ಸಚಿವ ಎಸ್ಸೆಸ್ಸೆಂ, ಶಾಸಕ ಹರೀಶ ದೂಡಾ ವಾಗ್ವಾದ!

KannadaprabhaNewsNetwork | Published : Mar 6, 2024 2:22 AM

ಸಾರಾಂಶ

ಪ್ರಾಧಿಕಾರದ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ನಡೆದಿದ್ದ ವೇಳೆ ಹರಿಹರ ಶಾಸಕ ಬಿ.ಪಿ.ಹರೀಶ ಮಧ್ಯೆ ಏರುಧ್ವನಿ, ಏಕವಚನದಲ್ಲಿ ಪರಸ್ಪರರಿಗೆ ವಾಗ್ದಾಳಿ ನಡೆಸಿದ ಘಟನೆ ನಡೆದಿದ್ದು, ಇದರಿಂದಾಗಿ ಸಭೆಯಲ್ಲಿ ತೀವ್ರ ಆತಂಕ ಮನೆ ಮಾಡಿತ್ತು. ಅಕ್ರಮವಾಗಿ ಡೋರ್‌ ನಂಬರ್ ನೀಡಿದ್ದು, ಲೇಔಟ್‌ ಫೈನಲ್ ಮಾಡಿದ್ದೀರಿ. ಯಾರನ್ನು ಕೇಳಿ ಮಾಡಿದ್ದೀರಿ. ತಕ್ಷಣ ಅವುಗಳ ವಾಪಸ್‌ ಪಡೆಯಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಮಧ್ಯೆ ತೀವ್ರ ವಾಕ್ಸಮರವಾದ ಘಟನೆ ನಗರದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದಿದೆ.

ನಗರದ ದೂಡಾ ಕಚೇರಿಯಲ್ಲಿ ಪ್ರಾಧಿಕಾರದ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ನಡೆದಿದ್ದ ವೇಳೆ ಹರಿಹರ ಶಾಸಕ ಬಿ.ಪಿ.ಹರೀಶ ಮಧ್ಯೆ ಏರುಧ್ವನಿ, ಏಕವಚನದಲ್ಲಿ ಪರಸ್ಪರರಿಗೆ ವಾಗ್ದಾಳಿ ನಡೆಸಿದ ಘಟನೆ ನಡೆದಿದ್ದು, ಇದರಿಂದಾಗಿ ಸಭೆಯಲ್ಲಿ ತೀವ್ರ ಆತಂಕ ಮನೆ ಮಾಡಿತ್ತು.

ಅಕ್ರಮವಾಗಿ ಡೋರ್‌ ನಂಬರ್ ನೀಡಿದ್ದು, ಲೇಔಟ್‌ ಫೈನಲ್ ಮಾಡಿದ್ದೀರಿ. ಯಾರನ್ನು ಕೇಳಿ ಮಾಡಿದ್ದೀರಿ. ತಕ್ಷಣ ಅವುಗಳ ವಾಪಸ್‌ ಪಡೆಯಬೇಕು. ಭ್ರಷ್ಟಾಚಾರದಲ್ಲಿ ನೀವೂ ಪಾಲುದಾರರಾಗಿದ್ದೀರಿ. ಯಾವುದೇ ಕಾರಣಕ್ಕೂ ಲೇ ಔಟ್‌ಗೆ ಅನುಮತಿ ಕೊಡಬಾರದು. ಡೋರ್ ನಂಬರ್ ನೀಡಬಾರದು ಎಂದು ದೂಡಾ ಅಧ್ಯಕ್ಷ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ರಿಗೆ ತಾಕೀತು ಮಾಡಿದರು.

ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಮಾತನಾಡಿ, ಡೋರ್ ನಂಬರ್ ನೀಡುವುದು ಅಲ್ಲಿನ ನಗರಸಭೆಯೇ ಹೊರತು, ದೂಡಾ ಅಲ್ಲ. ಒಂದು ವೇಳೆ ಯಾವುದೇ ಲೇ ಔಟ್, ಡೋರ್ ನಂಬರ್ ಬಗ್ಗೆ ಅನುಮಾನವಿದ್ದರೆ ಲಿಖಿತವಾಗಿ, ನಿರ್ದಿಷ್ಟವಾಗಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಐದು ವರ್ಷ ನೀವು (ಬಿಜೆಪಿಯವರು) ಲೂಟಿ ಹೊಡೆದುಕೊಂಡು ಹೋದವರು ಎಂದು ಹರಿಹಾಯ್ದರು. ಆಗ ಶಾಸಕ ಹರೀಶ, ಬಂದಾನ, ಗಿಂದಾನ ಅಂತೆಲ್ಲಾ ಏಕವಚನದಲ್ಲಿ ಮಾತನಾಡಿದರೆ ಸರಿ ಇರಲ್ಲವೆಂದು ತಿರುಗೇಟು ನೀಡಿದರು. ಆಗ ಸಚಿವ ಎಸ್ಸೆಸ್ಸೆಂ ನೀನು ಗಲಾಟೆ ಮಾಡೋಕೆ ಅಂತಾನೇ ಬಂದಿದ್ದೀಯಾ ಎಂದು ಪ್ರಶ್ನಿಸಿದರು.

ಅದಕ್ಕೆ ಶಾಸಕ ಹರೀಶ, ಹೌದು, ನ್ಯಾಯಯುತವಾಗಿ ಗಲಾಟೆ ಮಾಡಲು ಬಂದಿದ್ದೇನೆಂದರು. ಕಡೆಗೆ, ದೂಡಾದಿಂದ ಶಾಸಕರ ಗಮನಕ್ಕೆ ತರದೇ ಅಕ್ರಮವಾಗಿ ಹೇಗೆ ಲೇಔಟ್ ಗೆ ಅಪ್ರೂವಲ್ ಕೊಟ್ಟಿದ್ದೀರಿ, ನಾನೂ ದೂಡಾ ಸದಸ್ಯ ಎಂದರು. ಆಗ ಡಿಸಿ ಡಾ.ವೆಂಕಟೇಶ, ಹರಿಹರದ ವಿಚಾರ ಬಂದರೆ ಮಾತನಾಡಿ ಅಂದಿದ್ದರಿಂದ ಆಕ್ರೋಶಗೊಂಡ ಶಾಸಕ ಹರೀಶ ನಾನು ಇಡೀ ಪ್ರಾಧಿಕಾರಕ್ಕೆ ಸದಸ್ಯ. ಹರಿಹರ ನಗರಕ್ಕಷ್ಟೇ ಅಲ್ಲ ಎಂಬುದಾಗಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದೇ ಇಷ್ಟೆಲ್ಲಾ ಗದ್ದಲ, ವಾಗ್ವಾದಕ್ಕೆ ಆಸ್ಪದ ಮಾಡಿಕೊಟ್ಟಿತು.

ದೂಡಾ ಅಧ್ಯಕ್ಷ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಪಾಲಿಕೆ ಸದಸ್ಯ ಕೆ.ಚಮನ್ ಸಾಬ್‌ ಸೇರಿ ಪ್ರಾಧಿಕಾರದ ಅಧಿಕಾರಿ, ಸಿಬ್ಬಂದಿ ಇದ್ದರು. ಜಿಲ್ಲಾಧಿಕಾರಿ ನಡೆ ನೋಡಿದರೆ ನಾಚಿಕೆಯಾಗತ್ತೆ: ಬಿ.ಪಿ.ಹರೀಶ

ದೂಡಾ ಅಧ್ಯಕ್ಷರೂ ಆದ ದಾವಣಗೆರೆ ಜಿಲ್ಲಾಧಿಕಾರಿ ನಡೆ ನೋಡಿದರೆ ನಾಚಿಕೆಯಾಗುತ್ತಿದೆ. ಒಬ್ಬ ಐಎಎಸ್ ಅಧಿಕಾರಿಯಾಗಿ ಶ್ರೀಮಂತರ ಮನೆಯ ಸೇವಕನಂತೆ ವರ್ತಿಸುತ್ತಿದ್ದಾರೆ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ಆಕ್ರೋಶ ಹೊರ ಹಾಕಿದರು.

ನಗರದ ದೂಡಾ ಕಚೇರಿಯ ಸಭೆಯ ಗಲಾಟೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ನಾನು ಹೋರಾಟ ಮಾಡಿಕೊಂಡೇ ಬೆಳೆದಿದ್ದೇನೆ. ಯಾರಿಗೂ ಹೆದರುವವನೂ ನಾನಲ್ಲ. ಫೆ.9ರಂದು ದೂಡಾದಲ್ಲಿ ಭ್ರಷ್ಟಾಚಾರ ನಡೆದಿದೆ. ಕಾರ್ಯಗಳ ಸಭೆಯ ಗಮನಕ್ಕೆ ತರುವಂತೆ ಹೇಳಿದ್ದೆ. ನಾನು ಈ ಬಗ್ಗೆ ಪತ್ರವನ್ನೂ ನೀಡಿದ್ದೆ. ಆದರೆ, ಪ್ಲಾನಿಂಗ್‌ಗೆ ಅಪ್ರೂವಲ್ ನೀಡಿದ್ದಾರೆ. ಪ್ರಾಧಿಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಪ್ರಾಧಿಕಾರದ ಭ್ರಷ್ಟಾಚಾರಕ್ಕೆ ಜಿಲ್ಲಾಧಿಕಾರಿಯೇ ಕಾರಣವಾಗಿದ್ದು, ಭ್ರಷ್ಟಾಚಾರದ ಮೂಲಕ ಜನರ ರಕ್ತ ಕುಡಿಯುತ್ತಿದ್ದಾರೆ. ದೂಡಾದ ಕೆಲಸ ಮನೆಯ ವ್ಯವಹಾರದಂತೆ ನೋಡಿಕೊಂಡರು. ಇಂತಹವರ ವಿರುದ್ಧ ಬಿಜೆಪಿಯ ಪ್ರಮುಖರ ಜೊತೆಗೆ ಚರ್ಚಿಸಿ, ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸುತ್ತೇವೆ ಎಂದು ಹರೀಶ ತಿಳಿಸಿದರು.

Share this article