ಕನ್ನಡಪ್ರಭ ವಾರ್ತೆ ಭಾಲ್ಕಿ
ಭಾಲ್ಕಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಲಾ ಕೊಠಡಿ, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಇತರೆ ವಿವಿಧ ಅಭಿವೃದ್ಧಿಗಾಗಿ 225 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.ಅವರು ಗುರುವಾರ ಭಾಲ್ಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಭಾಲ್ಕಿ ತಾಲ್ಲೂಕಿನ ಸಾರ್ವಜನಿಕ ಕುಂದು ಕೊರತೆಗಳ ಜನಸ್ಪಂದನ ಸಭೆ ಮತ್ತು ಗ್ಯಾರಂಟಿ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾಲ್ಕಿ ತಾಲೂಕಿನಲ್ಲಿ 225 ಕೋಟಿ ರು. ಗಳ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು ಇನ್ನೂ 150 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ತಾಲೂಕಿನಲ್ಲಿ ಹೊಸದಾಗಿ 2 ಸಾವಿರ ಮನೆಗಳನ್ನು ಮಂಜೂರಾತಿ ಮಾಡಲಾಗಿದ್ದು ವಸತಿ ರಹಿತರಿಗೆ ಆಯ್ಕೆ ಮಾಡಿ ಮನೆಗಳನ್ನು ಮಂಜೂರು ಮಾಡಲಾಗುವುದು. ಯಾರು ಮಧ್ಯವರ್ತಿ ಹಾಗೂ ದಲ್ಲಾಳಿಗಳಿಗೆ ಹಣ ಕೊಡಬೇಕಾಗಿಲ್ಲ ಎಂದರು.ತಾಲ್ಲೂಕಿನ ರೈತರಿಗೆ ಹೆಚ್ಚುವರಿಯಾಗಿ ಸ್ಪ್ರಿಂಕ್ಲರ್ ಅಥವಾ ಹನಿ ನೀರಾವರಿಗೆ ರು.5 ಕೋಟಿ ಹೆಚ್ಚುವರಿ ಅನುದಾನ ನೀಡಿದ್ದು, ಇದರಿಂದ 2748 ರೈತರಿಗೆ ಅನುಕೂಲವಾಗಲಿದೆ. ಪ್ರತಿ ರೈತರಿಗೆ 21775 ರು. ಸಹಾಯಧನ ಸಿಗಲಿದೆ ಮತ್ತು ಸ್ವ ಸಹಾಯ ಸಂಘದ ಮಹಿಳೆಯರಿಗೆ 5 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಹಾಯ ಧನ ನೀಡಲಾಗುತ್ತದೆ. ಹಾಗಾಗಿ ಸ್ವ- ಸಹಾಯ ಸಂಘಗಳು ಹೆಚ್ಚಿನ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.
ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯಾದ್ಯಂತ ಎಲ್ಲಾ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಗೃಹ ಲಕ್ಷ್ಮೀ ಯೋಜನೆಯಿಂದ ಮನೆಯ ಯಜಮಾನಿಗೆ 2 ಸಾವಿರ ರು. ಪ್ರತಿ ತಿಂಗಳು ಸಿಗುತ್ತಿದೆ. ಗೃಹಜ್ಯೋತಿ ಯೋಜನೆಯಡಿ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ 3.20 ಲಕ್ಷ ಜನರಿಗೆ ಇದರ ಲಾಭ ಸಿಗುತ್ತಿದೆ ಎಂದರು.ಅನ್ನಭಾಗ್ಯ ಯೋಜನೆ ಬೀದರ ಜಿಲ್ಲೆಯ 11 ಲಕ್ಷ 20 ಸಾವಿರ ಫಲಾನುಭವಿಗಳ ಹೆಚ್ಚುವರಿ 5 ಕೆ.ಜಿ ಅಕ್ಕಿ ಹಣ ನೇರವಾಗಿ ಅವರ ಖಾತೆಗೆ ಜಮೆ ಆಗುತ್ತಿದೆ. ಪದವಿ ಮತ್ತು ಡಿಪ್ಲೊಮಾ ಮುಗಿಸಿದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ 2 ವರ್ಷಗಳವರೆಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ ಎಂದರು.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ಸದಸ್ಯರಿಗೆ 5 ಲಕ್ಷದ ಚೆಕ್ ವಿತರಿಸಿ ಅವರಿಗೆ ಆತ್ಮಸ್ಥೈರ್ಯ ತುಂಬಿದರು. ಪಡಿತರ ಚೀಟಿ, ಮಾಶಾಸನ, ವಿಧವಾ ವೇತನ, ಅಂಗವಿಕಲ ಸಹಾಯಧನ ಸೇರಿದಂತೆ ಇತರೆ ಸಮಸ್ಯೆಗಳ ಅಹವಾಲುಗಳನ್ನು ಸಚಿವರಿಗೆ ಜನರು ಸಲ್ಲಿಸಿದರು. ಅವುಗಳಿಗೆ ಪರಿಹಾರ ನೀಡುವಂತೆ ಸಚಿವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ, ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಸಹಾಯ ಸೌಲಭ್ಯಗಳನ್ನು ವಿತರಿಸಿದರು.ಕಾರ್ಯಕ್ರಮದಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಡಾ. ಗಿರೀಶ ಬದೊಲೆ, ಎಸ್ಪಿ ಚನ್ನಬಸವಣ್ಣ ಎಸ್.ಎಲ್. ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ., ಅಮೃತರಾವ ಚಿಮಕೋಡೆ, ಬಸವಕಲ್ಯಾಣ ಸಹಾಯಕ ಆಯುಕ್ತರಾದ ಪ್ರಕಾಶ ಕುದರೆ, ಭಾಲ್ಕಿ ತಹಶಿಲ್ದಾರ ಶ್ರೇಯಾಂಕ ಧನಶ್ರೀ, ತಾಪಂ ಇಒ ಸೂರ್ಯಕಾಂತ ಬಿರಾದಾರ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.