* ಮೊದಲ ಹಂತವಾಗಿ ಡಿಸಿ ಕಚೇರಿ ಸೇರಿ 10 ಇಲಾಖೆಗಳ ಸ್ಥಳಾಂತರ । ನೂತನ ಜಿಲ್ಲಾಡಳಿತ ಭವನದಲ್ಲಿ ಭರದಿಂದ ಸಾಗಿದೆ ಅಂತಿಮ ಹಂತದ ಸಿದ್ಧತೆರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಆರಂಭದಿಂದಲೂ ಪರ-ವಿರೋಧಗಳ ನಡುವೆ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧ ಕಾರ್ಯಾರಂಭಗೊಳ್ಳಲು ಪೂರ್ವ ತಯಾರಿ ವೇಗವಾಗಿ ನಡೆದಿದ್ದು, ಹೊಸ ವರ್ಷದ ಹೊಸ್ತಿಲಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಆಯ್ದ 10ಕ್ಕೂ ಹೆಚ್ಚು ಇಲಾಖೆಗಳು ಸ್ಥಳಾಂತರಗೊಳಿಸಲಾಗುತ್ತಿದೆ.
*ಯಾವ ಇಲಾಖೆಗಳು ಶಿಫ್ಟ್: ರಾಯಚೂರು ನಗರದಲ್ಲಿನ ಐತಿಹಾಸಿಕ ಸಾಥ್ ಕಚೇರಿ ಕಟ್ಟಡದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಡಿಸಿ ಕಚೇರಿ, ಸಹಾಯಕ ಆಯುಕ್ತರ ಇಲಾಖೆ, ನಗರಾಭಿವೃದ್ಧಿ ಜಿಲ್ಲಾ ಕೋಶ ಇಲಾಖೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಖಜಾನೆ, ಭೂ ದಾಖಲೆಗಳ ಉಪನಿರ್ದೇಶಕರ ಇಲಾಖೆ, ಸಣ್ಣ ಉಳಿತಾಯ ಖಾತೆ, ಧಾರ್ಮಿಕ ದತ್ತಿ ಇಲಾಖೆ, ಮುದ್ರಾಂಕ ಮತ್ತು ನೋಂದಣಿ ಹಾಗೂ ಉಪನೋಂದಣಿ ಇಲಾಖೆಗಳು ಮೊದಲ ಹಂತದಲ್ಲಿ ಸ್ಥಳಾಂತರಗೊಳ್ಳುತ್ತಿವೆ.*ಭರದಿಂದ ಸಾಗಿದೆ ಸಿದ್ಧತೆ: ಜಿಲ್ಲಾ ಕೇಂದ್ರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ, ಸಂಚಾರ ದಟ್ಟಣೆ, ಒಂದೇ ಸೂರಿನಡಿ ಸರ್ಕಾರಿ ಇಲಾಖೆಗಳನ್ನು ತರುವುದು, ವಿವಿಧ ತಾಲೂಕುಗಳ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ನಗರಸಭೆ ವ್ಯಾಪ್ತಿಯ ಯಕ್ಲಾಸಪುರ ಸಮೀಪದ 18 ಎಕರೆ ಜಮೀನಿನಲ್ಲಿ ₹25 ಕೋಟಿ ವೆಚ್ಚದಲ್ಲಿ ಹೊಸದಾಗಿ ಜಿಲ್ಲಾಡಳಿತ ಭವನ ನಿರ್ಮಿಸಲಾಗಿದೆ. ಸುಣ್ಣ-ಬಣ್ಣ, ಜಂಗಲ್ ಕಟ್ಟಿಂಗ್, ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಗುಣಟ್ಟದ ಅಂತರ್ಜಾಲ ಸೇವೆ ಸೇರಿದಂತೆ ಅಗತ್ಯ ಸವಲತ್ತುಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಅಂತಿಮ ಹಂತದ ಕೆಲಸ-ಕಾರ್ಯಗಳು ಭರದಿಂದ ಸಾಗಿವೆ.
ಜಿಲ್ಲೆ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮಿನಿ ವಿಧಾನಸೌಧ ಕರ್ಯಾರಂಭವನ್ನು ಹೊಸ ವರ್ಷದ ಮೊದಲ ವಾರದಲ್ಲಿ ಆರಂಭಿಸಬೇಕು ಎನ್ನುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿದ್ದು, ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಿದೆ.ರಾಯಚೂರು ನಗರದಲ್ಲಿಯೇ ಹಲವು ದಶಕಗಳಿಂದ ಸಾಥ್ ಕಚೇರಿಯಲ್ಲಿಯೇ ಜಿಲ್ಲಾಧಿಕಾರಿಗಳ ಕಚೇರಿ ಜೊತೆಗೆ ಹಾಗೂ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದವು. ಇದರಿಂದಾಗಿ ನಗರ ಸೇರಿದಂತೆ ಎಲ್ಲ ತಾಲೂಕುಗಳ ಜನರಿಗೆ ಬಂದು ಹೋಗಲು ಸಾಕಷ್ಟು ಅನುಕೂಲವಾಗಿತ್ತು ಇದೀಗ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧವು ನಗರ ಕೇಂದ್ರದಿಂದ ಕೊಂಚ ದೂರದಲ್ಲಿರುವುದರಿಂದ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಗೂ ನಗರ ಪ್ರದೇಶದ ನಾಗರೀಕರಿಗೆ ಓಡಾಟಕ್ಕೆ ಆರಂಭದಲ್ಲಿ ಸಮಸ್ಯೆ ಎದುರಾದರೂ ಭವಿಷ್ಯದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎನ್ನುವ ಆಶಾಭವನೆಯೊಂದಿಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸಾರ್ವಜನಿಕರು ಹೊಸ ಮಿನಿ ವಿಧಾನಸೌಧಕ್ಕೆ ತೆರಳಲು ತಯಾರಗುತ್ತಿದ್ದಾರೆ.