ಪರಿಸರ ಪಾಠ ಆಲಿಸಿದ ಸಚಿವ ಸತೀಶ್ ಜಾರಕಿಹೊಳಿ

KannadaprabhaNewsNetwork | Published : Dec 4, 2023 1:30 AM

ಸಾರಾಂಶ

ಕನ್ನಡಪ್ರಭ ವಾರ್ತೆ ಶಿರಸಿಸಭೆ, ಸಮಾರಂಭ, ಉದ್ಘಾಟನೆ, ಭಾಷಣಗಳ ಒತ್ತಡದಲ್ಲಿರುವ ಸಚಿವರು ಉಪನ್ಯಾಸ ಕೇಳಲು ಕುಳಿತುಕೊಳ್ಳುವ ವ್ಯವಧಾನ ಇದೆಯೇ? ಆದರೆ ಇಂತಹ ಅಪರೂಪದ ಘಟನೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕಳವೆ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರ ಸಾಕ್ಷಿಯಾಗಿದೆ.ಪೂರ್ವನಿರ್ಧಾರಿತ ಕಾರ್ಯಕ್ರಮ ಹೊರತಾಗಿ ನಿಸರ್ಗ ಜ್ಞಾನ ಕೇಂದ್ರ ವೀಕ್ಷಣೆಗೆ ಬಂದ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪರಿಸರ ಉಪನ್ಯಾಸ ಮಾಡುವಂತೆ ಪರಿಸರ ಬರಹಗಾರ ಶಿವಾನಂದ ಕಳವೆಯವರಲ್ಲಿ ಕೋರಿದರು. ರಾಜ್ಯದ ಪ್ರಸ್ತುತ ಬರ ಸ್ಥಿತಿ ಹಾಗೂ ಜಲ ಸಂರಕ್ಷಣೆ ಕುರಿತು ಸುಮಾರು ಒಂದು ಗಂಟೆ ಕಳವೆಯವರ ಮಾತುಗಳನ್ನು ಆಸಕ್ತಿಯಿಂದ ಆಲಿಸಿದರು.

ಗಂಟೆಗೂ ಹೆಚ್ಚುಕಾಲ ಕಳವೆಯರ ಮಾತು ಆಲಿಸಿದ ಸಚಿವರು

ಕನ್ನಡಪ್ರಭ ವಾರ್ತೆ ಶಿರಸಿ

ಸಭೆ, ಸಮಾರಂಭ, ಉದ್ಘಾಟನೆ, ಭಾಷಣಗಳ ಒತ್ತಡದಲ್ಲಿರುವ ಸಚಿವರು ಉಪನ್ಯಾಸ ಕೇಳಲು ಕುಳಿತುಕೊಳ್ಳುವ ವ್ಯವಧಾನ ಇದೆಯೇ? ಆದರೆ ಇಂತಹ ಅಪರೂಪದ ಘಟನೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕಳವೆ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರ ಸಾಕ್ಷಿಯಾಗಿದೆ.

ಪೂರ್ವನಿರ್ಧಾರಿತ ಕಾರ್ಯಕ್ರಮ ಹೊರತಾಗಿ ನಿಸರ್ಗ ಜ್ಞಾನ ಕೇಂದ್ರ ವೀಕ್ಷಣೆಗೆ ಬಂದ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪರಿಸರ ಉಪನ್ಯಾಸ ಮಾಡುವಂತೆ ಪರಿಸರ ಬರಹಗಾರ ಶಿವಾನಂದ ಕಳವೆಯವರಲ್ಲಿ ಕೋರಿದರು. ರಾಜ್ಯದ ಪ್ರಸ್ತುತ ಬರ ಸ್ಥಿತಿ ಹಾಗೂ ಜಲ ಸಂರಕ್ಷಣೆ ಕುರಿತು ಸುಮಾರು ಒಂದು ಗಂಟೆ ಕಳವೆಯವರ ಮಾತುಗಳನ್ನು ಆಸಕ್ತಿಯಿಂದ ಆಲಿಸಿದರು.

ಶಿರಸಿಯ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶನಿವಾರ ಆಗಮಿಸಿದ್ದ ಅವರನ್ನು ಶಾಸಕ ಭೀಮಣ್ಣ ನಾಯ್ಕ್ ಹಾಗೂ ಧುರೀಣ ದೀಪಕ ದೊಡ್ಡೂರು ಕಳವೆಗೆ ಕರೆತಂದರು. ಮಕ್ಕಳಿಗೆ ಪರಿಸರ ಶಿಕ್ಷಣ ಕಾರ್ಯಕ್ರಮ, ಜಲ ಸಂರಕ್ಷಣೆ ಜಾಗೃತಿ ಮೂಡಿಸುವ ದಶಕಗಳ ಕಾರ್ಯಗಳ ವಿವರ ಪಡೆದ ಸಚಿವರು ಸಂತಸ ವ್ಯಕ್ತಪಡಿಸಿದರು. ಕರ್ನಾಟಕ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿಯ ಈ ಕೇಂದ್ರಕ್ಕೆ ಇನ್ನಷ್ಟು ಮೂಲಭೂತ ಸೌಕರ್ಯ ಕಲ್ಪಿಸಲು ತಾವು ಅಗತ್ಯ ಸಹಾಯ ನೀಡುವುದಾಗಿ ಘೋಷಿಸಿದರು.

ಇಂದು ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರ ಪೀಡಿತವಾಗಿವೆ. ಇಂಥ ಸಂದರ್ಭದಲ್ಲಿ ಭವಿಷ್ಯದಲ್ಲಿ ರಾಜ್ಯ ಬರ ಪರಿಸ್ಥಿತಿ ಗೆಲ್ಲಲು ಕೆರೆ ಪುನಶ್ಚೇತನ ಮಹತ್ವವನ್ನು ಕಳವೆ ಸಚಿವರಿಗೆ ವಿವರಿಸಿದರು. ಕೆರೆ ಹೂಳು ತೆಗೆಯುವ ಸಂದರ್ಭದಲ್ಲಿ ಆಳಕ್ಕೆ ಹೂಳು ತೆಗೆದು ಹೆಚ್ಚು ನೀರು ನಿಲ್ಲುವಂತೆ ಮಾಡಬೇಕು. ಇಂದು ಕೆರೆ ಹೂಳು ತೆಗೆಯಲು ಮಂಜೂರಾದ ಹಣದಲ್ಲಿ ಶೇ. 10 ಹಣ ಮಾತ್ರ ಹೂಳು ತೆಗೆಯುವ ಕಾರ್ಯಕ್ಕೆ ವಿನಿಯೋಗಿಸಿ ಇನ್ನುಳಿದ ಹಣ ಕೆರೆ ಸೌಂದರ್ಯೀಕರಣ, ಕಾಲುವೆ, ಕಲ್ಲು ಕಟ್ಟುವ ಕಾರ್ಯಕ್ಕೆ ವಿನಿಯೋಗವಾಗುತ್ತದೆ. ಮೊದಲು ಕೆರೆಯ ಹೂಳು ಸಂಪೂರ್ಣ ತೆಗೆಯುವುದು ಮುಖ್ಯ ಕೆಲಸವಾಗಬೇಕು. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕೃಷಿ ಪರಿಸರದಲ್ಲಿ ಮರ ಬೆಳೆಸುವ ಅಗತ್ಯವಿದೆ. ಇದನ್ನು 1984ರ ಎಂ.ಡಿ. ಸತೀಶ್ಚಂದ್ರನ್ ವರದಿ ಹೇಳಿದೆ. ಈಗ ಮರ ಕಾಯ್ದೆಯ ತಿದ್ದುಪಡಿ ಮೂಲಕ ರಾಜ್ಯದಲ್ಲಿ ಮರ ಬೆಳೆಸಲು ಹೆಚ್ಚಿನ ಅವಕಾಶ ದೊರಕಿದೆ. ಮರ ಬೆಳೆಸುವುದು ಕೃಷಿ, ಕೃಷಿಕರ ದೊಡ್ಡ ಲಾಭವಾಗುವಂತೆ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕು. ಬೆಳೆದವರಿಗೆ ಉತ್ತಮ ಬೆಲೆ ಸಿಕ್ಕರೆ ಪರಿಸರ ಸಂರಕ್ಷಣೆ ಜತೆಗೆ ಹಸಿರು ಅಭಿವೃದ್ಧಿಯೂ ಸಾಧ್ಯ. ಈ ಹಿಂದೆ ಆರಂಭವಾಗಿದ್ದ ಕೃಷಿ ಹೊಂಡ ನಿರ್ಮಾಣ, ಕೃಷಿ ಅರಣ್ಯ ಅಭಿವೃದ್ಧಿ ಚಟುವಟಿಕೆ ಪುನಃ ಮಹತ್ವ ಪಡೆಯಬೇಕು ಎಂದರು.

ಕಬ್ಬಿನ ಕ್ಷೇತ್ರಗಳಲ್ಲಿ ಕಬ್ಬಿನ ಗರಿ ಸುಡುವ ಕ್ರಮ ಬದಲಿಸಿ ಮಣ್ಣಿಗೆ ಸೇರಿಸಿ ಮಣ್ಣಿಗೆ ಸಾವಯವ ಹೆಚ್ಚಳಕ್ಕೆ ಒತ್ತು ನೀಡುವ ಮೂಲಕ ಕಬ್ಬಿನ ಬೆಳೆಯ ನೀರಿನ ಬಳಕೆ ಮಿತಗೊಳಿಸಬಹುದು. ಇದಕ್ಕೆ ಬೀದರ್ ಜಿಲ್ಲೆಯ ರೈತ ಮಾದರಿ ಅನುಸರಿಸಬೇಕು. ಅಧಿಕ ನೀರಾವರಿಯ ಮೂಲಕ ಲಕ್ಷಾಂತರ ಎಕರೆ ಭೂಮಿ ಸವುಳು ಜವುಳು ಸಮಸ್ಯೆಯಿಂದ ಬೆಳಗಾವಿ, ರಾಯಚೂರು, ಬಾಗಲಕೋಟೆ ಜಿಲ್ಲೆಯಲ್ಲಿ ಹಾಳಾಗಿದೆ. ನೀರಿನ ಮಿತ ಬಳಕೆ, ಮರ ಅಭಿವೃದ್ಧಿ ಮೂಲಕ ಇದಕ್ಕೆ ಪರಿಹಾರ ಸಾಧ್ಯವಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪ್ರದೇಶದಲ್ಲಿ ಕೆರೆಗಳ ಹೂಳನ್ನು ಆಳಕ್ಕೆ ತೆಗೆಯುವ ಮೂಲಕ ಜಲ ಸಂರಕ್ಷಣೆ ಉತ್ತಮ ಕಾರ್ಯ ನಡೆದಿದೆಯೆಂದರು.

ರಾಜ್ಯದಲ್ಲಿ 39,173, ಕೆರೆಗಳು ಇವೆ. ವಿಕೇಂದ್ರೀಕೃತ ನೀರಾವರಿಯ ಅತ್ಯುತ್ತಮ ಈ ವ್ಯವಸ್ಥೆ ಬಿದ್ದ ಹನಿಯನ್ನು ಬಿದ್ದಲ್ಲಿ ಉಳಿಸಿ ಅಂತರ್ಜಲ ಮಟ್ಟ ಹೆಚ್ಚಿಸಲು ನೆರವಾಗುತ್ತದೆ. ಕೆರೆಗಳಿಗೆ ಮರುಜೀವ ನೀಡುವ ಕಾರ್ಯ ಎಲ್ಲೆಡೆ ನಡೆಯಬೇಕು. ಮಲೆನಾಡಿನಲ್ಲಿ ಕೆರೆಗಳ ಗಾತ್ರ ಚಿಕ್ಕದು, ಒರತೆ ಕೆರೆಯೆಂಬ ಇವು ಯಾವ ನೀರಾವರಿ ಯೋಜನೆಗಳಿಲ್ಲದ ಇಲ್ಲಿನ ತೋಟ, ನದಿ ಉಳಿಸಲು ನೆರವಾಗುತ್ತಿವೆ. ಪಶ್ಚಿಮ ಘಟ್ಟದ ಈ ಪ್ರದೇಶದಲ್ಲಿ ನದಿಗಳು ಜನಿಸಿವೆ. ಇಲ್ಲಿನ ಕೆರೆ ಉಳಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡಬೇಕೆಂದು ಕಳವೆ ಹೇಳಿದರು. ಉಪನ್ಯಾಸ ನಂತರ ಚರ್ಚೆ ನಡೆಸಿದರು.

ಶಿರಸಿ ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ್, ಕಾರವಾರ ಶಾಸಕ ಸತೀಶ್ ಸೈಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾoವ್ಕರ್, ಕಾಂಗ್ರೆಸ್ ಧುರೀಣ ಸಿ.ಎಫ್. ನಾಯ್ಕ್, ಬಸವರಾಜ್ ದೊಡ್ಮನಿ, ಬಿ. ಶಿವಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು, ಕರ್ನಾಟಕ ಅರಣ್ಯ ಇಲಾಖೆಯ ಶಿರಸಿ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ, ಉಪ ವಲಯ ಅರಣ್ಯಾಧಿಕಾರಿ ಎಂ.ಆರ್. ನಾಯ್ಕ್, ಕಳವೆ ಗ್ರಾಮದ ಹಿರಿಯರಾದ ಮಂಜುನಾಥ ಭಟ್, ಈರಾ ನಾರಾಯಣ ಗೌಡ, ಶ್ರೀಧರ ಭಟ್, ನಾಗರಾಜ್ ಭಟ್, ಮಹೇಶ ಗೌಡ ಸೇರಿದಂತೆ ಗ್ರಾಮದ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share this article