿ.ಗೆ 1.49 ಕೋಟಿ ರು. ನೀಡಲು ಮಂಡಳಿ ಸಭೆ ಅನುಮೋದನೆ ನೀಡಿದೆ.

ಇದೇ ಮಾದರಿಯಲ್ಲಿ ಕಲಬುರಗಿ ಕಿದ್ವಾಯಿ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೂ ಮಂಡಳಿ ಅನುದಾನ ನೀಡಲಿದೆ‌. ಉದ್ಯೋಗ ಆವಿಷ್ಕಾರದಡಿ‌ ಕಳೆದ ವರ್ಷ 25 ಸಾವಿರ ಜನರಿಗೆ ಕೌಶಲ್ಯ ತರಬೇತಿ ನೀಡಲು 9 ಕೋಟಿ ರು. ಖರ್ಚು ಮಾಡಲಾಗಿದೆ. ಈ ವರ್ಷ ಕಲಬುರಗಿ ಮತ್ತು ಕೊಪ್ಪಳದಲ್ಲಿ ಜಿ.ಟಿ.ಟಿ.ಸಿ-ವಿ.ಟಿ.ಯು ಸಹಭಾಗಿತ್ವದ ಕೌಶಲ್ಯ ಕೇಂದ್ರ ನಿರ್ಮಿಸಲಾಗುತ್ತಿದ್ದು, ಇದಕ್ಕೆ 120 ಕೋಟಿ ರು. ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ‌ ಭಾಗದಲ್ಲಿ ಸರ್ಕಾರಿ ಶಾಲೆ, ವಸತಿ ನಿಲಯ ಹೀಗೆ ಕಟ್ಟಡಕ್ಕೆ ಅನುದಾನವಿದ್ದು, ನಿವೇಶನಕ್ಕೆ ಹಣ ಲಭ್ಯ ಇಲ್ಲದಿದ್ದಲ್ಲಿ ಗರಿಷ್ಠ 5 ಎಕರೆ ವರೆಗೆ ಕಂದಾಯ ಇಲಾಖೆಯು ನಿಗದಿಪಡಿಸಿದ ಮೌಲ್ಯಯುತ ದರದಲ್ಲಿ ಜಮೀನು ಖರೀದಿಗೆ ಮಂಡಳಿ ಅನುದಾನ ನೀಡಲು ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ ಎಂದು ಡಾ.ಅಜಯ್ ಸಿಂಗ್ ತಿಳಿಸಿದರು.

ಕೆಕೆಆರ್‌ಡಿಬಿಯ ನಿರುದ್ಯೋಗ ನಿವಾರಣೆಯ ಪ್ರಯತ್ನವಾಗಿ ಯುವಕರಿಗೆ ತರಬೇತಿ ನೀಡಲು ಕಲಬುರಗಿ ಹಾಗೂ ಕೊಪ್ಪಳದಲ್ಲಿ ತಲಾ 25 ಎಕರೆ ಭೂಮಿಯಲ್ಲಿ 250 ಕೋಟಿ ರು. ವೆಚ್ಚಮಾಡಿ ಕೌಶಲ್ಯ ಭವನ ನಿರ್ಮಿಸುವ ಯೋಜನೆಗೆ ಒಪ್ಪಿಗೆ ದೊರಕಿದೆ. ಈ ಕುರಿತಂತೆ ವಿಸ್ತೃತ ಯೋಜನೆ ರೂಪಿಸಿ ಮುಂದಡಿ ಇಡಲಾಗುತ್ತದೆ. ಯುವಕರು ಕೌಶಲ್ಯ ತರಬೇತಿ ಹೊಂದುವಂತೆ ಜಿಟಿಸಿಸಿ ಮಾದರಿಯಲ್ಲಿ ವಿಟಿಯೂ ಸಹಯೋಗದಲ್ಲಿ ತರಬೇತಿ ಕೇಂದ್ರ ಯೋಜನೆ ರೂಪಿಸಲಾಗುತ್ತದೆ ಎಂದರು.

ಶಾಲಾ ಮೂಲ ಸವಲತ್ತು ಸುಧಾರಣೆ: ಈ ವರ್ಷ ಸಹ ಶೈಕ್ಷಣಿಕ ವರ್ಷ ಎಂದು ಪರಿಗಣಿಸಿ ಅಕ್ಷರ ಆವಿಷ್ಕಾರದಡಿ ಶೇ.25 ಅನುದಾನ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾಗುತ್ತಿದೆ. ಕಳೆದ ವರ್ಷ ಪ್ರದೇಶದ 9,209 ಶಾಲೆಗಳ ಪೈಕಿ 2,000 ಶಾಲೆಗಳಲ್ಲಿ ಪೀಠೋಪಕರಣ, ದುರಸ್ತಿ ಇನ್ನಿತರ ಮೂಲಸೌಕರ್ಯಕ್ಕೆ ತಲಾ 50 ಕೋಟಿ ರು. ಒದಗಿಸಿದ್ದು, ಈ ವರ್ಷ ಸಹ 2,000 ಶಾಲೆಗೆ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ ಎಂದರು.

ಕೃಷಿ- ಅಂತರ್ಜಲಕ್ಕೆ ಒತ್ತು: ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ. ಸುಂದರೇಶ ಬಾಬೂ ಮಾತನಾಡುತ್ತ ಈ ಬಾರಿ ಮಂಡಳಿಯಿಂದ ಅಂತರ್ಜಲ ಹೆಚ್ಚಳ, ನೀರಿನ ಸಂರಕ್ಷಣೆ, ಜಾಗೃತಿ ಹಾಗೂ ಕೃಷಿ ರಂಗಕ್ಕೆ ಸಂಬಂಧಿಸಿದ ಹಲವು ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುತ್ತಿದೆ. ಇದಕ್ಕಾಗಿ ಕಲಬುರಗಿಯಲ್ಲೇ ಆದ್ಯತೆ ಮೇಲೆ ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಕೆ.ಕೆ.ಆರ್.ಡಿ.ಬಿ ಕಾರ್ಯದರ್ಶಿ ಎಂ. ಸುಂದರೇಶ್ ಬಾಬು, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಎಸ್., ಮಂಡಳಿಯ ಉಪ ಕಾರ್ಯದರ್ಶಿ ಎಂ.ಕೆ.ಪ್ರಮೀಳಾ, ಡಾ. ಮಲ್ಲಿಕಾರ್ಜುನ ರೆಡ್ಡಿ ಇದ್ದರು.

--------------

ಎಸ್ಸೆಸ್ಸೆಲ್ಸಿ ಪಲಿತಾಂಶ ಸುಧಾರಣೆಗೆ ತಜ್ಞರ ಸಮಿತಿ ರಚನೆ

ಪ್ರದೇಶದಲ್ಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಮಂಡಳಿ ಬದ್ಧವಾಗಿದೆ. ಕಳೆದ ವರ್ಷ ಸಮಯದ ಅಭಾವ ಕಾರಣ ಜನವರಿ ಮಾಹೆಯಲ್ಲಿ 10ನೇ ತರಗತಿ ಮಕ್ಕಳಿಗೆ ಕಲಿಕಾ ಪುಸ್ತಕ ನೀಡಲಾಗಿತ್ತು. ಈ ಬಾರಿ ಬರುವ ಆಗಸ್ಟ್ 15 ರೊಳಗೆ ಕಲಿಕಾ ಪುಸ್ತಕ ನೀಡಲಾಗುವುದು. ಜೊತೆಗೆ 8 ಮತ್ತು 9ನೇ ತರಗತಿ ಮಕ್ಕಳಿಗೂ ಸೆಪ್ಟೆಂಬರ್ 17 ರೊಳಗೆ ಕಲಿಕಾ ಉಸ್ತಕ ನೀಡುವ ಮೂಲಕ 8ನೇ ತರಗತಿಯಿಂದಲೆ ಪಲಿತಾಂಶ ಸುಧಾರಣೆಗೆ ಮುಂದಾಗಿದ್ದೇವೆ ಎಂದ ಅವರು, ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ 2 ತಿಂಗಳ ಒಳಗಾಗಿ ಶಿಕ್ಷಣ‌ ತಜ್ಞರ ಸಮಿತಿ ರಚಿಸಲಾಗುವುದೆಂದರು.

Share this article