ಕಾಂಗ್ರೆಸ್‌ ಚುರುಕು: ಮುಖಂಡರು, ಪದಾಧಿಕಾರಿಗಳ ಜತೆ ಸಚಿವ ಮಧು ಸಭೆ - ಚುನಾವಣೆ ಕಾರ್ಯತಂತ್ರಗಳು, ಗ್ಯಾರಂಟಿ ಫಲಾನುಭವಿಗಳ ಭೇಟಿ ಇನ್ನಿತರ ವಿಷಯಗಳ ಚರ್ಚೆ

KannadaprabhaNewsNetwork | Published : Mar 16, 2024 1:57 AM

ಸಾರಾಂಶ

ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್‌ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆ ನಡೆಸಿದರು. ಚುನಾವಣೆ ಕಾರ್ಯತಂತ್ರಗಳು, ಗ್ಯಾರಂಟಿ ಫಲಾನುಭವಿಗಳ ಭೇಟಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭ್ಯರ್ಥಿಯ ಪ್ರವಾಸ ಕುರಿತಂತೆ ವಿಚಾರ ವಿಮರ್ಶೆ ಮಾಡಲಾಯಿತು. ಮಾ.17ರಂದು ಜಿಲ್ಲಾ ಕಾಂಗ್ರೆಸ್‌ನ ಎಲ್ಲ ಮುಂಚೂಣಿ ಘಟಕಗಳ ಪ್ರಮುಖರ ಸಭೆ ಕರೆಯಬೇಕು, ಈ ಬಗ್ಗೆ ಸಭೆಯಲ್ಲಿ ಪ್ರಮುಖರ ಅಭಿಪ್ರಾಯ ಸಂಗ್ರಹಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್‌ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಪಕ್ಷದ ಕಚೇರಿಯಲ್ಲಿ ಶುಕ್ರವಾರ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆ ನಡೆಸಿದರು.

ಚುನಾವಣೆ ಕಾರ್ಯತಂತ್ರಗಳು, ಗ್ಯಾರಂಟಿ ಫಲಾನುಭವಿಗಳ ಭೇಟಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭ್ಯರ್ಥಿಯ ಪ್ರವಾಸ ಕುರಿತಂತೆ ವಿಚಾರ ವಿಮರ್ಶೆ ಮಾಡಲಾಯಿತು. ಮಾ.17ರಂದು ಜಿಲ್ಲಾ ಕಾಂಗ್ರೆಸ್‌ನ ಎಲ್ಲ ಮುಂಚೂಣಿ ಘಟಕಗಳ ಪ್ರಮುಖರ ಸಭೆ ಕರೆಯಬೇಕು, ಈ ಬಗ್ಗೆ ಸಭೆಯಲ್ಲಿ ಪ್ರಮುಖರ ಅಭಿಪ್ರಾಯ ಸಂಗ್ರಹಿಸಲಾಯಿತು.

ಮಾ.20ರಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಅಂದು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಬೇಕು. ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಧು ಬಂಗಾರಪ್ಪ ತಿಳಿಸಿದರು.

ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆಗಳನ್ನು ನಡೆಸಬೇಕು. ಕಾರ್ಯಕರ್ತರು ಗ್ಯಾರಂಟಿ ಫಲಾನುಭವಿಗಳು ಅದರಲ್ಲೂ ಮಹಿಳೆಯರನ್ನು ಹೆಚ್ಚಾಗಿ ಸಂಪರ್ಕಿಸಬೇಕು. ಅಭ್ಯರ್ಥಿ ಗೀತಾ ಗ್ರಾಮ ಮಟ್ಟದಲ್ಲಿ ಮಹಿಳೆಯರೊಂದಿಗೆ ಸಭೆ, ಸಂವಾದ ನಡೆಸಲು ಅನುವು ಮಾಡಿಕೊಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಕಲಗೋಡು ರತ್ನಾಕರ್, ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಪ್ರಮುಖರಾದ ಎಂ.ಶ್ರೀಕಾಂತ್, ಕಲಗೋಡು ರತ್ನಾಕರ್, ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಜಿ.ಡಿ.ಮಂಜುನಾಥ್ ಮತ್ತಿತರರು ಇದ್ದರು.

- - - ಬಾಕ್ಸ್ ಅಸಮಾಧಾನ: ಸಚಿವ ಮಧು ಉಡಾಫೆ ಸಚಿವ ಎಂದು ಘೋಷಣೆಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಜಿಲ್ಲಾ ಕಾಂಗ್ರೆಸ್‌ನಲ್ಲೂ ಅಸಮಾಧಾನ ಶುರುವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧವೇ ಕಾರ್ಯಕರ್ತರು ಉಡಾಫೆ ಜಿಲ್ಲಾ ಮಂತ್ರಿ ಎಂದು ಘೋಷಣೆ ಕೂಗುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿ ಎದುರು ಶಿಕಾರಿಪುರ ಕ್ಷೇತ್ರದ ಕಾರ್ಯಕರ್ತರು ದಿಢೀರ್‌ ಪ್ರತಿಭಟನೆ ನಡೆಸಿ, ಎಲ್ಲ ಪಕ್ಷ ಹಾಳು ಮಾಡಿ, ಅವರ ಅಪ್ಪ ಬಂಗಾರಪ್ಪ ಬಂದ್ರು, ಈಗ ಮಧು ಬಂಗಾರಪ್ಪ ಕಾಂಗ್ರೆಸ್ ಹಾಳು ಮಾಡುವುದಕ್ಕೆ ಬಂದಿದ್ದಾರೆ ಎಂದು ಪ್ರತಿಭಟನಾಕಾರರು ಕೂಗಿದರು.

ಕಾಂಗ್ರೆಸ್ ಕಚೇರಿ ಮುಂಭಾಗ ಮೂಲ ಕಾಂಗ್ರೆಸ್ಸಿಗರಿಂದ ಆರೋಪ ಕೇಳಿಬಂದಿದೆ. ಇಡೀ ಜಿಲ್ಲೆಯ ಕಾಂಗ್ರೆಸ್ ಅನ್ನು ಮಧು ಬಂಗಾರಪ್ಪ ಹಾಳು ಮಾಡುತ್ತಿದ್ದಾರೆ. ಪಕ್ಷ ನಮ್ಮ ದೇವರು ಎಂದು ಇಷ್ಟು ದಿನ ಸುಮ್ಮನೆ ಇದ್ವಿ. ಇನ್ನು ಮುಂದೆ ಹಾಗೆ ಆಗಲ್ಲ. ಪಕ್ಷದ ವಿರುದ್ಧವೇ ಕೆಲಸ ಮಾಡುತ್ತೇವೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

- - - -15ಎಸ್‌ಎಂಜಿಕೆಪಿ09:

ಶಿವಮೊಗ್ಗ ಕಾಂಗ್ರೆಸ್‌ ಕಚೇರಿ ಎದುರು ಶಿಕಾರಿಪುರ ಕ್ಷೇತ್ರದ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ಧ ದಿಢೀರ್‌ ಪ್ರತಿಭಟನೆ ನಡೆಸಿದರು.

Share this article