ಕಾಶಪ್ಪನವರ ಮನೆಗೆ ಸಚಿವ ಶಿವಾನಂದ ದಿಢೀರ್‌ ಭೇಟಿ

KannadaprabhaNewsNetwork | Published : Apr 5, 2024 1:02 AM

ಸಾರಾಂಶ

ಪಕ್ಷದಲ್ಲಿ ಎಲ್ಲರೂ ಟಿಕೆಟ್‌ ಕೇಳುವುದು ಸಹಜ. ಆದರೆ, ಪಕ್ಷ ಟಿಕೆಟ್‌ ನೀಡಿದವರ ಪರ ನಿಂತು ಗೆಲ್ಲಿಸುವುದು ನಮ್ಮ ಕರ್ತವ್ಯ.

ಕನ್ನಡಪ್ರಭ ವಾರ್ತೆ ಇಳಕಲ್ಲ

ಭಿನ್ನಾಭಿಪ್ರಾಯಗಳು, ಮನಸ್ತಾಪಗಳು ಎಲ್ಲ ಪಕ್ಷಗಳಲ್ಲಿ ಇರುವುದು ಸಹಜ. ಆದರೆ, ನಮ್ಮಲ್ಲಿ ಯಾವುದೇ ಮನಸ್ತಾಪ ಇಲ್ಲ. ಅದು ಮುಗಿದ ಅಧ್ಯಾಯ. ಈಗ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಶಾಸಕ ವಿಜಯಾನಂದ ಕಾಶಪ್ಪನವರ ಮನೆಗೆ ಗುರುವಾರ ದಿಢೀರ್ ಭೇಟಿ ನೀಡಿದ ಸಚಿವರು, ಲೋಕಸಭೆ ಚುನಾವಣೆಯ ಪ್ರಚಾರ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿದರು. ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ಈ ಬಾರಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಪಕ್ಷದಲ್ಲಿ ಎಲ್ಲರೂ ಟಿಕೆಟ್‌ ಕೇಳುವುದು ಸಹಜ. ಆದರೆ, ಪಕ್ಷ ಟಿಕೆಟ್‌ ನೀಡಿದವರ ಪರ ನಿಂತು ಗೆಲ್ಲಿಸುವುದು ನಮ್ಮ ಕರ್ತವ್ಯ. ಅದು ಪಕ್ಷದ ಸಿದ್ಧಾಂತ. ನನ್ನ ಪತ್ನಿ ವೀಣಾ ಕಾಶಪ್ಪನವರು ಸಹ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಸಹೋದರಿ ಸಂಯುಕ್ತಾ ಶಿವಾನಂದ ಪಾಟೀಲ ಸಹ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಪಕ್ಷದ ಹಿರಿಯರು, ಮುಖಂಡರು ಚರ್ಚಿಸಿ ಸಂಯುಕ್ತಾ ಪಾಟೀಲರಿಗೆ ಟಿಕೆಟ್‌ ನೀಡಿದೆ. ಅವರ ಗೆಲುವಿಗೆ ಎಲ್ಲರೂ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಈ ಬಾರಿ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಕಾಂಗ್ರಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರ ಪರ ಕಾಂಗ್ರೆಸ್‌ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಾಗಿ ಪ್ರಚಾರ ಮಾಡುತ್ತೇವೆ. ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ಪಡೆದು, ಸಂಯುಕ್ತಾ ಪಾಟೀಲರನ್ನು ಸಂಸತ್ತಿಗೆ ಕಳಿಸೋಣ ಎಂದು ಕಾಶಪ್ಪನವರ ಕರೆ ನೀಡಿದರು.

----------

ಕಾಂಗ್ರೆಸ್‌ ಬಂಡಾಯ ಶಮನ?

ಈ ಬಾರಿಯ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್‌ ತಮಗೆ ಸಿಗುತ್ತದೆ ಎಂದು ಭಾರೀ ನಿರೀಕ್ಷೆಯಲ್ಲಿದ್ದ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರಿಗೆ ಹೈಕಮಾಂಡ್‌ ಟಿಕೆಟ್‌ ಸಿಗದ್ದರಿಂದ ತೀವ್ರ ನಿರಾಸೆಗೊಂಡಿದ್ದರು. ಇದರಿಂದಾಗಿ ಅವರು ತಮ್ಮ ಬೆಂಬಲಿಗರ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿಯೂ ಹೇಳಿದ್ದರು. ಆದರೂ ಕಾಂಗ್ರೆಸ್‌ ಹೈಕಮಾಂಡ್‌ ಸಂಯುಕ್ತಾ ಪಾಟೀಲ ಅವರಿಗೆ ನೀಡಿದ ಟಿಕೆಟ್‌ ಅನ್ನು ಬದಲಿಸಲಿಲ್ಲ. ಇದರ ನಡುವೆ ಈಗ ಸಚಿವ ಶಿವಾನಂದ ಪಾಟೀಲ ಅವರು ಕೂಡ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಮನೆಗೆ ಭೇಟಿ ನೀಡಿ ಮಾತುಕತೆ ಕೂಡ ನಡೆಸಿದ್ದಾರೆ. ಇವೆಲ್ಲವನ್ನು ನೋಡಿದರೆ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಬಂಡಾಯ ಶಮನವಾಯಿತೇ ಎಂಬ ಪ್ರಶ್ನೆ ಕೂಡ ಈಗ ಒಡಮೂಡಿದೆ.

Share this article