ಜಿಲ್ಲೆಯ ಮೂಡಿಗೆರೆ, ಶೃಂಗೇರಿ ವಿಧಾನಸಭಾ ಕ್ಷೇತ್ರಗಳಲ್ಲಿ ಮಳೆಯಿಂದ ಹಾನಿ । ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಧಾರಾಕಾರ ಮಳೆ ಸುರಿದು ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಶೃಂಗೇರಿ, ಕಳಸ, ಕೊಪ್ಪ, ಎನ್.ಆರ್.ಪುರ ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಭಾರಿ ಹಾನಿ ಸಂಭವಿಸಿದೆ. ಹಲವು ಮನೆಗಳು ಧರೆಗುರುಳಿದ್ದು, ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಡಿಸಿ ಮೀನಾ ನಾಗರಾಜ್, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಎಸ್‌ಪಿ ಡಾ. ವಿಕ್ರಂ ಅಮಟೆ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿವಿಧ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು ಸಂತ್ರಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.ಜಿಲ್ಲೆಯ ಕುನ್ನಹಳ್ಳಿ, ಹವಳ್ಳಿ, ಚಂಡುಗೋಡು, ಅರೆನೂರು ಕಾಳಜಿ ಕೇಂದ್ರ, ಶೃಂಗೇರಿಯ ಉತ್ತಿನ ಗದ್ದೆ, ಬಸರಿಕಟ್ಟೆ, ನಾರ್ವೆ ಪ್ರದೇಶಗಳಿಗೆ ಭೇಟಿ ನೀಡಿ ಮಳೆಯಿಂದ ಆದ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರು. ಮಳೆಯಿಂದ ಮನೆ ಕಳೆದು ಕೊಂಡವರಿಗೆ ಕೂಡಲೇ ಮೊದಲ ಕಂತಿನ ಪರಿಹಾರ ನೀಡುವ ಜೊತೆಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ಮಂಜೂರು ಮಾಡುವಂತೆ ಸಚಿವ ಕೆ.ಜೆ.ಜಾರ್ಜ್ ಅವರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕಂಡರಿಯ ದಂತ ಮಳೆ ಬಂದಿದೆ. ಮಳೆಯೊಂದಿಗೆ ಗಾಳಿಯೂ ರಭಸವಾಗಿ ಬೀಸುತ್ತಿರುವುದರಿಂದ ಹಾನಿಯ ಪ್ರಮಾಣ ಹೆಚ್ಚಾಗಿದೆ. ಈಗಾಗಲೇ ಮನೆ ಕಳೆದುಕೊಂಡವರಿಗೆ ಬದಲಿ ವ್ಯವಸ್ಥೆ ಮಾಡಿದ್ದೇವೆ. ಅವರಿಗೆ ಪರಿಹಾರ ನೀಡುವ ಜೊತೆಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ಮಂಜೂರು ಮಾಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಮಾಡಿದೆ ಎಂದು ಹೇಳಿದರು.ಮಲೆನಾಡು ಭಾಗದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಮರ ಬಿದ್ದ ಪರಿಣಾಮ ವಿದ್ಯುತ್ ಲೈನ್‌ಗಳು ಹಾಗೂ ಕಂಬಗಳಿಗೆ ತೀವ್ರ ಹಾನಿಯಾಗಿದೆ. ಇದನ್ನು ಸರಿಪಡಿಸಲು ಕೆಲ ಸಮಯ ಬೇಕಾಗುತ್ತದೆ. ಕಾಡಿನ ಮಧ್ಯೆ ವಿದ್ಯುತ್ ಲೈನ್‌ಗಳಿಗೆ ಹಾನಿ ಯಾಗಿರುವುದರಿಂದ ಅಲ್ಲಿಗೆ ತೆರಳಿ ಸರಿಪಡಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಮಲೆನಾಡು ಭಾಗಕ್ಕೆ 550 ಲೈನ್‌ಮನ್ ಗಳು ಇದ್ದರು. ಈಗಾಗಲೇ ಬಯಲುಸೀಮೆ ಭಾಗದ ಲೈನ್‌ಮನ್‌ಗಳನ್ನೂ ಮಲೆನಾಡು ಭಾಗಕ್ಕೆ ನಿಯೋಜಿಸಲಾಗಿದೆ. ಅಗತ್ಯಬಿದ್ದರೆ ಮಂಗಳೂರು ಭಾಗದಿಂದಲೂ ಲೈನ್‌ಮನ್‌ಗಳನ್ನು ಕರೆಯಿಸಿಕೊಂಡು ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.ಒಂದು ಲಕ್ಷ ರು. ಪರಿಹಾರ:
ಸರ್ಕಾರಿ ಜಾಗದಲ್ಲಿ ನಿರ್ಮಾಣಗೊಂಡಿರುವ ಮನೆಗಳು ಬಿದ್ದಿದ್ದರೆ ಒಂದು ಲಕ್ಷ ಪರಿಹಾರ ನೀಡಲು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಸೋಮವಾರ ಅಧಿಕೃತ ಆದೇಶ ಹೊರ ಬರುವ ಸಾಧ್ಯತೆಯಿದೆ. ಕೆಲವರು ಡೀಮ್ಡ್ ಫಾರೆಸ್ಟ್ ಹಾಗೂ ಸರ್ಕಾರಿ ಜಮೀನುಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಇವರ ಬಳಿ ಮನೆಗಳಿಗೆ ಸಂಬಂಧಿಸಿ ದಂತೆ ಯಾವ ದಾಖಲೆಗಳೂ ಇಲ್ಲ. ಹೀಗಾಗಿ ಇವರಿಗೆ ಪರಿಹಾರ ನೀಡಲು ಬರುತ್ತಿರಲಿಲ್ಲ. ಮಾನವೀಯ ದೃಷ್ಟಿಯಿಂದ ಅಂಥವರಿಗೂ ಪರಿಹಾರ ನೀಡಲು ಕ್ರಮ ಕೈಗೊಂಡಿರುವುದಾಗಿ ಮಾಹಿತಿ ನೀಡಿದರು.ಭಾರಿ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡ ಕುಸಿತ ಪ್ರಕರಣಗಳು ಸಂಭವಿಸಿವೆ. ಇದಲ್ಲದೆ ರಸ್ತೆಗಳಿಗೂ ಹಾನಿಯಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಫಂಡ್‌ನಿಂದ ಕೂಡಲೇ ಗುಡ್ಡ ಕುಸಿತದ ಮಣ್ಣು ತೆರವು ಹಾಗೂ ರಸ್ತೆ ಹಾನಿ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಬಾರಿ ಭಾರೀ ಮಳೆಯಾಗಿದ್ದರಿಂದ ಸಮಸ್ಯೆ ಸ್ವಲ್ಪ ಹೆಚ್ಚಾಗಿದೆ. ಭಾರೀ ಮಳೆ ಮುನ್ಸೂಚನೆ ಇದ್ದುದರಿಂದ ಒಂದು ತಿಂಗಳ ಹಿಂದೆಯೇ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಹೀಗಾಗಿ ಸಮಸ್ಯೆ ಎದುರಾದ ತಕ್ಷಣ ಸ್ಪಂದಿಸಲು ಸಾಧ್ಯ ವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದ ಗುಡ್ಡ ಕುಸಿತ, ರಸ್ತೆಗಳ ಹಾನಿ ಕುರಿತಂತೆ ಜಿಲ್ಲಾಧಿಕಾರಿಗಳು ವರದಿ ಸಿದ್ಧ ಪಡಿಸುತ್ತಿದ್ದಾರೆ. ತುರ್ತು ಕೆಲಸಗಳನ್ನು ಇರುವ ಅನುದಾನದಲ್ಲಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ಉಳಿದಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಬಾಕಿ ಇರುವ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.-- ಬಾಕ್ಸ್ ---ಲಿಂಗನಮಕ್ಕಿ ಜಲಾಶಯ ಭರ್ತಿ: ಹರ್ಷರಾಜ್ಯದ ಅತ್ಯಂತ ದೊಡ್ಡ ಜಲಾಶಯ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಯಾಗುವ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುವ ಹಂತ ತಲುಪಿರುವುದರಿಂದ ರಾಜ್ಯದ ಜನ ಸಂತಸಗೊಂಡಿದ್ದಾರೆ. ಇದರಿಂದ ಇಂಧನ ಇಲಾಖೆಗೂ ಖುಷಿಯಾಗಿದೆ. ಜನ ಸಂತಸಗೊಂಡರೆ ನಮ್ಮ ಇಲಾಖೆಗೂ ಸಂತಸವಾಗುತ್ತದೆ ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು ಇನ್ನು ಕೆಲವೇ ಅಡಿಗಳು ಬಾಕಿಯಿದೆ. ಜಲಾಶಯಕ್ಕೆ ಭಾರಿ ಪ್ರಮಾಣದ ಒಳ ಹರಿವೂ ಇದೆ. ಹೀಗಾಗಿ ಶೀಘ್ರವೇ ಲಿಂಗನಮಕ್ಕಿ ಭರ್ತಿಯಾಗುವ ವಿಶ್ವಾಸವಿದೆ. ಇದೇ ವೇಳೆಗೆ ರಾಜ್ಯದಲ್ಲಿ ವಿದ್ಯುತ್ ಬೇಡಿಕೆಯೂ ಗಣನೀಯವಾಗಿ ಕುಸಿದಿರುವುದು ಸಂತಸದ ಸಂಗತಿ ಎಂದು ಹೇಳಿದರು.28 ಕೆಸಿಕೆಎಂ 8ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಮಳೆಹಾನಿ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕಿ ನಯನಾ ಮೋಟಮ್ಮ, ಡಿಸಿ ಮೀನಾ ನಾಗರಾಜ್, ಎಸ್‌ಪಿ ಡಾ. ವಿಕ್ರಮ ಅಮಟೆ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಇದ್ದರು.