ಗದಗ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನವಿಲುತೀರ್ಥ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿರುವ ಹಿನ್ನೆಯಲ್ಲಿ ಜಿಲ್ಲೆಯ ನರಗುಂದ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದ್ದು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಲಪ್ರಭಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿದೆ. ಇದರಿಂದ ಪದೇ-ಪದೇ ಈ ಭಾಗದ ಜನರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಾರೆ. ರಾಜ್ಯ ಸರ್ಕಾರ ಮಲಪ್ರಭಾ ನದಿಯಲ್ಲಿ ಹೂಳು ಎತ್ತುವ ಪ್ರಯತ್ನ ಹಾಗೂ ಅಗಲೀಕರಣ ಮಾಡಲು ಕ್ರಮ ಕೈಗೊಳ್ಳಲು ಹೆಜ್ಜೆ ಇಟ್ಟಿದೆ. ನದಿ ತೀರದಲ್ಲಿ ಅವಘಡ ನಡೆಯುವ ಮುನ್ನ ಮುಂಜಾಗ್ರತಾ ಕ್ರಮ ನಮ್ಮ ಸರ್ಕಾರ ಕೈಗೊಳ್ಳುತ್ತದೆ ಎಂದರು.
ಜಿಲ್ಲೆಯ ನರಗುಂದ ತಾಲೂಕಿನ ಕೋಣ್ಣೂರ ಗ್ರಾಮದ ಜಮೀನುಗಳಿಗೆ ಮಲಪ್ರಭಾ ನದಿ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆಗಳು ನಾಶವಾಗಿವೆ. ಸುಮಾರು 4 - 5 ವರ್ಷಗಳಿಂದ ಬೆಳೆಸಿದ ಪೇರಲ ಹಣ್ಣಿನ ಗಿಡಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಜತೆಗೆ,ತೆಂಗು, ಗೋವಿನ ಜೋಳ, ಕಬ್ಬು ಸೇರಿದಂತೆ ಹಲವು ಬೆಳೆ ಮಲಪ್ರಭೆ ತನ್ನ ಒಡಲಿನಲ್ಲಿ ಹಾಕಿಕೊಂಡಿದ್ದಾಳೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.ಇದೇ ವೇಳೆ ನರಗುಂದ ತಾಲೂಕಿನ ಲಖಮಾಪೂರ, ವಾಸನ ಗ್ರಾಮದ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು. ಲಖಮಾಪೂರ ಗ್ರಾಮದ ಹಲವು ಮನೆಗಳಿಗೆ ಈಗಾಗಲೇ ನೀರು ನುಗ್ಗಿದ್ದು, ಮನೆ ಹಾನಿಯಾದ ಕುಟುಂಬ ಸದಸ್ಯರ ಜತೆ ಚರ್ಚೆ ನಡೆಸಿದರು. ತಾತ್ಕಾಲಿಕವಾಗಿ ಐದು ಕುಟುಂಬಕ್ಕೆ ಅಗತ್ಯ ದಿನಸಿ ಕಿಟ್ ವಿತರಿಸಿದರು.