ಗ್ಯಾರಂಟಿ ಕಡಿತಕ್ಕೆ ಒತ್ತಡ ತೀವ್ರ: ಸಂಪುಟದ ಹಿರಿಯ ಸದಸ್ಯರ ನಡುವೆಯೇ ಭಿನ್ನಾಭಿಪ್ರಾಯ

KannadaprabhaNewsNetwork | Updated : Aug 15 2024, 06:44 AM IST

ಸಾರಾಂಶ

ರಾಜ್ಯದ ಹಿರಿಯ ಸಚಿವರು ಕಾಂಗ್ರೆಸ್‌ ವರಿಷ್ಠರನ್ನು ಭೇಟಿ ಮಾಡಿ ಗ್ಯಾರಂಟಿ ಯೋಜನೆಗಳ ದುರುಪಯೋಗ ತಡೆಯುವ ನೆಪದಲ್ಲಿ ಗ್ಯಾರಂಟಿಗಳ ಪರಿಷ್ಕರಣೆಗೆ ಸಲಹೆ ನೀಡಿರುವ ಬೆನ್ನಲ್ಲೇ, ‘ಗ್ಯಾರಂಟಿಗಳ ಪರಿಷ್ಕರಣೆ’ ಬಗ್ಗೆ ಪರ-ವಿರೋಧಗಳ ತೀವ್ರ 

  ಬೆಂಗಳೂರು :  ರಾಜ್ಯದ ಹಿರಿಯ ಸಚಿವರು ಕಾಂಗ್ರೆಸ್‌ ವರಿಷ್ಠರನ್ನು ಭೇಟಿ ಮಾಡಿ ಗ್ಯಾರಂಟಿ ಯೋಜನೆಗಳ ದುರುಪಯೋಗ ತಡೆಯುವ ನೆಪದಲ್ಲಿ ಗ್ಯಾರಂಟಿಗಳ ಪರಿಷ್ಕರಣೆಗೆ ಸಲಹೆ ನೀಡಿರುವ ಬೆನ್ನಲ್ಲೇ, ‘ಗ್ಯಾರಂಟಿಗಳ ಪರಿಷ್ಕರಣೆ’ ಬಗ್ಗೆ ಪರ-ವಿರೋಧಗಳ ತೀವ್ರಗೊಂಡಿದ್ದು, ಸಚಿವ ಸಂಪುಟದ ಹಿರಿಯ ಸದಸ್ಯರ ನಡುವೆಯೇ ಭಿನ್ನಾಭಿಪ್ರಾಯ ಉಂಟಾಗಿದೆ.

ಗ್ಯಾರಂಟಿಗಳಿಂದ ಕ್ಷೇತ್ರಗಳಿಗೆ ಅನುದಾನ ಕೊರತೆಯಾಗುತ್ತಿದೆ ಎಂಬ ಶಾಸಕರ ಅಸಮಾಧಾನ, ಜತೆಗೆ ಗ್ಯಾರಂಟಿಗಳು ಬಡವರಿಗೆ ಬದಲಿಗೆ ಶ್ರೀಮಂತರ ಪಾಲಾಗುತ್ತಿದೆ ಎಂಬ ಸಾರ್ವಜನಿಕರ ಅಂಬೋಣ ಹಾಗೂ ಆಗ್ರಹವನ್ನು ಹೈಕಮಾಂಡ್‌ಗೆ ಮುಟ್ಟಿಸುವ ಉದ್ದೇಶದಿಂದ ಹಿರಿಯ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಕೆ.ಎಚ್.ಮುನಿಯಪ್ಪ ಅವರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಅವರಿಗೆ ಗ್ಯಾರಂಟಿಗಳ ಪರಿಷ್ಕರಣೆಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇದರ ಬೆನ್ನಲ್ಲೇ ಸಚಿವ ಸಂಪುಟ ಹಿರಿಯ ಸದಸ್ಯರ ನಡುವೆ ತೀವ್ರ ಪರ-ವಿರೋಧ ಚರ್ಚೆಗಳು ಶುರುವಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಈಶ್ವರ್‌ ಖಂಡ್ರೆ, ಡಾ.ಜಿ.ಪರಮೇಶ್ವರ್‌ ಇಂತಹ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸತೀಶ್ ಜಾರಕಿಹೊಳಿ ಹಾಗೂ ಕೆ.ಎಚ್‌.ಮುನಿಯಪ್ಪ ಅವರು ಯೋಜನೆ ದುರುಪಯೋಗ ತಡೆಯಲು ಪರಿಷ್ಕರಣೆ ಅಗತ್ಯ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಇದನ್ನು ಪರೋಕ್ಷವಾಗಿ ಎಂ.ಬಿ.ಪಾಟೀಲ್‌ ಕೂಡ ಬೆಂಬಲಿಸಿದ್ದಾರೆ.ಹೀಗಾಗಿ ಗ್ಯಾರಂಟಿಗಳ ಪರಿಷ್ಕರಣೆ ಅಥವಾ ಪುನರ್‌ ಪರಿಶೀಲನೆ ಎಂಬ ವಿಷಯವು ಸಚಿವ ಸಂಪುಟದಲ್ಲಿ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಿದೆ.

ಸಾರ್ವಜನಿಕರ ಅಭಿಪ್ರಾಯ ತಿಳಿಸಿದ್ದೇವೆ:

ಈ ಬಗ್ಗೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ‘ದೆಹಲಿಯ ವರಿಷ್ಠರಿಗೆ ಗ್ಯಾರಂಟಿಗಳ ಬಗ್ಗೆ ಜನರಿಗೆ ಇರುವ ಅಸಮಾಧಾನವನ್ನು ಮುಟ್ಟಿಸಿದ್ದೇವೆ. ಯೋಜನೆಗಳ ಪರಿಷ್ಕರಣೆ ಅಥವಾ ಕತ್ತರಿ ಪ್ರಯೋಗಕ್ಕೆ ನಾವು ತಿಳಿಸಿಲ್ಲ. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಮಾತ್ರ ಯೋಜನೆ ನೀಡಿ. ಶ್ರೀಮಂತರನ್ನು ಯೋಜನೆಯಿಂದ ಹೊರಗಿಡಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ ಎಂಬುದನ್ನಷ್ಟೇ ಗಮನಕ್ಕೆ ತಂದಿದ್ದೇವೆ. ಹೋಟೆಲ್ಗಳಲ್ಲಿ, ಕೆಲಸಗಾರರು ಸೇರಿದಂತೆ ಎಲ್ಲೆಡೆಯೂ ಇದೇ ಚರ್ಚೆಯಾಗುತ್ತಿದೆ. 

ಶ್ರೀಮಂತರಿಗೆ ಯಾಕೆ ನೀಡುತ್ತಿದ್ದೀರಿ? ಬಡವರಿಗೆ ನೀಡಿ ಎಂದು ಪ್ರತಿಪಕ್ಷಗಳು ಕೂಡಾ ಕೇಳಿವೆ. ಇದನ್ನು ವರಿಷ್ಠರ ಗಮನಕ್ಕೆ ತಂದಿದ್ದೇವೆ ಎಂದರು.ಯೋಜನೆಗಳ ಪರಿಷ್ಕರಣೆಯಿಂದ ಸರ್ಕಾರದಿಂದ ಜನಪ್ರಿಯತೆ ಹೆಚ್ಚಲಿದೆ. ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲು ಯಾರು ಹೇಳಿದ್ದು? ಅದನ್ನು ನಾವು ಸ್ಥಗಿತಗೊಳಿಸುವುದಿಲ್ಲ. ಇದರ ಬಗ್ಗೆ ಸಚಿವ ಸಂಪುಟ ಹಾಗೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆದಿಲ್ಲ. ಇದರ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಕತ್ತರಿ ಇಲ್ಲ:

ಈ ಬಗ್ಗೆ ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ‘ಯಾವುದೇ ಕಾರಣಕ್ಕೂ ಗ್ಯಾರಂಟಿಗೆ ಕತ್ತರಿ ಹಾಕಲ್ಲ. ಬಿಜೆಪಿಯವರು ನೂರು ಜನ್ಮ ಎತ್ತಿ ಬಂದರೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವುದು ಶುದ್ಧ ಸುಳ್ಳು’ ಎಂದಿದ್ದಾರೆ.ಇನ್ನು ‘ತೆರಿಗೆ ಪಾವತಿದಾರರೂ ಕೂಡ ಗ್ಯಾರಂಟಿಗಳನ್ನು ಬಳಸಿಕೊಳ್ಳುತ್ತಿದ್ದಾರೆಂಬ ಆರೋಪಗಳ ಬಗ್ಗೆ ಪರಿಶೀಲಿಸಲಾಗುವುದು. ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡುವಂತಹ ಸುಧಾರಣಾ ಕ್ರಮಗಳ ಬಗ್ಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಮೂಲಕ ಆಲೋಚನೆ ನಡೆಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಇಂದಿರಾಗಾಂಧಿ ಅವರು ವೃದ್ಧಾಪ್ಯ, ವಿಧವಾ ವೇತನ, ಬ್ಯಾಂಕ್‌ ರಾಷ್ಟ್ರೀಕರಣ, ಉಳುವವನಿಗೆ ಭೂಮಿ ಯೋಜನೆ ಜಾರಿಗೆ ತಂದರು. ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ರೈತರ ಪಂಪ್‌ಸೆಟ್‌ಗೆ 10 ಎಚ್‌ಪಿ ಉಚಿತ ವಿದ್ಯುತ್‌, ಕೃಷ್ಣ ಅವರ ಕಾಲದಲ್ಲಿ ಸ್ತ್ರೀಶಕ್ತಿ ಸಂಘ ಯೋಜನೆ, ಬಡವರಿಗೆ ನಿವೇಶನ, ಮನೆ ನೀಡುವುದು ಹೀಗೆ ನೂರಾರು ಯೋಜನೆ ತರಲಾಗಿದೆ. ಇದರಲ್ಲಿ ಯಾವುದಾದರೂ ಒಂದನ್ನಾದರೂ ನಿಲ್ಲಿಸಲಾಗಿದೆಯೇ ಎಂದು ಪ್ರಶ್ನಿಸಿದರು.ಇನ್ನು ಗ್ಯಾರಂಟಿಗಳಿಂದ ಯಾವ ಶಾಸಕರಿಗೂ ಅನುದಾನ ಕೊರತೆ ಆಗಿಲ್ಲ. ಗ್ಯಾರಂಟಿಗಳಿಗೆ ಬಜೆಟ್‌ನಲ್ಲೇ ಅನುದಾನ ಮೀಸಲಿಡಲಾಗಿತ್ತು. ಅಶೋಕ್‌ ಅವರು ಗ್ಯಾರಂಟಿಗಳ ಬಗ್ಗೆ ಅಸಮಾಧಾನ ಇದ್ದರೆ ತಮ್ಮ ಕಾರ್ಯಕರ್ತರಿಗೆ ಯೋಜನೆ ಪ್ರಯೋಜನ ಪಡೆಯದಂತೆ ಸಲಹೆ ನೀಡಲಿ ಎಂದು ಟಾಂಗ್‌ ನೀಡಿದರು.

ಯಾವುದೇ ಬದಲಾವಣೆಯಿಲ್ಲ:

ಸಚಿವ ಈಶ್ವರ್ ಖಂಡ್ರೆ, ಗ್ಯಾರಂಟಿ ಯೋಜನೆಗಳಿಂದಾಗಿ ಹಣದ ಹರಿವು ನಿರಂತರವಾಗಿದ್ದು, ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದೆ. ಇದು ರಾಜ್ಯದ ಪ್ರಗತಿಗೂ ಪರೋಕ್ಷವಾಗಿ ಪ್ರಯೋಜನವಾಗುತ್ತಿದೆ. ಹೀಗಾಗಿ ಗ್ಯಾರಂಟಿ ಯೋಜನೆ ಯಾವುದೇ ಬದಲಾವಣೆ ಇಲ್ಲದೆ, ಪ್ರಸಕ್ತ ಸ್ವರೂಪದಲ್ಲಿ ಮುಂದುವರೆಯುತ್ತದೆ ಎಂದರು.

ಇಂತಹ ಯಾವುದೇ ಚರ್ಚೆಯಾಗಿಲ್ಲ:

ಗ್ಯಾರಂಟಿ ಪರಿಷ್ಕರಣೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಡಾ.ಜಿ.ಪರಮೇಶ್ವರ್, ‘ಯೋಜನೆಗಳ ಪರಿಷ್ಕರಣೆ ಬಗ್ಗೆ ಹೊರಗೆ ಚರ್ಚೆಗಳಾಗುತ್ತಿವೆ. ಆದರೆ, ಪಕ್ಷದ ವೇದಿಕೆಯಲ್ಲಿ, ಸರ್ಕಾರದ ಹಂತದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಶಾಸಕರು, ಕಾರ್ಯಕರ್ತರು ಸಾರ್ವಜನಿಕವಾಗಿ ಅಲ್ಲಲ್ಲಿ ಮಾತನಾಡಿರಬಹುದಷ್ಟೇ. ಅದಕ್ಕೂ ನಮ್ಮ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಸರ್ಕಾರ ಪರಿಷ್ಕರಣೆಗೆ ಉದ್ದೇಶಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಧು ಬಂಗಾರಪ್ಪ, ಶಿವರಾಜ್‌ ತಂಗಡಗಿ ಸೇರಿದಂತೆ ಹಲವು ಸದಸ್ಯರು ಇದನ್ನೇ ಪುನರುಚ್ಚರಿಸಿದ್ದಾರೆ.

==ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷದ ಬದ್ಧತೆ. ಹೀಗಾಗಿ ಅವುಗಳು ಮುಂದುವರೆಯುತ್ತವೆ. ರಾಜ್ಯದಲ್ಲಿ ಶೇ.82 ರಷ್ಟು ಬಿಪಿಎಲ್‌ ಕುಟುಂಬಗಳಿವೆ. ಈ ಗ್ಯಾರಂಟಿಗಳ ಪ್ರಯೋಜನವನ್ನು ಬಿಪಿಎಲ್ ಕುಟುಂಬಗಳಿಗೆ ಮಾತ್ರ ನೀಡಬೇಕು ಎಂಬ ಬಗ್ಗೆ ಪರಾಮರ್ಶೆ ಮಾಡಹುದು.

ಎಂ.ಬಿ. ಪಾಟೀಲ್‌, ಬೃಹತ್ ಕೈಗಾರಿಕೆ ಸಚಿವ

Share this article