ಭಟ್ಕಳ: ತಾಲೂಕಿನ ಬೆಳಕೆಯಲ್ಲಿ ಶನಿವಾರ ಸಮದ್ರದಲ್ಲಿ ಕೃತಕ ಬಂಡೆ ಸ್ಥಾಪಿಸುವ ಕಾರ್ಯಕ್ರಮಕ್ಕೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಂಕಾಳ ವೈದ್ಯ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮೀನುಗಳ ಸಂತತಿ ವೃದ್ಧಿಗೆ ಪೂರಕವಾಗಿ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸಮುದ್ರದಲ್ಲಿ ೫ ನಾಟಿಕಲ್ ಮೈಲು ದೂರದಲ್ಲಿ (೧೦-೧೫ ಮೀಟರ್ ಆಳದಲ್ಲಿ) ಕೃತಕ ಬಂಡೆ ಸ್ಥಾಪಿಸುವ ಯೋಜನೆ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದರಿಂದ ಸಾಂಪ್ರದಾಯಿಕ ಮೀನುಗಾರರಿಗೆ ಅನುಕೂಲ ಆಗಲಿದೆ ಎಂದು ಹೇಳಿದರು. ಈಗಾಗಲೇ ತಮಿಳುನಾಡು ಹಾಗೂ ಕೇರಳದ ಸಮುದ್ರದಲ್ಲಿ ಕೃತಕ ಬಂಡೆ ಸ್ಥಾಪಿಸುವ ಮೂಲಕ ಮೀನು ಸಂತತಿ ವೃದ್ಧಿಸಿದ್ದನ್ನು ಅಧಿಕಾರಿಗಳು ಅಧ್ಯಯನ ಮಾಡಿದ್ದಾರೆ.
ಹೀಗಾಗಿ ರಾಜ್ಯದಲ್ಲಿ ಅಳವಡಿಸಲು ಕ್ರಮ ತೆಗೆದುಕೊಳ್ಳಲು ಕಾರಣವಾಯಿತು. ಇದರಿಂದ ಮೀನುಗಾರಿಕೆ ಬೋಟುಗಳಿಗೆ ಯಾವುದೇ ತೊಂದರೆಯಾಗದು, ಆದರೆ ಸಾಂಪ್ರದಾಯಿಕ ದೋಣಿಗಳಲ್ಲಿ ಮೀನುಗಾರಿಕೆ ಮಾಡುವವರಿಗೆ ಹೆಚ್ಚು ಮೀನು ದೊರೆಯಲು ಅನುಕೂಲವಾಗಲಿದೆ ಎಂದರು.
ಮೂರು ಜಿಲ್ಲೆಗಳಲ್ಲಿ ₹ ೧೭.೩೭ ಕೋಟಿ ವೆಚ್ಚದಲ್ಲಿ ೫೬ ಕೃತಕ ಬಂಡೆಗಳನ್ನು ಪ್ರಥಮ ಹಂತದಲ್ಲಿ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಪ್ರಥಮವಾಗಿ ತಾಲೂಕಿನ ಬೆಳಕೆಯಿಂದಲೇ ಪ್ರಾರಂಭಿಸಲಾಗಿದೆ.
ಮೇ ಒಳಗೆ ಎಲ್ಲೆಡೆ ಕೃತಕ ಬಂಡೆ ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಬೆಳಕೆಯಲ್ಲಿ ಈ ಹಿಂದೆ ₹ ೨.೫ ಕೋಟಿ ವೆಚ್ಚದಲ್ಲಿ ಬಂದರು ಸ್ಥಾಪಿಸಿದ್ದು ಈ ಬಾರಿ ₹ ೨೦೦ ಕೋಟಿ ವೆಚ್ಚದಲ್ಲಿ ಬಂದರು ವಿಸ್ತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ.
ಬೆಳಕೆಯ ಕುಡಿಯುವ ನೀರಿನ ಯೋಜನೆ ಸೇರಿ ಎಲ್ಲ ಕಾಮಗಾರಿಗಳನ್ನು ಹಂತ-ಹಂತವಾಗಿ ಮಾಡಿಕೊಡುವುದಾಗಿ ಭರವಸೆ ನೀಡಿದರು. ಮೀನುಗಾರರ ಸಂಕಷ್ಟ ಪರಿಹಾರ ನಿಧಿಯನ್ನು ₹ ೬ರಿಂದ ₹ ೮ ಲಕ್ಷಕ್ಕೆ ಹೆಚ್ಚಿಸಿರುವುದಾಗಿ ತಿಳಿಸಿದ ಸಚಿವರು, ಈ ಹಿಂದೆ ಮೀನುಗಾರರು ಆಕಸ್ಮಿಕ ನೀರಿನಲ್ಲಿ ಬಿದ್ದು ನಾಪತ್ತೆಯಾದರೆ ಸಂಕಷ್ಠ ಪರಿಹಾರ ನೀಡಲು ಸಾಧ್ಯವಿಲ್ಲವಾಗಿತ್ತು.
೭ ವರ್ಷದ ತನಕ ಅಂತಹ ಪ್ರಕ್ರಿಯೆಯೇ ನಡೆಸುತ್ತಿಲ್ಲವಾಗಿತ್ತು, ಆದರೆ ಇದಕ್ಕೆ ಬದಲಾವಣೆ ತಂದು ನೀರಿನಲ್ಲಿ ಮುಳುಗಿ ನಾಪತ್ತೆ ಆಗಿದ್ದಾರೆನ್ನುವುದು ಖಾತ್ರಿಯಾದರೆ ಅಂತಹವರ ಕುಟುಂಬಕ್ಕೂ ಪರಿಹಾರ ನೀಡಲು ಎಲ್ಲ ವ್ಯವಸ್ಥೆ ಮಾಡಿದ್ದೇನೆ ಎಂದರು.
ತಾನು ಮೀನುಗಾರರ ಪರವಾಗಿದ್ದು ₹ ೩೦೦ ಕೋಟಿ ಇದ್ದ ಮೀನುಗಾರಿಕಾ ಇಲಾಖೆ ಬಜೆಟ್ ಈ ಬಾರಿ ₹ ೩೦೦೦ ಕೋಟಿಯಾಗಿದೆ. ಬಂದರು ಇಲಾಖಾ ಬಜೆಟ್ ₹ ೨೦೦೦ ಕೋಟಿಗೆ ಏರಿಕೆಯಾಗಿದೆ, ಇದರಿಂದ ಮೀನುಗಾರರಿಗೆ ಯಾವುದೇ ರೀತಿಯ ಸಹಕಾರ ಮಾಡಲು ಸಾಧ್ಯ ಎಂದೂ ಹೇಳಿದರು.
ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಮಾತನಾಡಿದರು. ಬೆಳಕೆ ಮೀನುಗಾರರ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷ ಜಗದೀಶ ಮೊಗೇರ, ಜಿಲ್ಲಾ ಮೀನುಗಾರಿಕಾ ನಿರ್ದೇಶಕ ಅಣ್ಣಪ್ಪ ಬಾಪಿತ್ಲು, ಕೆಎಫ್‌ಡಿಸಿ ಎಂ.ಡಿ. ಗಣೇಶ, ಉಡುಪಿ ಜಿಲ್ಲಾ ಜಂಟಿ ನಿರ್ದೇಶಕ ವಿವೇಕ ಆರ್., ದ.ಕ ಜಿಲ್ಲಾ ಜಂಟಿ ನಿರ್ದೇಶಕ ಸಿದ್ದಯ್ಯ, ಮುಖ್ಯ ಅಭಿಯಂತರ ಎಸ್.ಪಿ. ರಾಜಣ್ಣ, ಶಂಕರ ಮೊಗೇರ, ಭಾಸ್ಕರ ಮೊಗೇರ, ನಾರಾಯಣ ಮೊಗೇರ.
ವೆಂಕಟರಮಣ ಮೊಗೇರ ಉಪಸ್ಥಿತರಿದ್ದರು.ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಬಿಪಿನ್ ಬೋಪಣ್ಣ ಸ್ವಾಗತಿಸಿದರು. ಮೀನುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿ ದಿನೇಶ ಕುಮಾರ್ ಕಳ್ಳೇರ ಪ್ರಾಸ್ತಾವಿಕ ಮಾತನಾಡಿದರು. ವಕೀಲ ನಾಗರಾಜ ಈ.ಎಚ್. ನಿರ್ವಹಿಸಿದರು.